ಶಿಸ್ತು: ಕಾರ್ಯಕರ್ತರಿಗೆ ಗೌಡರ ಆದೇಶ

ಮಂಗಳವಾರ, ಜೂಲೈ 23, 2019
20 °C

ಶಿಸ್ತು: ಕಾರ್ಯಕರ್ತರಿಗೆ ಗೌಡರ ಆದೇಶ

Published:
Updated:

ಹುಬ್ಬಳ್ಳಿ: `ಪಕ್ಷದ ಶಿಸ್ತನ್ನು ಪಾಲಿಸಲಾಗದೆ ಬೇರೆ ಪಕ್ಷಗಳಿಗೆ ಹೋಗುವವರನ್ನು ತಡೆಯಲಾಗದು. ಹಾಗೆ ಹೋಗುವವರ ಕುರಿತು ಯಾರೂ ಚಿಂತೆ ಮಾಡುವುದು ಬೇಡ. ಆದರೆ ಪಕ್ಷದಲ್ಲಿದ್ದು ಶಿಸ್ತು ಉಲ್ಲಂಘನೆ ಮಾಡುವವರನ್ನು ಸಹಿಸಲಾಗದು. ಅಂಥವರನ್ನು ಪಕ್ಷದಿಂದ ತಕ್ಷಣ ಹೊರಹಾಕಲಾಗುವುದು~ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಎಚ್ಚರಿಕೆ ನೀಡಿದರು.ನಗರದಲ್ಲಿ ಭಾನುವಾರ ನಡೆದ ಪಕ್ಷದ ಮುಂಬೈ-ಕರ್ನಾಟಕ ಭಾಗದ ಕೋರ್ ಕಮಿಟಿ ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.ಪಕ್ಷಕ್ಕೆ ಸಂಬಂಧಿಸಿ ಈವರೆಗೆ ಆದ ಪ್ರಸಂಗಗಳನ್ನು ಮರೆತು ಮುಂದಿನ ದಾರಿಯ ಬಗ್ಗೆ ಯೋಚಿಸಬೇಕಾಗಿದೆ. ಜೆಡಿಎಸ್‌ಗೆ ಹೈದರಾಬಾದ್-ಕರ್ನಾಟಕ ಹಾಗೂ ಮುಂಬೈ-ಕರ್ನಾಟಕ ಭಾಗದಲ್ಲಿ ಯಾಕೆ ಶಕ್ತಿ ಇಲ್ಲ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದ ಅವರು, ಈ ಹಿಂದೆ ಜನತಾದಳ ಇಬ್ಭಾಗವಾದಾಗ ಮೂಲಭೂತವಾದಿ ಗಳೊಂದಿಗೆ ಸೇರುವುದಿಲ್ಲ ಎಂದು ಗಟ್ಟಿ ನಿರ್ಧಾರ ಮಾಡಿ ನಮ್ಮಂದಿಗೆ ನಿಂತ ಅನೇಕರು ನಂತರ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ, ಆದರೆ ನಾವು ಬದಲಾಗಲಿಲ್ಲ ಎಂದು ಹೇಳಿದರು.`ಜೆಡಿಎಸ್ ಪಕ್ಷವನ್ನು ಮುಗಿಸಲು ಹಲವರು ಅನೇಕ ಬಾರಿ ಪ್ರಯತ್ನ ನಡೆಸಿದ್ದಾರೆ. ಆದರೆ ಅದು ಸಾಧ್ಯವಾಗ ಲಿಲ್ಲ. ನಮ್ಮಲ್ಲಿ ಜಾತಿ ಇಲ್ಲ, ನಾಯಕ ರಷ್ಟೇ ಇದ್ದಾರೆ. ಯಾವ ಜಾತಿಯವರೂ ನಮ್ಮ ಕೈ ಬಿಟ್ಟಿಲ್ಲ. ನಮ್ಮ ಸೋಲಿಗೆ ನಾವೇ ಕಾರಣ. ಇದನ್ನು ತಿಳಿದುಕೊಂಡು ಕಾರ್ಯಕರ್ತರು ಕೆಲಸ ಮಾಡಬೇಕು, ಆತ್ಮವಿಮರ್ಶೆ ಮಾಡಿಕೊಳ್ಳಬೇಕು~ ಎಂದು ಅವರು ಹೇಳಿದರು.ಪಕ್ಷದ ಸಂಘಟನೆ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಈಗ ನಡೆಸುತ್ತಿರುವ ಹೋರಾಟ ತಮ್ಮ ಜೀವನದ ಅಂತಿಮ ಹೋರಾಟ ಎಂದು ಹೇಳಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಸನ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಲ್ಲ, ಹಾಸನದ ವೈದ್ಯಕೀಯ ಕಾಲೇಜು ಹಾಗೂ ಪಶು ವೈದ್ಯಕೀಯ ಕಾಲೇಜನ್ನು ಮುಚ್ಚಲು ಸರ್ಕಾರ ಹುನ್ನಾರ ನಡೆಸುತ್ತಿದೆ. ಇದನ್ನು ವಿರೋಧಿಸಿ ಜೂನ್ 22ರಂದು ಹಾಸನದಲ್ಲಿ ಧರಣಿ ನಡೆಸಲಾಗುವುದು ಎಂದು ಘೋಷಿಸಿದರು.ಭೂಕಬಳಿಕೆ ಹಿಂದಿನಿಂದಲೇ ನಡೆದುಕೊಂಡು ಬಂದ ಅಕ್ರಮ. ಆದರೆ ಈ ಅಕ್ರಮವನ್ನು ಯಡಿಯೂರಪ್ಪ ಈಗ ಸಂತಸದಿಂದ ಮಾಡುತ್ತಿದ್ದಾರೆ ಎಂದು ಆರೋಪಿಸಿದ ದೇವೇಗೌಡ,  ಕಪ್ಪು ಹಣಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಸಮಯ ಬಂದಾಗ ಮಾತನಾಡುವುದಾಗಿ ತಿಳಿಸಿದರು.ಕಾಂಗ್ರೆಸ್ ಪಕ್ಷದ `ಕಾಂಗ್ರೆಸ್ ನಡಿಗೆ ಜನರ ಕಡೆಗೆ~ ಕಾರ್ಯಕ್ರಮದ ಬಗ್ಗೆ ಲೇವಡಿಯಾಡಿದ ಅವರು, ಜನರ ಕಡೆಗೆ ಮೊದಲು ಹೆಜ್ಜೆ ಇಟ್ಟವರು ನಾವು, ಹಳ್ಳಿ ವಾಸ್ತವ್ಯ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದು ಜೆಡಿಎಸ್ ಎಂದರು.ಸಭೆಯ ನಿರ್ಣಯಗಳನ್ನು ಪ್ರಮೋದ ಅಗಡಿ ಮಂಡಿಸಿದರು. ರೈತರಿಗೆ ಸರಿಯಾದ ಸಮಯಕ್ಕೆ ಬೀಜ ಹಾಗೂ ಗೊಬ್ಬರವನ್ನು ಪೂರೈಸಬೇಕು, ನೆರೆ ಸಂತ್ರಸ್ತರಿಗೆ ನೀಡಬೇಕಾದ ಮನೆಗಳನ್ನು ಶೀಘ್ರ ಹಸ್ತಾಂತರ ಮಾಡಬೇಕು, ಬಡವರಿಗೆ ರೇಷನ್ ಕಾರ್ಡ್ ಮತ್ತಿತರ ಸೌಲಭ್ಯಗಳನ್ನು ತಕ್ಷಣ ನೀಡಬೇಕು, ಕೃಷಿ ಭೂಮಿಯನ್ನು ಹರಾಜು ಹಾಕಬಾರದು, ಹಾವೇರಿ ಗೋಲಿಬಾರ್‌ನಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಸಭೆ ಒತ್ತಾಯಿಸಿತು.ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ್, ಮುಂಬೈ ಕರ್ನಾಟಕ ಕೋರ್ ಕಮಿಟಿ ಅಧ್ಯಕ್ಷ ಎ.ಬಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಸುನೀಲ ಹೆಗಡೆ, ವೈ.ಎಸ್.ವಿ. ದತ್ತ, ಎಚ್.ಸಿ. ನೀರಾವರಿ, ಮಾಜಿ ಸಚಿವರಾದ ಪಿ.ಸಿ. ಸಿದ್ಧನಗೌಡರ, ಆಲ್ಕೋಡ್ ಹನುಮಂತಪ್ಪ, ಮುಖಂಡರಾದ ಎಂ.ಸಿ. ಮನಗೂಳಿ, ಬಿ.ಎಚ್. ಬನ್ನಿಕೋಡ, ಎನ್.ಎಚ್. ಕೋನರಡ್ಡಿ, ಫಿರ್ದೋಸ್ ಕೊಣ್ಣೂರ ಮತ್ತಿತರರು ಭಾಗವಹಿಸಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry