ಬುಧವಾರ, ನವೆಂಬರ್ 20, 2019
26 °C

ಶೀಘ್ರ ಕಾಂಗ್ರೆಸ್ ಅಂತಿಮ ಪಟ್ಟಿ

Published:
Updated:

ನವದೆಹಲಿ: ಹಿರಿಯ ನಾಯಕರ ಮಕ್ಕಳ ಟಿಕೆಟ್ ಪ್ರಶ್ನೆಯೂ ಒಳಗೊಂಡಂತೆ ಕಗ್ಗಂಟಾಗಿರುವ 47 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಒಂದೆರಡು ದಿನಗಳಲ್ಲಿ ಪ್ರಕಟಿಸಲಿದೆ.ವಿದೇಶಕ್ಕೆ ಹೋಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ರಾಜಧಾನಿಗೆ ಹಿಂತಿರುಗುತ್ತಿದ್ದಾರೆ. `ಅಭ್ಯರ್ಥಿಗಳ ಆಯ್ಕೆ ಸಮಿತಿ' ಅಧ್ಯಕ್ಷರು ಹಾಗೂ ಸದಸ್ಯರು ಸೋನಿಯಾ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಅಂತಿಮ ಪಟ್ಟಿ ಬಿಡುಗಡೆ ಆಗಲಿದೆ.ಹೈಕಮಾಂಡ್ ಅಂಗಳಕ್ಕೆ ಬಂದಿರುವ `ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ಅಕ್ರಮ ಆರೋಪ' ಕುರಿತು ಸೋನಿಯಾ ಹಿರಿಯ ನಾಯಕರಿಂದ ಮಾಹಿತಿ ಪಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್, ಕೆ.ಎಚ್. ಮುನಿಯಪ್ಪ ಸೇರಿದಂತೆ ಹಿರಿಯ ನಾಯಕರ ಸಂಬಂಧಿಗಳಿಗೆ ಟಿಕೆಟ್ ಕೊಡುವ ಪ್ರಶ್ನೆ ಕುರಿತು ಕಾಂಗ್ರೆಸ್ ಅಧ್ಯಕ್ಷರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್. ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಪಿಸಿಸಿ ಖಜಾಂಚಿ ಶ್ಯಾಮನೂರು ಶಿವಶಂಕರಪ್ಪ ಸಂಬಂಧಿಕರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ- ಚಿತ್ತಾಪುರ, ರೆಹಮಾನ್‌ಖಾನ್ ಪುತ್ರ ಮನ್ಸೂರ್ ಅಲಿಖಾನ್- ಜಯನಗರ, ಮುನಿಯಪ್ಪ ಅವರ ಪುತ್ರಿ ರೂಪಕಲಾ- ಕೆಜಿಎಫ್, ಹರಿಪ್ರಸಾದ್ ಸೋದರ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ- ಮಲ್ಲೇಶ್ವರಂ, ಧರ್ಮಸಿಂಗ್ ಪುತ್ರ ಅಜಯ್‌ಸಿಂಗ್- ಜೇವರ್ಗಿ, ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್- ಹೆಬ್ಬಾಳ, ಜಯಚಂದ್ರ ಪುತ್ರ ಸಂತೋಷ್- ಚಿಕ್ಕನಾಯಕನಹಳ್ಳಿ, ಶ್ಯಾಮನೂರು ಶಿವಶಂಕರಪ್ಪನವರ ಮಗ ಎಸ್.ಎಸ್. ಮಲ್ಲಿಕಾರ್ಜುನ್- ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಅರ್ಜಿ ಹಾಕಿದ್ದಾರೆ.`ಶಿವರಾಂ ಅವರಿಗೆ ಟಿಕೆಟ್ ನೀಡುವ ವಿಚಾರ ಆಯ್ಕೆ ಸಮಿತಿ ವಿವೇಚನೆಗೆ ಬಿಟ್ಟಿದ್ದು. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ' ಎಂದು ಹರಿಪ್ರಸಾದ್ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಹೇಳಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಜಯಚಂದ್ರ ಅವರಿಗೆ ಶಿರಾದಿಂದ ಟಿಕೆಟ್ ನೀಡಲಾಗಿದೆ. ಶ್ಯಾಮನೂರು ಅವರಿಗೆ ದಾವಣಗೆರೆ ಉತ್ತರ ಕ್ಷೇತ್ರ ಬಿಟ್ಟುಕೊಟ್ಟು, ದಕ್ಷಿಣವನ್ನು ಮುಸ್ಲಿಮರಿಗೆ ಬಿಡುವ ನಿಲುವು ಹೈಕಮಾಂಡ್‌ಗಿದೆ. ಆದರೆ, ಎರಡೂ ಕ್ಷೇತ್ರ ತಮಗೇ ಬೇಕೆಂದು ಶ್ಯಾಮನೂರು ಹಟ ಹಿಡಿದಿದ್ದಾರೆ.ಉಳಿದಂತೆ ಬಿಕ್ಕಟ್ಟು ಸೃಷ್ಟಿಯಾಗಿರುವ ಬೆಂಗಳೂರಿನ ಕೆ.ಆರ್. ಪುರಂ, ಜಯನಗರ, ಸಿ.ವಿ. ರಾಮನ್‌ನಗರ, ಚಾಮರಾಜಪೇಟೆ, ಮಹಾದೇವಪುರ, ಬಳ್ಳಾರಿ, ಕಲಘಟಗಿ, ಭದ್ರಾವತಿ, ತುರುವೇಕೆರೆ, ಮಾಲೂರು ಸೇರಿದಂತೆ 47 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಸೋನಿಯಾ ಅಂತಿಮಗೊಳಿಸಲಿದ್ದಾರೆ. ಅನಂತರ ಅಂತಿಮ ಪಟ್ಟಿ ಪ್ರಕಟವಾಗಲಿದೆ.ಅಭ್ಯರ್ಥಿ ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಲು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ದೆಹಲಿಗೆ ಆಗಮಿಸಿದ್ದಾರೆ. ಮಂಗಳವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬರಲಿದ್ದಾರೆ.

ಪ್ರತಿಕ್ರಿಯಿಸಿ (+)