ಶಿಸ್ತು ಮೂಡಿಸುವುದೇ ಸಿಗ್ನಲ್ ದೀಪ?

7

ಶಿಸ್ತು ಮೂಡಿಸುವುದೇ ಸಿಗ್ನಲ್ ದೀಪ?

Published:
Updated:

ಬೀದರ್: ನಗರ ಬೆಳೆದಂತೆಲ್ಲಾ ಎದುರಾಗುವ ಸಮಸ್ಯೆ ಎಂದರೆ ವಾಹನ ಸಂಚಾರದ ಒತ್ತಡ ಮತ್ತು ಸಂಚಾರ ನಿಯಮಗಳ ಪಾಲನೆ. ಜಿಲ್ಲೆಯ ಕೇಂದ್ರವಾದ ಬೀದರ್‌ನಲ್ಲಿ ಜಾಗೃತಿಯ ಕೊರತೆಯ ಪರಿಣಾಮ ಇನ್ನೂ ಸಂಚಾರ ವ್ಯವಸ್ಥೆ ಪೊಲೀಸರ ನಿಯಂತ್ರಣಕ್ಕೆ ಬಂದಿಲ್ಲ. ಪೊಲೀಸರ ಎದುರೇ ನಿಯಮ ಉಲ್ಲಂಘನೆಯ ದೃಶ್ಯಗಳು ಸಾಮಾನ್ಯ.ಅಪಘಾತಗಳನ್ನು ನಿಯಂತ್ರಿಸುವುದು ಮತ್ತು ಸಂಚಾರ ವ್ಯವಸ್ಥೆಯಲ್ಲಿ ಶಿಸ್ತು ತರುವ ಕ್ರಮವಾಗಿ ಈಗ ಪ್ರಮುಖ ವೃತ್ತಗಳಲ್ಲಿ ಸಂಚಾರ ಸೂಚಕ ದೀಪಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಇದರ ಜೊತೆಗೆ ವಿವಿಧ ವಾಹನಗಳ ಚಾಲಕರ ಜೊತೆಗೂ ಚರ್ಚಿಸಿ ಶಿಸ್ತು ತರುವ ಕಾರ್ಯಕ್ಕೆ ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ.ಪ್ರಸ್ತುತ ಹರಳಯ್ಯ ವೃತ್ತ, ನೌಬಾದ್ ವೃತ್ತ ಸೇರಿದಂತೆ ಮೂರು ಕಡೆ ಹೊಸದಾಗಿ ಸಂಚಾರ ದೀಪಗಳನ್ನು ಅಳವಡಿಸುವ ಜೊತೆಗೆ ಅಂಬೇಡ್ಕರ್ ವೃತ್ತ ಮತ್ತು ಗುಂಪಾ ರಸ್ತೆಯಲ್ಲಿ ಇರುವ ದೀಪಗಳ ದುರಸ್ಥಿ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಇಲಾಖೆ ಉದ್ದೇಶಿಸಿದೆ.ಸಂಚಾರ ವಿಭಾಗದ ಪೊಲೀಸ ಇನ್ಸ್‌ಪೆಕ್ಟರ್ ವಿಶ್ವನಾಥ ಕುಲಕರ್ಣಿ ಅವರ ಪ್ರಕಾರ, ಈಗ ಅಳವಡಿಸಿರುವ ಸಂಚಾರ ಸೂಚಕ ದೀಪಗಳಿಗೆ ವಿದ್ಯುತ್ ಸಂಪರ್ಕ ಕೊಡಿಸುವುದು ಬಾಕಿ ಇದೆ. ಇಲಾಖೆಗೆ ಬರೆದಿದ್ದು, ಸಂಪರ್ಕ ದೊರೆತ ಕೂಡಲೇ ಇದು ಕಾರ್ಯಾರಂಭ ಮಾಡಲಿದೆ ಎನ್ನುತ್ತಾರೆ.ಜನವರಿ ತಿಂಗಳು ಸಂಚಾರ ಸುರಕ್ಷತಾ ಸಪ್ತಾಹ ನಡೆಯಲಿದ್ದು, ಅದಕ್ಕೂ ಮುನ್ನವೇ ಒಂದು ಹಂತದ ಶಿಸ್ತು ತರಬೇಕು ಎಂಬುದು ನಮ್ಮ ಉದ್ದೇಶ. ಇದರ ಜೊತೆಗೆ ನಗರ ವ್ಯಾಪ್ತಿಯಲ್ಲಿ ಅಪಘಾತದ ಸಾಧ್ಯತೆಗಳು ಇರುವ ಸ್ಥಳಗಳನ್ನು ಗುರುತಿಸಿ ವಾಹನಗಳ ವೇಗ ನಿಯಂತ್ರಕ ಅಳವಡಿಸುವುದು, ಎಚ್ಚರಿಕೆ ನೀಡುವ ದೀಪ (ಬ್ಲಿಂಕರ್ಸ್‌) ಅಳವಡಿಸುವುದು ನಡೆದಿದೆ.ಆಯಕಟ್ಟಿನ ಸ್ಥಳಗಳಲ್ಲಿ ವೇಗ ನಿಯಂತ್ರಕ ಅಳವಡಿಸುವ ಕುರಿತು ಈ ಹಿಂದೆಯೇ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾಪ ಕಳುಹಿಸಲಾಗಿದೆ. ಇನ್ನೂಜಾರಿಗೆ ಬಂದಿಲ್ಲ. ಕೆಲ ದಿನದ ಹಿಂದೆ ನೆನಪೋಲೆಯನ್ನು ಕಳುಹಿಸಲಾಗಿದೆ ಎಂದು ಕುಲಕರ್ಣಿ ವಿವರಿಸುತ್ತಾರೆ.ಈ ಎಲ್ಲ ಕ್ರಮಗಳು ಪೂರ್ಣ ಜಾರಿಗೊಂಡರೆ ನಗರದಲ್ಲಿ ಸಂಚಾರ ವ್ಯವಸ್ಥೆ ಒಂದು ಹಂತಕ್ಕೆ ತಹಬದಿಗೆ ಬರಬಹುದು. ಇದಕ್ಕೆ ಪೂರಕವಾಗಿ ಹಂತ ಹಂತವಾಗಿ ನಾವು ಆಟೋ, ಟ್ಯಾಕ್ಸಿ, ಟಂ ಟಂ ವಾಹನಗಳ ಚಾಲಕರು ಸೇರಿದಂತೆ ಪ್ರತ್ಯೇಕ ಸಭೆಯನ್ನು ಕರೆಸಿ ಅವರ ಸಲಹೆ ಪಡೆದು, ಸೂಚನೆಯನ್ನು ನೀಡುತ್ತಿದ್ದೇವೆ ಎನ್ನುತ್ತಾರೆ.ಚಾಲಕರೇ ಸ್ವಯಂ ಪ್ರೇರಿತವಾಗಿ ನಿಯಮಗಳಿಗೆ ಅನುಸಾರವಾಗಿ ನಡೆದುಕೊಂಡರೆ ಸಂಚಾರ ವ್ಯವಸ್ಥೆ ಬಹುತೇಕ ತಹಬದಿಗೆ ಬರುತ್ತದೆ. ಆದರೆ, ಈ ಬಗೆಗೆ ಜಾಗೃತಿ ಕೊರತೆ ಇರುವುದು ಕಾರಣ. ಇದೇ ಹಿನ್ನೆಲೆಯಲ್ಲಿ ಒಂದು ಸುತ್ತಿಗೆ ಪೂರಕ ಸೌಲಭ್ಯಗಳನ್ನು ಅಳವಡಿಸಿದ ಬಳಿಕ ನಿಯಮಗಳ ಕಟ್ಟುನಿಟ್ಟಿನ ಜಾರಿಗೂ ಒತ್ತುನೀಡಲಾಗುವುದು ಎನ್ನುತ್ತಾರೆ.ಜಿಲ್ಲಾಧಿಕಾರಿಗಳ ಕಚೇರಿ ಬಳಿಯೇ ಇರುವ ಹರಳಯ್ಯ ವೃತ್ತ ಸೇರಿದಂತೆ ಈಗ ಸಂಚಾರ ಸೂಚಕ ದೀಪ ಹಾಕಿರುವ ವೃತ್ತಗಳು ದಿನೇ ದಿನೇ ಸಂಚಾರದ ಒತ್ತಡ ಹೆಚ್ಚುತ್ತಿರುವ ಸ್ಥಳಗಳು. ಸಂಚಾರ ದೀಪ ಕಾರ್ಯಾರಂಭ ಮಾಡಿದ ನಂತರವಾದರೂ ನಗರದ ಮಟ್ಟಿಗೆ ವಾಹನ ಸಂಚಾರದ ಶಿಸ್ತು ಬರುತ್ತದಾ ಕಾದು ನೋಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry