ಸೋಮವಾರ, ಮೇ 17, 2021
22 °C

ಶೀಘ್ರದಲ್ಲೆ ಸಾಲ ಮನ್ನಾ ಬಾಕಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ತುಮಕೂರು ಜಿಲ್ಲಾ  ಸಹಕಾರ ಬ್ಯಾಂಕ್‌ಗೆ ಸಾಲ ಮನ್ನಾ ಬಾಬ್ತು ಬಾಕಿ ಇರುವ ಸುಮಾರು 50 ಕೋಟಿ ರೂಪಾಯಿಯನ್ನು ಸರ್ಕಾರ ಶೀಘ್ರ ಬಿಡುಗಡೆ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಪ್ರಕಟಿಸಿದರು.ತಾಲ್ಲೂಕಿನ ದಂಡಿನಶಿವರದಲ್ಲಿ ಸೋಮವಾರ ರೂ.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾ ಸಹಕಾರ ಬ್ಯಾಂಕ್‌ನ ನೂತನ ಕಟ್ಟಡ ಉದ್ಘಾಟಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಬಂಡವಾಳಶಾಹಿಗಳಿಗೆ, ಕೈಗಾರಿಕೆಗಳಿಗೆ ಸಾಲ ನೀಡಿದ ಬ್ಯಾಂಕ್‌ಗಳು ದಿವಾಳಿ ಎದ್ದಿವೆ. ಆದರೆ ರೈತರಿಗೆ, ಬಡವರಿಗೆ ಸಾಲ ನೀಡಿದ ಜಿಲ್ಲಾ ಸಹಕಾರ ಬ್ಯಾಂಕ್ ನಾಲ್ಕು ವರ್ಷಗಳಿಂದ ಲಾಭದಲ್ಲಿದೆ ಎಂದರು.ಶೇ 40ರಷ್ಟು ರೈತರು ಸಹಕಾರಿ ಬ್ಯಾಂಕ್‌ಗಳಿಂದ ದೂರವೇ ಉಳಿದಿದ್ದಾರೆ. ಖಾಸಗಿ ಲೇವಾದೇವಿದಾರರಿಂದ ಅವರನ್ನು ಮುಕ್ತಗೊಳಿಸಿ ಸಹಕಾರಿ ಕ್ಷೇತ್ರಕ್ಕೆ ತರುವ ಹೊಣೆ ಸಹಕಾರಿ ಬ್ಯಾಂಕ್‌ಗಳ ಮೇಲಿದೆ. ಸರ್ಕಾರ ಸಹಕಾರಿ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ವಾಣಿಜ್ಯ ಬ್ಯಾಂಕ್‌ಗಳ ಕೋರ್ ಬ್ಯಾಂಕಿಂಗ್ ಮೊದಲಾದ ಎಲ್ಲ ತಾಂತ್ರಿಕತೆ ಅಳವಡಿಸಿಕೊಂಡು ಜಿಲ್ಲಾ ಸಹಕಾರ ಬ್ಯಾಂಕ್ ಸ್ಪರ್ಧಾತ್ಮಕ ಸೇವೆ ನೀಡುತ್ತಿದೆ.ಜಿಲ್ಲೆಯ ರೈತರ 101 ಕೋಟಿ ಸಾಲ ಮನ್ನಾ ಆಗಿದೆ. ವಿಶೇಷವಾಗಿ ಮಹಿಳೆಯರು ಜಿಲ್ಲಾ ಸಹಕಾರಿ   ಬ್ಯಾಂಕ್‌ನ ಪ್ರಯೋಜನ ಪಡೆಯುವ ಮೂಲಕ ಆರ್ಥಿಕ ಸ್ವಾವಲಂಬನೆ, ಆತ್ಮವಿಶ್ವಾಸ ಗಳಿಸಿದ್ದಾರೆ. ಸಾಲ ಮರು ಪಾವತಿಯಲ್ಲಿ ಪುರುಷರಿಗಿಂತ ಸ್ತ್ರೀಯರೇ ಮುಂದಿದ್ದಾರೆ. ಸಣ್ಣ ಹಿಡುವಳಿದಾರರಿಗೂ ಸಾಲ ಸೌಲಭ್ಯ ವಿಸ್ತರಿಸಿರುವುದು ಬ್ಯಾಂಕ್‌ನ ಅಗ್ಗಳಿಕೆ ಎಂದರು.ಸಂಸದ ಜಿ.ಎಸ್.ಬಸವರಾಜು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಶಾಸಕ ಕೆ.ಷಡಕ್ಷರಿ, ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್, ನಿರ್ದೇಶಕ ಬಿ.ಎಸ್.ದೇವರಾಜು, ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ವರ್ತಕ ಎಂ.ಡಿ.ಮೂರ್ತಿ, ಕೆಜೆಪಿ ಮುಖಂಡ ಜಯರಾಮ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಕಾವ್ಯಾ ರಾಜ್‌ಕುಮಾರ್, ಚೌದ್ರಿ ರಂಗಪ್ಪ, ಟಿ.ಎಸ್.ದಾನಿಗೌಡ  ತಹಶೀಲ್ದಾರ್ ಮಂಜೇಗೌಡ, ಹಲ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.ದಂ.ಸ.ಗಂಗಾಧರಗೌಡ ಸ್ವಾಗತಿಸಿದರು. ಪರಮೇಶ್ವರ್ ವಂದಿಸಿದರು. ಜಂಟಿ ನಿಬಂಧಕ ಟಿ.ವಿ.ನರಸಿಂಹಮೂರ್ತಿ ನಿರೂಪಿಸಿದರು.

ರೈತರ ಸಾಲ ಮನ್ನಾಗೆ ಒತ್ತಾಯ

ಶಿರಾ: ಐದಾರು ವರ್ಷಗಳಿಂದ ಬರಗಾಲ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದವರಿಗಷ್ಟೇ ಕಾಡದೆ ಎಲ್ಲ ರೈತರನ್ನು ಬಾಧಿಸುತ್ತಿದ್ದು, ಸಹಕಾರ ಸಂಘ-ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಎಲ್ಲ ಸಾಲ ಮನ್ನಾ ಮಾಡುವಂತೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ ಒತ್ತಾಯಿಸಿದ್ದಾರೆ.ಪರಿಶಿಷ್ಟ ಜಾತಿ, ವರ್ಗದ ರೈತರಿಗೆ ಸಾಲ ಮನ್ನಾ ಮಾಡುವ ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತ. ಆದರೆ ಬರಗಾಲ ಜಾತಿ ಪಂಗಡ ಎನ್ನದೆ ಎಲ್ಲರನ್ನೂ ಒಂದೇ ಸಮನಾಗಿ ಕಾಡುತ್ತಿರುವಾಗ ಸರ್ಕಾರವೂ ಎಲ್ಲ ರೈತರ ಪರವಾಗಿ ಸಾಲ ಮನ್ನಾ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ಬರದಿಂದ ತಾಲ್ಲೂಕಿನಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ವಿವಿಧ ಸಹಕಾರ ಸಂಘ -ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ರೈತರು ಮರುಪಾವತಿ ಮಾಡಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದ್ದರಿಂದ ಸರಕಾರ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಹೇಳಿದರು.ತಾಲ್ಲೂಕಿನ ಹಲ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆದು ದಾಳಿಂಬೆ, ಪಪ್ಪಾಯ, ಬಾಳೆ ಕೃಷಿ ನಡೆಸಿದ್ದು, ಸತತ ಬರಗಾಲದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಅಂತಹ ತೋಟಗಾರಿಕೆ ರೈತರ ಸಾಲ ಮನ್ನಾ ಮಾಡಬೇಕು ಎಂದರು.ಪಿಎಲ್‌ಡಿ ಬ್ಯಾಂಕ್ ವತಿಯಿಂದ ಇಲ್ಲಿವರೆಗೆ 1960 ಕೃಷಿಕರಿಗೆ ಸುಮಾರು 7 ಕೋಟಿ ರೂಪಾಯಿ ಸಾಲ ವಿತರಿಸಿದ್ದು, ಅದರಲ್ಲಿ ಪರಿಶಿಷ್ಟ ಜಾತಿ, ವರ್ಗದ ಕೃಷಿಕರಿಗೆ ಒಂದೂವರೆ ಕೋಟಿ ರೂಪಾಯಿ ಸಾಲ ನೀಡಿದೆ. ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ವೀಳ್ಯದೆಲೆ ಮೊದಲಾಗಿ ಸಮಗ್ರ ಕೃಷಿಗೆ ಹೆಚ್ಚು ಸಾಲ ವಿತರಿಸಿದ್ದು, ಸರ್ಕಾರ ಸಾಲ ಮನ್ನಾ ಮಾಡಿದರೆ ಅಷ್ಟೂ ಕೃಷಿಕರಿಗೆ ನೆಮ್ಮದಿ ಸಿಗುತ್ತದೆ ಎಂದರು.ಹೊನ್ನೇನಹಳ್ಳಿ ನಾಗರಾಜು ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.