ಶನಿವಾರ, ಮೇ 28, 2022
25 °C
ಎಮ್ಮೆಹಟ್ಟಿ ಗ್ರಾಮಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಭೇಟಿ

ಶೀಘ್ರ ಕಾಮಗಾರಿ ಆರಂಭದ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭರಮಸಾಗರ: ತಹಶೀಲ್ದಾರ್ ಕಾಂತರಾಜ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಬುಧವಾರ ತಾಲ್ಲೂಕಿನ ಎಮ್ಮೆಹಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರ ಕೆಳ ಸೇತುವೆ ಮತ್ತು ಬಳಕೆದಾರ ರಸ್ತೆಯ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಗ್ರಾಮಸ್ಥರಿಗೆ ಅಗತ್ಯವಾಗಿ ಬೇಕಾಗಿರುವ ತಾತ್ಕಾಲಿಕ ಸೇವಾರಸ್ತೆಯ ತುರ್ತು ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಜಾನುವಾರುಗಳು ಸುಲಭವಾಗಿ ಹೆದ್ದಾರಿಯಲ್ಲಿ ಸಂಚರಿಸದಂತೆ ತಡೆಗೋಡೆ  ನಿರ್ಮಿಸಬೇಕು ಎಂದು ತಹಶೀಲ್ದಾರರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.ತಹಶೀಲ್ದಾರರ ಮಾತಿಗೆ ಸ್ಪಂದಿಸಿದ ಹೆದ್ದಾರಿ ಪ್ರಾಧಿಕಾರದವರು, ಸೋಮವಾರದಿಂದಲೇ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು.ಸೋಮವಾರದಿಂದ ಕಾಮಗಾರಿಯನ್ನು ಆರಂಭಿಸದಿದ್ದರೆ ಪುನಃ ಹೆದ್ದಾರಿ ರಸ್ತೆ ತಡೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು  ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ರಾಷ್ಟ್ರೀಯ ಹೆದ್ದಾರಿ 4ರಲ್ಲಿ  ಸಂಭವಿಸುತ್ತಿರುವ ಅಪಘಾತಗಳಿಗೆ ಅಪೂರ್ಣಗೊಂಡ ಸೇವಾರಸ್ತೆ ಹಾಗೂ ಅಂಡರ್ ಪಾಸ್‌ಗಳೇ ಕಾರಣ ಎಂದು ಆಗ್ರಹಿಸಿ ಮಂಗಳವಾರ ಎಮ್ಮೆಹಟ್ಟಿ ಗ್ರಾಮಸ್ಥರು ರಾ.ಹೆ 4 ಯೋಜನಾ ವ್ಯವಸ್ಥಾಪಕ ಸತ್ಯನಾರಯಣ ಮೂರ್ತಿ ಹಾಗೂ ಕೆಲವು ಗುತ್ತಿಗೆದಾರರಿಗೆ ದಿಗ್ಬಂಧನ ಹಾಕಿದ್ದರು. ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಬೇಕೆಂದು ಪಟ್ಟು ಹಿಡಿದಿದ್ದರು.ಮಂಗಳವಾರ ರಾತ್ರಿ ಎಮ್ಮೆಹಟ್ಟಿಗೆ ಭೇಟಿ ನೀಡಿದ ತಹಶೀಲ್ದಾರ್ ಕಾಂತರಾಜ್ ಬುಧವಾರ ಪ್ರಾಧಿಕಾರದ ಅಧಿಕಾರಿಗಳನ್ನು ಕರೆತರುವುದಾಗಿ ಭರವಸೆ ನೀಡಿದ ನಂತರ ದಿಗ್ಬಂಧನ ತೆರವುಗೊಳಿಸಿದ್ದರು.ಸರ್ಕಲ್ ಇನ್‌ಸ್ಪೆಕ್ಟರ್ ಕನಕಲಕ್ಷ್ಮಿ, ಸಬ್ ಇನ್‌ಸ್ಪೆಕ್ಟರ್ ಸಿ.ಜೆ. ಚೈತನ್ಯ,  ಇಂದ್ರೇಶ್, ರಾಜಸ್ವ ನಿರೀಕ್ಷಕ ಮೂಡಲಗಿರಿಯಪ್ಪ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.