ಬುಧವಾರ, ಜನವರಿ 22, 2020
18 °C
ಜಿಲ್ಲಾ ವಾಲ್ಮೀಕಿ ಜಯಂತಿ ಆಚರಣೆ

ಶೀಘ್ರ ವಾಲ್ಮೀಕಿ ವಸತಿ ಶಾಲೆ: ಸಚಿವ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರವು ವಾಲ್ಮೀಕಿ ಸಮುದಾಯದ ಜತೆ ಎಲ್ಲ ಸಮುದಾಯಗಳ ಬಗ್ಗೆ ವಿಶೇಷ ಕಳಕಳಿ ಹೊಂದಿದೆ. ಜಿಲ್ಲೆಯಲ್ಲಿ ಶೀಘ್ರವೇ ₨ 8 ಕೋಟಿ ವೆಚ್ಚದ ವಾಲ್ಮೀಕಿ ವಸತಿ ಶಾಲೆಯೊಂದನ್ನು ಆರಂಭಿಸ­ಲಾಗು­ವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಭರವಸೆ ನೀಡಿದರು.ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಸಮಿತಿಯು ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ವಾಲ್ಮೀಕಿ ಜಯಂತಿಯಲ್ಲಿ ಮಾತ­ನಾಡಿ, ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ಸೂಕ್ತವಾದ ನಿವೇಶನ ಕಲ್ಪಿಸಿ­ಕೊಟ್ಟಲ್ಲಿ ಶೀಘ್ರವೇ 6 ರಿಂದ 10ನೇ ತರಗತಿಯವರೆಗಿನ ವಸತಿ ಶಾಲೆ­ಯನ್ನು ಆರಂಭಿಸಲಾಗುವುದು ಎಂದರು.ವಸತಿ ಶಾಲೆಯಲ್ಲದೇ ಮುಖ್ಯಮಂತ್ರಿ 30 ಜಿಲ್ಲೆಯಲ್ಲೂ ಒಂದೊಂದು ವಾಲ್ಮೀಕಿ ಭವನ ನಿರ್ಮಿಸುವ ಭರವಸೆ ನೀಡಿದ್ದು, ಇದಕ್ಕೆ ಪೂರಕವಾಗಿ ಜಿಲ್ಲಾ ಕೇಂದ್ರದಲ್ಲಿ ಸುಮಾರು ₨ 2 ರಿಂದ 3 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಸಲಾಗುವುದು. ತಾಲ್ಲೂಕು ಕೇಂದ್ರಗಳಲ್ಲೂ ಸಹ ₨ 1 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದೆಲ್ಲದಕ್ಕೂ ನಮಗೆ ಸಕಾಲದಲ್ಲಿ ನಿವೇಶನ ದೊರೆಯಬೇಕಿದೆ ಎಂದು ತಿಳಿಸಿದರು.ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯ ಸರ್ಕಾರವು ಎಲ್ಲ ಸಮುದಾಯ­ಗಳ ಏಳಿಗೆಗಾಗಿ ನೂತನ ಯೋಜನೆ­ಗಳನ್ನು ಅನುಷ್ಠಾನಕ್ಕೆ ತರುತ್ತಿದೆ,  ವಾಲ್ಮೀಕಿ ಸಮುದಾಯದ ತಳವಾರ ಮತ್ತು ಪರಿವಾರ ಉಪಜಾತಿಗಳನ್ನು ಪರಿ­ಶಿಷ್ಟ ಪಂಗಡಕ್ಕೆ ಸೇರ್ಪಡೆ­ಗೊಳಿಸ­ಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ಮಾತನಾಡಿ, ಜಿಲ್ಲಾ ಕೇಂದ್ರದ ಪ್ರಮಖ ಸ್ಥಳದ ಬಳಿ ನಿವೇಶನವೊಂದನ್ನು ಸ್ವಾಧೀನ­ಪಡಿಸಿ­ಕೊಂಡು ವಾಲ್ಮೀಕಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.ವಿಧಾನ ಪರಿಷತ್‌ ವಿರೋಧ ಪಕ್ಷದ ಮಾಜಿ ನಾಯಕ ವಿ.ಎಸ್‌.ಉಗ್ರಪ್ಪ ಮಾತನಾಡಿ, ಸ್ವಾತಂತ್ರ ಸಂಗ್ರಾಮದಲ್ಲಿ ಹುತಾತ್ಮರಾದ ಮುಧೋಳದ ಹಲಗಲಿ ಬೇಡರ ಸಮಾಧಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ₨ 5 ಕೋಟಿ ಬಿಡುಗಡೆ ಮಾಡ­ಬೇಕು. ರಾಜನಹಳ್ಳಿ ವಾಲ್ಮೀಕಿ ಪೀಠಕ್ಕೆ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕಾಲೇಜು ಆರಂಭಿಸಲು ಅವಕಾಶ ನೀಡ­ಬೇಕು. ನಾಲ್ಕನೇ ದೊಡ್ಡ ಜಾತಿ­ಯಾಗಿ­ರುವ ನಾಯಕ ಸಮುದಾಯದ ಏಳ್ಗೆಗೆ ಅನುದಾನ ಬಿಡುಗಡೆ ಮಾಡಬೇಕು ಎಂದರು.ರಾಜನಹಳ್ಳಿ ವಾಲ್ಮೀಕಿ ಪೀಠದ ಮಠಾಧೀಶ ಪ್ರಸನ್ನಾನಂದ ಸ್ವಾಮೀಜಿ, ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ, ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್‌.­ಶಿವಶಂಕರ ರೆಡ್ಡಿ, ಶಾಸಕರಾದ ಡಾ. ಕೆ.ಸುಧಾಕರ್‌, ಎಂ.ರಾಜಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಎನ್‌.­ಚಿನ್ನಪ್ಪ, ಉಪಾಧ್ಯಕ್ಷ ರಾಘವೇಂದ್ರ ಹನುಮಾನ್‌, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಸಮಿತಿ ಮುಖಂಡರಾದ ಬಂಕ್‌ ಮುನಿಯಪ್ಪ, ಕೆ.ಟಿ.ನಾರಾಯಣಸ್ವಾಮಿ, ಪಿ.ಮುನಿರಾಜು, ಎನ್‌.ಸುಬ್ಬರಾಯಪ್ಪ, ಕೆ.ವಿ.ಗವಿರಾಯಪ್ಪ, ಎಸ್‌.­ಎನ್‌.­ಅಶ್ವತ್ಥ­ನಾರಾಯಣ, ಎನ್‌.ನಾಗಪ್ಪ, ನರಸಿಂಹ­ಮೂರ್ತಿ, ಆವಲಕೊಂಡರಾಯಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)