ಶೀಘ್ರ ತೀರ್ಮಾನ: ಶೆಟ್ಟರ ಭರವಸೆ

7
ತೊಗರಿಗೆ ಬೆಂಬಲ ಬೆಲೆ ಕ್ವಿಂಟಲ್‌ಗೆ ರೂ. 5000 ನಿಗದಿ

ಶೀಘ್ರ ತೀರ್ಮಾನ: ಶೆಟ್ಟರ ಭರವಸೆ

Published:
Updated:

ಗುಲ್ಬರ್ಗ: ತೊಗರಿ ಪ್ರತಿ ಕ್ವಿಂಟಲ್‌ಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಕುರಿತು ಇನ್ನು ಒಂದೆರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ ಭರವಸೆ ನೀಡಿದ್ದಾರೆ.ಗುಲ್ಬರ್ಗದ ಗೃಹ ಕಚೇರಿ `ಕೃಷ್ಣಾ'ದಲ್ಲಿ ತಮ್ಮನ್ನು ಭೇಟಿ ಮಾಡಿದ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಜತೆ ಚರ್ಚೆ ನಡೆಸಿದ ಬಳಿಕ ಅವರು ಈ ಆಶ್ವಾಸನೆ ನೀಡಿದರು. ಪ್ರತಿ ಕ್ವಿಂಟಲ್‌ಗೆ 4,000 ರೂಪಾಯಿ ಬೆಲೆ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದ್ದನ್ನು ಆಕ್ಷೇಪಿಸಿದ ಪ್ರತಿನಿಧಿಗಳು, ಬೆಲೆಯನ್ನು 5,000 ರೂಪಾಯಿಗೆ ಹೆಚ್ಚಿಸುವಂತೆ ಆಗ್ರಹಿಸಿದರು. 4,000 ರೂಪಾಯಿ ಜತೆಗೆ ರಾಜ್ಯ ಸರ್ಕಾರ 500 ರೂಪಾಯಿ ಕೊಡಬೇಕು ಹಾಗೂ ಕೇಂದ್ರ 500 ರೂಪಾಯಿ ಕೊಡುವಂತೆ ಒತ್ತಾಯಿಸಬೇಕು ಎಂದು ಪ್ರತಿನಿಧಿಗಳು ಸಲಹೆ ಮಾಡಿದರು.“ತೊಗರಿ ಬೇಸಾಯಕ್ಕೆ ಹೆಚ್ಚು ವೆಚ್ಚವಾಗುತ್ತಿದೆ. ಹೀಗಾಗಿ ಹೆಚ್ಚು ಬೆಲೆ ನಿಗದಿ ಮಾಡಬೇಕು ಎಂಬ ನಮ್ಮ ವಾದವನ್ನು ಮುಖ್ಯಮಂತ್ರಿ, ಕೃಷಿ ಸಚಿವ ಹಾಗೂ ಇತರ ಅಧಿಕಾರಿಗಳು ಒಪ್ಪಿದರು. ಆದರೆ ಒಂದೆರಡು ದಿನದಲ್ಲಿ ಬೆಲೆ ನಿಗದಿ ಮಾಡುವ ಬಗ್ಗೆ ತೀರ್ಮಾನಿಸುವುದಾಗಿ ಭರವಸೆ ನೀಡಿದರು” ಎಂದು ನಿಯೋಗದಲ್ಲಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ                       `ಪ್ರಜಾವಾಣಿ'ಗೆ ತಿಳಿಸಿದರು.ಆಮದು ಸುಂಕ

ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ತೊಗರಿಗೆ ಆಮದು ಸುಂಕ ವಿಧಿಸುವಂತೆ ನಿಯೋಗದ ಸದಸ್ಯರು ಆಗ್ರಹಿಸಿದಾಗ, ಈ ಬಗ್ಗೆ ಕೇಂದ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು. “ಇದೇ 26 ಹಾಗೂ 27ರಂದು ದೆಹಲಿಗೆ ನಿಯೋಗವೊಂದನ್ನು ಕರೆದುಕೊಂಡು ಹೋಗಿ, ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕೋಣ ಎಂಬ ಭರವಸೆಯನ್ನು ಸಿಎಂ ನೀಡಿದರು” ಎಂದು ಮಾನ್ಪಡೆ ಹೇಳಿದರು.ರೈತರ ಷೇರು

ಕೆಎಂಎಫ್, ಕೆಒಎಫ್ ಮಾದರಿಯಲ್ಲಿ ರೈತರಿಂದ ಷೇರು ರೂಪದಲ್ಲಿ ಹಣ ಸಂಗ್ರಹಿಸಿ, ಅದಕ್ಕೆ ಸರ್ಕಾರ ಇನ್ನೊಂದುಷ್ಟು ಧನಸಹಾಯ ನೀಡಿ ಆ ಒಟ್ಟು ಹಣದಿಂದ ಮಾರುಕಟ್ಟೆಯಲ್ಲಿ ರೈತರ ಉತ್ಪನ್ನ ಖರೀದಿಸುವ ಚಿಂತನೆಯನ್ನು ಮುಖ್ಯಮಂತ್ರಿ ಶೆಟ್ಟರ                            ಸ್ವಾಗತಿಸಿದರು.ಸರ್ಕಾರದಿಂದ ಕನಿಷ್ಠ 50 ಕೋಟಿ ರೂಪಾಯಿ ಕೊಡುವ ಜತೆಗೆ ಬ್ಯಾಂಕ್‌ನಿಂದ ಸಾಲ ಕೊಡಿಸುವ ಭರವಸೆಯನ್ನು ನೀಡಿದರು ಎಂದು ಮಾನ್ಪಡೆ ವಿವರಿಸಿದರು.ಕೃಷಿ ಸಚಿವ ಉಮೇಶ ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ, ಕೃಷಿ, ಹಣಕಾಸು, ಮಾರುಕಟ್ಟೆ, ಸಹಕಾರ ಇಲಾಖೆ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಸಭೆಯಲ್ಲಿ  ಉಪಸ್ಥಿತರಿದ್ದರು.ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗುಡಗಿ, ಕರ್ನಾಟಕ ಪ್ರದೇಶ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ, ದಾಲ್‌ಮಿಲ್ ಅಸೋಸಿಯೇಶನ್ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ರವಿಕುಮಾರ ಸರಸಂಬಾ, ರವೀಂದ್ರ ಮಾದಶೆಟ್ಟಿ ಇತರರು ನಿಯೋಗದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry