ಭಾನುವಾರ, ನವೆಂಬರ್ 17, 2019
29 °C

ಶೀಘ್ರ ಬರಲಿದೆ ಹೈಟೆಕ್ ಖಾಸಗಿ ಬಸ್ ನಿಲ್ದಾಣ

Published:
Updated:

ಮಡಿಕೇರಿ: ನಗರ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಹೈಟೆಕ್ ಖಾಸಗಿ ಬಸ್‌ನಿಲ್ದಾಣದ ಕಾಮಗಾರಿ ಮುಂಬರುವ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆರಂಭ ಗೊಳ್ಳಲಿದೆ. ಸುಮಾರು 17.85 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಇದಾಗಿದೆ.ಮಡಿಕೇರಿ ನಗರದ ಹೃದಯ ಭಾಗದಲ್ಲಿ ಹಾಲಿ ಇರುವ ಖಾಸಗಿ ಬಸ್ ನಿಲ್ದಾಣ ಅತ್ಯಂತ ಕಿರಿದಾಗಿದ್ದು, ಹೆಚ್ಚುತ್ತಿರುವ ವಾಹನ ಹಾಗೂ ಜನಸಂದಣಿಯಿಂದಾಗಿ ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ.ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕೃಷಿ ವಿಶ್ವ ವಿದ್ಯಾನಿಲಯದ ಅಧೀನದ ಮೂರು ಎಕರೆ ಪ್ರದೇಶದಲ್ಲಿ ನಿರ್ಮಿಸುವ ಕುರಿತು ನಗರಸಭೆ ಆಡಳಿತ ಈ ಹಿಂದೆಯೇ ತೀರ್ಮಾನ ಕೈಗೊಂಡಿತ್ತಲ್ಲದೆ, ಕೇರಳದ ಕಣ್ಣನೂರಿನಲ್ಲಿರುವ ಬಸ್ ನಿಲ್ದಾಣದ ಮಾದರಿಯಲ್ಲಿ ಮಡಿಕೇರಿ ಬಸ್ ನಿಲ್ದಾಣವನ್ನು ನಿರ್ಮಿಸುವ ಚಿಂತನೆ ನಡೆಸಿತ್ತು. ಅಲ್ಲದೆ ಇದಕ್ಕೆ ಸಂಬಂಧಿ ಸಿದಂತೆ ಜಾಗ ಹಸ್ತಾಂತರ ಪ್ರಕ್ರಿಯೆ ಕೂಡಾ ನಡೆದಿತ್ತು.ಆದರೆ ಕೊನೆ ಗಳಿಗೆಯಲ್ಲಿ ವ್ಯಕ್ತಿಯೊಬ್ಬರು ಈ ಜಾಗ ಹಸ್ತಾಂತರದ ಪ್ರಕ್ರಿಯೆಯನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಕೃಷಿ ವಿವಿ ಹಾಗೂ ಮಡಿಕೇರಿ ನಗರಸಭೆಯ ನಡುವೆ ಜಾಗ ಹಸ್ತಾಂತರಕ್ಕೆ ಸಂಬಂಧಿಸಿದಂತೆ ನಡೆದಿರುವ ಪ್ರಕ್ರಿಯೆ ನಿಯಮಬದ್ಧವಾಗಿಲ್ಲ ಎಂದು ಆಕ್ಷೇಪಿಸುವುದರೊಂದಿಗೆ ಹೊಸದಾಗಿ ಪ್ರಕ್ರಿಯೆ ನಡೆಸುವಂತೆ ಸೂಚಿಸಿತ್ತು.ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾಗ ಸ್ವಾಧೀನಕ್ಕೆ ಕ್ರಮ ಕೈಗೊಂಡಿದ್ದು, ಇದು ಇದೀಗ ಅಂತಿಮ ಹಂತ ತಲುಪಿದೆ. ಇದರೊಂದಿಗೆ ಈ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಹೈಟೆಕ್ ಬಸ್ ನಿಲ್ದಾಣದ ನೀಲ ನಕಾಶೆಯೂ ಸಿದ್ಧಗೊಂಡಿದ್ದು, ನೀಲ ನಕಾಶೆಯನ್ನು ಬೆಂಗಳೂರಿನ ಬಸಂತ್ ಕನ್ಸಲ್ಟೆನ್ಸಿ ಸಿದ್ಧಪಡಿಸಿದೆ.ನೂತನ ಬಸ್ ನಿಲ್ದಾಣದಲ್ಲಿ ಸುಮಾರು 23 ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ 2 ಕೋಟಿ ರೂಪಾಯಿ ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಮತ್ತೊಂದೆಡೆ 1.65 ಕೋಟಿ ವೆಚ್ಚದಲ್ಲಿ 10-15 ಅಂಗಡಿ ಮಳಿಗೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಮಡಿಕೇರಿ ನಗರಕ್ಕೆ ಅಗತ್ಯವಿರುವ ಸಮುದಾಯ ಭವನವೊಂದನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಸ್ಟಾರ್ ಹೋಟೆಲ್ ಹಾಗೂ ರೆಸ್ಟೋರೆಂಟ್ ನಿರ್ಮಾಣಕ್ಕಾಗಿ 4.25 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, ರೆಸ್ಟೋರೆಂಟ್‌ನ ಒಳಾಂಗಣ ಹಾಗೂ ಹೊರಾಂಗಣ ಅಲಂಕಾರಕ್ಕಾಗಿ 1.50 ಕೋಟಿ ರೂ., ಚರಂಡಿ, ನೀರು ಸರಬರಾಜು, ರಸ್ತೆ ನಿರ್ಮಾಣಕ್ಕಾಗಿ 3.30 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ.ಇದರೊಂದಿಗೆ ಬಸ್‌ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ, ಆಟೋರಿಕ್ಷಾ ನಿಲ್ದಾಣ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಕಾಲು ಹಾದಿ, ವಿದ್ಯುದ್ದೀಪ, ಅವರಣ ಗೋಡೆ, ಭೂವಿನ್ಯಾಸ ಇತ್ಯಾದಿಗಾಗಿ ಒಂದು ಕೋಟಿ ರೂಪಾಯಿ ವೆಚ್ಚವಾಗಬಹುದೆಂದು ನಿರೀಕ್ಷಿಸಲಾಗಿದೆ.ಈ ಖಾಸಗಿ ಬಸ್ ನಿಲ್ದಾಣವನ್ನು ಖಾಸಗಿಯವರ ಸಹಯೋಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮುಂದಿನ 30 ವರ್ಷಗಳವರೆಗೆ ಈ ನಿಲ್ದಾಣವನ್ನು ಖಾಸಗಿಯವರೇ ನಿರ್ವಹಿಸಿ ಬಳಿಕ ನಗರಸಭೆಗೆ ಹಸ್ತಾಂತರಿಸಲಿದ್ದಾರೆ ಎಂದು ನಗರಸಭೆಯ ಅಧ್ಯಕ್ಷ ಎಚ್.ಎಂ.ನಂದಕುಮಾರ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.ಬಸ್ ನಿಲ್ದಾಣಕ್ಕೆ ಅಗತ್ಯವಿರುವ ಜಾಗ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.  ಮುಂದಿನ ಅಕ್ಟೋಬರ್ ಇಲ್ಲವೇ ನವೆಂಬರ್ ತಿಂಗಳಿನಲ್ಲಿ ಟೆಂಡರ್ ಆಹ್ವಾನಿಸಿ ಬಸ್ ನಿಲ್ದಾಣದ ಕಾಮಗಾರಿಯನ್ನು ಗುತ್ತಿಗೆ ನೀಡಲಾಗುವುದು ಎಂದು ವಿವರಿಸಿದರು.ಎಲ್ಲವೂ ಅಂದುಕೊಂಡಂತೆ ನಡದರೆ ಮುಂದಿನ ಒಂದು ವರ್ಷದೊಳಗೆ ನೂತನ ಹೈಟೆಕ್ ಬಸ್ ನಿಲ್ದಾಣ ತಲೆ ಎತ್ತಲಿದೆ. ಮಡಿಕೇರಿ ನಗರ ಹಾಗೂ ಜಿಲ್ಲೆಯ ಜನತೆಯ ಬಹುದಿನಗಳ ಕನಸು ನನಸಾಗಲಿದೆ.

ಪ್ರತಿಕ್ರಿಯಿಸಿ (+)