ಶೀಘ್ರ ದೇಶದಾದ್ಯಂತ ಎಂಎನ್‌ಪಿ ವಿಸ್ತರಣೆ

7

ಶೀಘ್ರ ದೇಶದಾದ್ಯಂತ ಎಂಎನ್‌ಪಿ ವಿಸ್ತರಣೆ

Published:
Updated:

ನವದೆಹಲಿ (ಪಿಟಿಐ): ಮೊಬೈಲ್ ಸಂಖ್ಯೆ ಬದಲಿಸದೆ  ಸೇವಾ ಸಂಸ್ಥೆ ಬದಲಿಸುವ (ಎಂಎನ್‌ಪಿ) ಸೌಲಭ್ಯವನ್ನು ಫೆಬ್ರುವರಿಯಿಂದ ದೇಶದಾದ್ಯಂತ ವಿಸ್ತರಿಸುವ ಸಂಭವ ಇದೆ.ರಾಷ್ಟ್ರವ್ಯಾಪಿ ಮೊಬೈಲ್ ಸಂಖ್ಯೆಯಲ್ಲಿ ಏಕರೂಪತೆ (ಎಂಎನ್‌ಪಿ) ಕಾಯ್ದುಕೊಳ್ಳುವ ಈ ಯೋಜನೆಯಿಂದ ಗ್ರಾಹಕರು ದೇಶದ ಯಾವುದೇ ಭಾಗಕ್ಕೆ ಹೋದರೂ ಮೊಬೈಲ್ ಸಂಖ್ಯೆ ಬದಲಾಯಿಸಿಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.`ರಾಷ್ಟ್ರೀಯ ದೂರಸಂಪರ್ಕ ನೀತಿ (ಎನ್‌ಟಿಪಿ) 2012' ಅನ್ನು ನಿಗದಿತ ಅವಧಿಯೊಳಗೆ ಜಾರಿ ಮಾಡುವ ಸಲುವಾಗಿ ಮುಂದಿನ ಮೂರು ತಿಂಗಳ ಕಾಲ ಜಾರಿಯಲ್ಲಿರುವಂತಹ ವಿಶಾಲ ವ್ಯಾಪ್ತಿಯ ಕಾರ್ಯಸೂಚಿಯನ್ನು ದೂರಸಂಪರ್ಕ ಇಲಾಖೆ ಅಂತಿಮಗೊಳಿಸಿದೆ. ಇದರಲ್ಲಿ `ಎಂಎನ್‌ಪಿ' ಕೂಡ ಸೇರಿದೆ. ವಿಶಾಲ ವ್ಯಾಪ್ತಿಯ ಕಾರ್ಯಸೂಚಿಯು ಇದೇ ಡಿಸೆಂಬರ್‌ನಿಂದ ಮುಂದಿನ ವರ್ಷದ ಫೆಬ್ರುವರಿವರೆಗೆ ಜಾರಿಯಲ್ಲಿರುತ್ತದೆ' ಎಂದು ಗುರುವಾರ ನಡೆದ `ಭಾರತ ದೂರಸಂಪರ್ಕ 2012' ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.ಸದ್ಯ, ಮೊಬೈಲ್ ಗ್ರಾಹಕರು ತಾವಿರುವ ದೂರಸಂಪರ್ಕ ವೃತ್ತದ ವ್ಯಾಪ್ತಿಯಲ್ಲಿನ ಸೇವಾ ಕಂಪೆನಿಗಳನ್ನು ಮೊಬೈಲ್ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ. `ಎಂಎನ್‌ಪಿ' ಯೋಜನೆ ಜಾರಿಯಾದರೆ ಗ್ರಾಹಕರು ದೇಶದ ಯಾವುದೇ ದೂರಸಂಪರ್ಕ ವೃತ್ತಕ್ಕೆ ಹೋದರೂ, ಸೇವಾ ಕಂಪೆನಿಗಳನ್ನು ಬದಲಿಸಿದರೂ ತಮ್ಮ ಮೊಬೈಲ್ ಸಂಖ್ಯೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯ ಇಲ್ಲ.ದೇಶದಲ್ಲಿ ಈಗ 22 ದೂರಸಂಪರ್ಕ ವೃತ್ತಗಳು ಇವೆ. ಈ ವೃತ್ತ ವ್ಯಾಪ್ತಿಯಲ್ಲಿ ಬದಲಾವಣೆ  ಕೋರಿ ಸೇವಾ ಕಂಪೆನಿಗಳ 7.51 ಕೋಟಿ ಗ್ರಾಹಕರು ಮನವಿ ಸಲ್ಲಿಸಿದ್ದಾರೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಂಕಿಅಂಶ ತಿಳಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry