ಶೀಘ್ರ ನೂತನ ನಿರ್ದೇಶಕರ ನೇಮಕ

7
ರಂಗ ಸಮಾಜದಿಂದ ಸಂಭವನೀಯರ ಪಟ್ಟಿ ಸಲ್ಲಿಕೆ

ಶೀಘ್ರ ನೂತನ ನಿರ್ದೇಶಕರ ನೇಮಕ

Published:
Updated:

ಧಾರವಾಡ: ಆರು ತಿಂಗಳಿಂದ ಖಾಲಿ ಇರುವ ಧಾರವಾಡ, ಶಿವಮೊಗ್ಗ ಹಾಗೂ ಆರಂಭಗೊಳ್ಳಲಿರುವ ಗುಲ್ಬರ್ಗ ರಂಗಾಯಣ ಘಟಕಗಳಿಗೆ ಸಂಭವನೀಯ ನಿರ್ದೇಶಕರ ಪಟ್ಟಿಯನ್ನು ‘ರಂಗ­ಸಮಾಜ’ವು ಸಿದ್ಧಪಡಿಸಿದ್ದು ಇದೇ  7­ರಂದು ಸರ್ಕಾರಕ್ಕೆ ಸಲ್ಲಿಸಿದೆ. ವಾರದ ಒಳಗೆ ಈ ಮೂರೂ ರಂಗಾಯಣ ಘಟಕಗಳಿಗೆ ನಿರ್ದೇಶಕರ ನೇಮಕ­ವಾಗುವ ಸಂಭವವಿದೆ.ಧಾರವಾಡ ರಂಗಾಯಣಕ್ಕೆ ಮೂವರ ಹೆಸರು, ಶಿವಮೊಗ್ಗ ಹಾಗೂ ಗುಲ್ಬರ್ಗ ಘಟಕಗಳಿಗೆ ತಲಾ ನಾಲ್ಕು ಮಂದಿ ಹೆಸರುಗಳನ್ನು ಸೂಚಿಸಲಾಗಿದೆ.ಹಿರಿಯ ರಂಗ ಕಲಾವಿದರಾದ ಗೋಪಾಲ­ಕೃಷ್ಣ ನಾಯರಿ, ಪ್ರಕಾಶ ಗರೂಡ ಹಾಗೂ ರಂಗಕರ್ಮಿ ವಿಠ್ಠಲ ಕೊಪ್ಪದ ಹೆಸರುಗಳನ್ನು ಸುಭಾಸ ನರೇಂದ್ರ ಅವರಿಂದ ತೆರವಾದ ಧಾರ­ವಾಡ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಸೂಚಿಸಿದ್ದರೆ ಹೊ.ನ.ಸತ್ಯ ಅವರಿಂದ ತೆರವಾದ ಶಿವಮೊಗ್ಗ ರಂಗಾಯಣಕ್ಕೆ ಇಕ್ಬಾಲ್‌ ಅಹಮದ್, ಎಸ್‌.ಮಾಲತಿ, ಪ್ರಮೋದ ಶಿಗ್ಗಾಂವ, ಎಂ.ಗಣೇಶ ಅವರನ್ನು ಹೆಸರಿಸಿದೆ. ಗುಲ್ಬರ್ಗ ರಂಗಾ­ಯಣಕ್ಕೆ ಆರ್‌.ಕೆ.­ಹುಡುಗಿ, ಎಲ್‌.ಬಿ.ಕೆ.­ಅಲ್ದಾಳ, ಪ್ರಭಾ­ಕರ ಸಾತಖೇಡ ಹಾಗೂ ಶಂಕ್ರಯ್ಯ ಘಂಟಿ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ರಂಗಸಮಾಜದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪ್ರಸ್ತುತ ಹಂಪಿ ಉತ್ಸವದಲ್ಲಿ ಭಾಗವಹಿಸಿದ್ದು, ಉತ್ಸವ ಮುಗಿದ ಬಳಿಕವೇ ಮೂರು ರಂಗಾಯಣ ಘಟಕಕ್ಕೆ ನೂತನ ನಿರ್ದೇಶಕರ ಆಯ್ಕೆ ನಡೆಯ­ಲಿದೆ. ಒಂದು ವಾರದಲ್ಲಿ ಎಲ್ಲ ಪ್ರಕ್ರಿಯೆ­ಗಳು ಮುಗಿಯಬಹುದು ಎಂದು ತಿಳಿದು­ಬಂದಿದೆ.ಪ್ರತಿಭಟನೆಯ ಎಚ್ಚರಿಕೆ: ಹಿಂದೆ ಬಿಜೆಪಿ ಸರ್ಕಾರವು ರಂಗಸಮಾಜ ಸೂಚಿಸಿದ ಹೆಸರುಗಳಿಗೆ ಬೆಲೆ ನೀಡದೇ, ತಮಗೆ ಬೇಕಾದವರನ್ನು ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಿತ್ತು. ಧಾರವಾಡ ರಂಗಾ­ಯಣಕ್ಕೆ ಸುಭಾಸ ನರೇಂದ್ರ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಗೋಪಾಲಕೃಷ್ಣ ನಾಯರಿ, ಗಂಗಾಧರ ಸ್ವಾಮಿ ಹಾಗೂ ಪ್ರಕಾಶ ಗರೂಡ ಕೋರ್ಟ್‌ ಮೆಟ್ಟಿಲು ಏರಿದ್ದರು.  ‘ಸಮಾಜ ಸೂಚಿಸಿದವರನ್ನು ಹೊರತುಪಡಿಸಿ ಬೇರೆಯವರನ್ನು ನೇಮಕ ಮಾಡಿದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲೂ ನಾವು ಹಿಂಜರಿ­ಯುವುದಿಲ್ಲ’ ಎಂದು ರಂಗ­ಸಮಾಜದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry