ಶೀಘ್ರ ಪ್ರತಿಪಕ್ಷ ಮುಖಂಡರ ಸಭೆ

7

ಶೀಘ್ರ ಪ್ರತಿಪಕ್ಷ ಮುಖಂಡರ ಸಭೆ

Published:
Updated:

ವಿಜಾಪುರ: ‘ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಕಾಮಗಾರಿಗಳಿಗೆ ಬಾಂಡ್ ಮತ್ತಿತರ ಮೂಲಗಳಿಂದ ಹಣ ಸಂಗ್ರಹಿಸುವ ಚಿಂತನೆ ನಡೆದಿದ್ದು, ಮುಖ್ಯಮಂತ್ರಿಗಳು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ನ್ಯಾಯಮಂಡಳಿ ತೀರ್ಪಿನ ಕುರಿತು ಚರ್ಚಿಸಲು ಶೀಘ್ರವೇ ವಿರೋಧ ಪಕ್ಷಗಳ ಮುಖಂಡರ ಸಭೆ ಕರೆಯಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.ಕೃಷ್ಣಾ ಎರಡನೆಯ ನ್ಯಾಯಮಂಡಳಿ ತೀರ್ಪಿನ ಕುರಿತು ಚರ್ಚಿಸಲು ಆಲಮಟ್ಟಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷ್ಣಾ ಕೊಳ್ಳದ 17 ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.ನ್ಯಾಯಮಂಡಳಿ ತೀರ್ಪಿನ ಅಂಶಗಳ ಬಗೆಗೆ ಕಾನೂನು ತಜ್ಞರು, ಪರಿಣಿತರ ಮಟ್ಟದಲ್ಲಿ ಚರ್ಚೆ ನಡೆದಿದೆ.  ಇದೇ ಮೊದಲ ಬಾರಿ ಕೃಷ್ಣಾ ಕಣಿವೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಭಿಪ್ರಾಯ ಕ್ರೋಢಿಕರಿಸಲಾಗುತ್ತಿದೆ. ಈಗಿರುವ ನೀರಾವರಿ ಯೋಜನೆಗಳ ಸ್ಥಿತಿಗತಿ, ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಿದರೆ ಎದುರಾಗುವ ಮುಳುಗಡೆಯ ಸಮಸ್ಯೆಯ ಪರಿಹಾರ. ತೀರ್ಪಿನಲ್ಲಿ ಕರ್ನಾಟಕಕ್ಕೆ ಮಾರಕವಾಗಿರುವ ಬಗ್ಗೆ ಜನಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದ್ದು, ಈ ಎಲ್ಲ ಅಂಶಗಳ ಬಗ್ಗೆ ಫೆ.19ರಂದು ರಾಜ್ಯ ಪರ ವಕೀಲ ನಾರಿಮನ್ ಅವರೊಂದಿಗೆ ಚರ್ಚಿಸಲಾಗುವುದು ಎಂದರು.ಫೆ.24ರಿಂದ ವಿಧಾನ ಮಂಡಳ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಅಥವಾ ಅದಕ್ಕಿಂತ ಮುಂಚೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ವಿರೋಧ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಲಾಗುವುದು. ನ್ಯಾಯಮಂಡಳಿ ಎದುರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಅಂಶಗಳ ಬಗ್ಗೆ ಈ ಮಾಸಾಂತ್ಯದಲ್ಲಿ ಸ್ಪಷ್ಟವಾದ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.ಪುನರ್‌ವಸತಿ ಸಮಸ್ಯೆ ಪರಿಹರಿಸದೆ ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಿಸಲು ಆಗುವುದಿಲ್ಲ. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಿದರೆ 22 ಗ್ರಾಮ, 75 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ಮುಳುಗಡೆಯಾಗಲಿದೆ. ಭೂಸ್ವಾಧೀನ, ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿಯದ್ದೇ ಸವಾಲು. ರೈತರು ಕಾನೂನು ತೊಡಕುಗಳಿಂದ ಮಾನಸಿಕ ಹಿಂಸೆ ಅನುಭವಿಸುವುದನ್ನು ತಪ್ಪಿಸಲು ಹಾಗೂ  ಮಾನವೀಯ ನೆಲೆಗಟ್ಟಿನಲ್ಲಿ ಜಮೀನಿನ ಬೆಲೆ ನಿಗದಿ ಮಾಡಲು ಹೊಸ ಮಾನದಂಡ ಅನುಸರಿಸಲಾಗುವುದು ಎಂದರು.ಕೃಷ್ಣಾ ಮೇಲ್ದಂಡೆ ಯೋಜನೆಯ ‘ಎ’ ಸ್ಕೀಂ ಯೋಜನೆಗಳು ಪೂರ್ಣಗೊಳ್ಳಲು ಇನ್ನೂ 1500 ಕೋಟಿ ರೂಪಾಯಿಯ ಅಗತ್ಯವಿದೆ. ಒಂದೆರಡು ಯೋಜನೆಗಳನ್ನು ಹೊರತುಪಡಿಸಿ ಈ ಎಲ್ಲ ಯೋಜನೆಗಳನ್ನು 2012ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.ಶಾಸಕರಾದ ಎಂ.ಬಿ. ಪಾಟೀಲ, ಎ.ಎಸ್. ಪಾಟೀಲ ನಡಹಳ್ಳಿ, ಅಪ್ಪು ಪಟ್ಟಣಶೆಟ್ಟಿ, ರಮೇಶ ಭೂಸನೂರ, ವಿಠ್ಠಲ ಕಟಕಧೋಂಡ, ಎಸ್.ಆರ್. ಪಾಟೀಲ, ನಾರಾಯಣಸಾ ಭಾಂಡಗೆ, ವೀರಣ್ಣ ಚರಂತಿಮಠ, ಜಿ.ಎಸ್. ನ್ಯಾಮಗೌಡ, ಮಾನಪ್ಪ ವಜ್ಜಲ, ದೊಡ್ಡನಗೌಡ ಪಾಟೀಲ, ಶ್ರೀಕಾಂತ ಕುಲಕರ್ಣಿ, ನೀರಾವರಿ ತಾಂತ್ರಿಕ ಸಲಹೆಗಾರ ಶ್ರೀರಾಮಯ್ಯ, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ. ಸತ್ಯಮೂರ್ತಿ. ಜಲಸಂಪನ್ಮೂಲ ಕಾರ್ಯದರ್ಶಿ ಶ್ರೀನಿವಾಸಾಚಾರ್ಯ, ಕೆ.ಬಿ.ಜೆ.ಎನ್.ಎಲ್. ವ್ಯವಸ್ಥಾಪಕ ನಿರ್ದೇಶಕ ಬಸವರಾಜು, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಚಿತ್ರದಲ್ಲಿದ್ದಾರೆ ಹಾಗೂ ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.ಕೃಷ್ಣಾ ಕೊಳ್ಳದ 17 ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದಿದ್ದರೂ ಈ ಜಿಲ್ಲೆಗಳ ಯಾವೊಬ್ಬ ಸಂಸದರು, ಬಹುತೇಕ ಶಾಸಕರು ಸಭೆಗೆ ಆಗಮಿಸಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry