ಶೀಘ್ರವೇ ಮಧ್ಯಂತರ ಚುನಾವಣೆ: ಸಿದ್ದು

7

ಶೀಘ್ರವೇ ಮಧ್ಯಂತರ ಚುನಾವಣೆ: ಸಿದ್ದು

Published:
Updated:

ದಾವಣಗೆರೆ: ರಾಜ್ಯ ವಿಧಾನಸಭೆಗೆ ಶೀಘ್ರವೇ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ. 2011 ಚುನಾವಣಾ ವರ್ಷವಾಗಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೂವಿನ ಹಡಗಲಿಗೆ ತೆರಳುವ ಮಾರ್ಗದಲ್ಲಿ ಅವರು ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಅವರ ವಿರುದ್ಧ ಎಫ್‌ಐಆರ್ ದಾಖಲಾದರೆ ರಾಜೀನಾಮೆ ನೀಡಲೇಬೇಕಾಗುತ್ತದೆ. ಇದೊಂದು ಅಲ್ಪ ಮತದ ಸರ್ಕಾರವಾಗಿದ್ದು, ಆಡಳಿತ ನಡೆಸುವವರ ತಲೆಯ ಮೇಲೆ ತೂಗುಗತ್ತಿ ತೂಗುತ್ತಿದೆ. ಶಾಸಕರ ಅನರ್ಹತೆ ಪ್ರಕರಣ ನ್ಯಾಯಾಲಯದಲ್ಲಿದೆ. ಇಷ್ಟೆಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ವಿಧಾನಸಭೆಯನ್ನು ವಿಸರ್ಜಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ ಎಂದರು. ಚುನಾವಣೆ ನಡೆದರೆ ಜನರು ಬಿಜೆಪಿಯನ್ನು ಸೋಲಿಸಲಿದ್ದು, ಕಾಂಗ್ರೆಸ್ ಪಕ್ಷವೇ ಪರ್ಯಾಯವಾಗಿದೆ. ಸ್ಥಿರ ಸರ್ಕಾರ ನೀಡುವುದು ಮತ್ತು ಈಗಿನ ಸರ್ಕಾರ ಮಾಡಿದ ಕೊಳೆ ತೊಳೆಯಲು ತಮ್ಮ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಇತ್ತೀಚೆಗೆ ನಡೆದ ಜಿ.ಪಂ. ಚುನಾವಣೆಯಲ್ಲಿ 9 ಜಿಲ್ಲೆಗಳಲ್ಲಿ ಒಂದು ಸ್ಥಾನವನ್ನೂ ಪಡೆಯದ ಜೆಡಿಎಸ್ ಪರ್ಯಾಯವಾಗಲು ಹೇಗೆ ಸಾಧ್ಯ ಎಂದೂ ಪ್ರಶ್ನಿಸಿದರು.ಮಧ್ಯಂತರ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ವರಿಷ್ಠರು ನಿರ್ಧರಿಸುವರು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry