ಶುಕ್ರವಾರ, ಜೂನ್ 25, 2021
29 °C

ಶಿಸ್ತು ಕ್ರಮಕ್ಕೆ ಮುಂದಾದರೆ ಸಾಮೂಹಿಕ ರಜೆ; ಪೊಲೀಸರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿಟಿ ಸಿವಿಲ್ ನ್ಯಾಯಾಲಯದ ಬಳಿ ವಕೀಲರು ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಪೊಲೀಸ್ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸಲು ಮುಂದಾದರೆ ಸಾಮೂಹಿಕವಾಗಿ ರಜೆಯ ಮೇಲೆ ತೆರಳಲು ಪೊಲೀಸರು ನಿರ್ಧರಿಸಿದ್ದಾರೆ.ವಕೀಲರ ಮನವೊಲಿಕೆಗಾಗಿ ಸರ್ಕಾರ ತನಿಖೆ ನಡೆಸದೆ ಇಲಾಖೆಯ ಯಾವುದೇ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡರೆ ಡಿಸಿಪಿಯಿಂದ ಕಾನ್‌ಸ್ಟೇಬಲ್‌ವರೆಗಿನ ಎಲ್ಲ ಅಧಿಕಾರಿಗಳು ಸಾಮೂಹಿಕ ರಜೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ವಕೀಲರು, ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ಹಂತದ ಸಿಬ್ಬಂದಿ ಕೇಳುವ ಪ್ರಶ್ನೆಗಳಿಂದ ನಗರದ ಬಹುತೇಕ ಡಿಸಿಪಿಗಳು ಹಾಗೂ ಎಸಿಪಿಗಳು ಮುಜುಗರ ಅನುಭವಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಮತ್ತು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರನ್ನು ವರ್ಗಾವಣೆ ಮಾಡಬೇಕೆಂದು ಪಟ್ಟು ಹಿಡಿದಿರುವ ವಕೀಲರ ಸಂಘದ ಪದಾಧಿಕಾರಿಗಳು ಘಟನೆಯ ನೈತಿಕ ಹೊಣೆ ಹೊತ್ತು ಮೊದಲು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಪೊಲೀಸರು ಒತ್ತಾಯಿಸಿದ್ದಾರೆ.`ನ್ಯಾಯಾಲಯ ಕಟ್ಟಡದ ಹಿಂದಿನ ಪ್ರವೇಶ ದ್ವಾರದ ಬಳಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿರಲಿಲ್ಲ. 50ಕ್ಕೂ ಹೆಚ್ಚು ಕಿಡಿಗೇಡಿಗಳು ಪೊಲೀಸ್ ಸಮವಸ್ತ್ರ ಧರಿಸಿ ಮತ್ತು ಲಾಠಿಗಳನ್ನು ಹಿಡಿದು ಆ ಪ್ರವೇಶ ದ್ವಾರದ ಮೂಲಕ ನ್ಯಾಯಾಲಯದ ಆವರಣಕ್ಕೆ ಬಂದು ವಕೀಲರಿಗೆ ಥಳಿಸಿದ್ದಾರೆ. ಅಲ್ಲದೇ ವಕೀಲರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಘಟನೆ ನಡೆದ ದಿನ ಸ್ಥಳದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ವಿವಿಧ ಠಾಣೆಗಳ ಕಾನ್‌ಸ್ಟೇಬಲ್‌ಗಳು ಸಹ ಹಿರಿಯ ಅಧಿಕಾರಿಗಳಂತೆಯೇ ಅಭಿಪ್ರಾಯ ವ್ಯಕ್ತಪಡಿಸಿದ್ದು, `ಪೊಲೀಸ್ ಸಮವಸ್ತ್ರ ಧರಿಸಿ ನ್ಯಾಯಾಲಯ ಆವರಣಕ್ಕೆ ಬಂದಿದ್ದ ಆ ವ್ಯಕ್ತಿಗಳನ್ನು ಈವರೆಗೆ ಯಾವುದೇ ಠಾಣೆಗಳಲ್ಲಿ ನೋಡಿಲ್ಲ~ ಎಂದು ಹೇಳಿದ್ದಾರೆ.87 ಪ್ರಕರಣ: ವಕೀಲರ ದಾಂಧಲೆ ಸಂಬಂಧ ನಗರದ ಹಲಸೂರುಗೇಟ್ ಠಾಣೆಯಲ್ಲಿ ಮಂಗಳವಾರ ಮತ್ತೆ 15 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಘಟನೆ ಸಂಬಂಧ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 87ಕ್ಕೆ ಏರಿಕೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.