ಗುರುವಾರ , ಜೂನ್ 24, 2021
24 °C

ಶೀಘ್ರ ಆಗಬೇಕಾದ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ನಾಯಕರ ಪ್ರಚೋದನ­ಕಾರಿ ಭಾಷಣಗಳನ್ನು ನಿಯಂತ್ರಿಸಲು ಮಾರ್ಗಸೂಚಿಯನ್ನು ರೂಪಿಸುವ ಬಗ್ಗೆ ಪರಿಶೀಲಿಸಿ ಎಂದು ಸುಪ್ರೀಂಕೋರ್ಟ್‌, ಕಾನೂನು ಆಯೋಗಕ್ಕೆ ಸೂಚಿಸಿರುವುದು ಸ್ವಾಗತಾರ್ಹ. ಈ ಕುರಿತು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸುವಂತೆ ನ್ಯಾ.ಬಿ.ಎಸ್‌.ಚವಾಣ್‌ ನೇತೃತ್ವದ ಪೀಠ ಸೂಚಿಸಿದೆ.‘ಮಹಾರಾಷ್ಟ್ರದಲ್ಲಿ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದರೂ ಅವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಹಾಗೆಯೇ ಹೈದರಾಬಾದ್‌ನಲ್ಲಿ ಮಜ್ಲಿಸೆ ಇತ್ತೆಹಾದುಲ್‌ ಮುಸ್ಲಿಮೀನ್‌ನ ಮುಖಂಡ ಅಕ್ಬರುದ್ದೀನ್‌ ಓವೈಸಿ ಪ್ರಚೋದನಕಾರಿ ಭಾಷಣ ಮಾಡಿ ಬಂಧನಕ್ಕೆ ಒಳಗಾದರೂ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ಅದೇ ರೀತಿಯ ಭಾಷಣ ಮಾಡಿ ದ್ದಾರೆ’ ಎಂಬ ಘಟನೆಗಳನ್ನು ಉಲ್ಲೇಖಿಸಿ,  ಸರ್ಕಾರೇತರ ಸಂಸ್ಥೆ­ಯಾದ ‘ಪ್ರವಾಸಿ ಭಲಾಯ್‌ ಸಂಘಟನ್‌’ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು.ಈ ಅರ್ಜಿಯನ್ನು ಸುಪ್ರೀಂಕೋರ್ಟ್‌ ಗಂಭೀರವಾಗಿ ಪರಿಗಣಿಸಿ­ರುವುದು ಸ್ಪಷ್ಟವಾಗಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ ಗಳಿಕೆ ಸಲುವಾಗಿ  ರಾಜಕೀಯ ನಾಯಕರು ಸ್ವಚ್ಛಂದವಾಗಿ ನಾಲಗೆ ಹರಿಬಿಡುತ್ತಿ­ರುವುದನ್ನು ಗಮನಿಸಿದರೆ ಸುಪ್ರೀಂಕೋರ್ಟ್‌ನ ಈ ಆದೇಶದ ಮಹತ್ವ ಅರಿವಾಗುತ್ತದೆ.ಇತರೆಲ್ಲಾ ಸ್ವಾತಂತ್ರ್ಯಗಳಂತೆ ಅಭಿವ್ಯಕ್ತಿ ಸ್ವಾತಂತ್ರ್ಯವೂ ಪರಿಪೂರ್ಣವಲ್ಲ, ನಿರ್ಬಂಧಿತ ಎನ್ನುವುದನ್ನು ನಮ್ಮ ನಾಯಕರು ಮರೆತೇ ಬಿಟ್ಟಿರುವಂತಿದೆ. ರಾಜಕೀಯ ಲಾಭ ಗಳಿಕೆಗಾಗಿ ಪ್ರಚೋದನಕಾರಿ ಭಾಷಣದ ಮೂಲಕ ಜನರನ್ನು ಜಾತಿ, ಧರ್ಮ, ಪ್ರದೇಶಗಳ ಅಡಿಯಲ್ಲಿ ವಿಭಜಿಸಿ ಮತ ಗಳಿಸುವುದು ಇತ್ತೀಚೆಗೆ ಮಾಮೂಲಿ ಎಂಬಂತಾಗಿದೆ.  ರಾಜಕೀಯದವರ ಈ ಕಳ್ಳಾಟದಲ್ಲಿ ಸಾಮಾಜಿಕ, ಧಾರ್ಮಿಕ ಮುಖಂಡರೂ ಕೈಜೋಡಿಸುತ್ತಿ­ರುವುದು ಆತಂಕಕಾರಿ ವಿದ್ಯಮಾನ.ಧರ್ಮಕೇಂದ್ರಗಳು ಅಧ್ಯಾತ್ಮದ ಮಾರ್ಗದರ್ಶನ ಮಾಡುವುದನ್ನು ಬಿಟ್ಟು ಲೌಕಿಕ ಭೋಗಭಾಗ್ಯಗಳ ಕಡೆಗೇ ಚಲಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅಪವಿತ್ರ ಮೈತ್ರಿಗಳು ಉಂಟಾಗುತ್ತಿವೆ. ರಾಜ್‌ ಠಾಕ್ರೆ, ಓವೈಸಿ ಮಾತ್ರವಲ್ಲ, ಪ್ರವೀಣ್‌ ತೊಗಾಡಿಯಾ, ವರುಣ್ ಗಾಂಧಿ ಮುಂತಾದವರೂ ಹಿಂದೆ ಹೀಗೆಯೇ ಎಲುಬಿಲ್ಲದ ನಾಲಗೆ ಹರಿಯಬಿಟ್ಟು ವಾತಾವರಣವನ್ನು ಕಲುಷಿತ ಗೊಳಿಸಿದ್ದಿದೆ. ಈ ಪ್ರಚೋದನ­ಕಾರಿ ಭಾಷಣಗಳು , ಪ್ರಜಾಪ್ರಭುತ್ವದ ಅಡಿಪಾಯವನ್ನು  ದುರ್ಬಲ­ಗೊಳಿಸುವಂತಹದ್ದು. ಇಂತಹ ನೇತಾರರನ್ನು ಹದ್ದುಬಸ್ತಿನಲ್ಲಿ ಇಡಲು ಈಗಿರುವ ಕಾನೂನುಗಳಲ್ಲೇ ಅವಕಾಶ ಇದೆಯಾದರೂ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದು ಜಾರಿಯಾಗುತ್ತಿಲ್ಲ.ಕೆಲವು ಕಡೆ ರಾಜ್ಯ ಸರ್ಕಾರಗಳೇ ಇಂತಹ ಪ್ರಕರಣಗಳಿಗೆ  ಕುಮ್ಮಕ್ಕು ನೀಡುವುದಿದೆ. ಇಂತಹ ಸಂದರ್ಭಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳದಂತೆ ಪೊಲೀಸ್‌ ವ್ಯವಸ್ಥೆಯ ಮೇಲೆ ಒತ್ತಡ ಹೇರುವ ಕೆಲಸವೂ ನಡೆಯುತ್ತದೆ. ಹೀಗಾಗಿ, ಕೋರ್ಟ್‌ ಸೂಚನೆಯಂತೆ   ಮಾರ್ಗದರ್ಶಿ ಸೂತ್ರಗಳನ್ನು  ರೂಪಿಸುವ ಕೆಲಸ ಶೀಘ್ರವಾಗಿ ಆಗಬೇಕು. ಕಾನೂನು ಉಲ್ಲಂಘನೆಯ ಮತ್ತು ಕೋಮು ಸಂಘರ್ಷದ ವಾತಾವರಣವನ್ನು ಸೃಷ್ಟಿಸುವ ನಾಯಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವಂತಾಗಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.