ಶನಿವಾರ, ಮೇ 8, 2021
26 °C

ಶೀಘ್ರ ಶಿಕ್ಷೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆ ಇನ್ನೂ ನೆನಪಿನಿಂದ ಮಾಸಿಲ್ಲ. ಈ ಘಟನೆಯಲ್ಲಿ ನೊಂದ ಆ ವಿದ್ಯಾರ್ಥಿನಿ, ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಿ ಕಾಲೇಜು ತೊರೆದುಹೋಗಿರುವ ವಿಚಾರ ಇತ್ತೀಚೆಗೆ ವರದಿಯಾಗಿದೆ. ಈಗ ಮತ್ತೊಂದು ಅತ್ಯಾಚಾರ ಪ್ರಕರಣದ ಸರದಿ.ಮಣಿಪಾಲ ವಿಶ್ವವಿದ್ಯಾಲಯ ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಡೆಸಿರುವ ಸಾಮೂಹಿಕ ಅತ್ಯಾಚಾರದ ಈ ಪ್ರಕರಣ ರಾಜ್ಯದಲ್ಲಿ ತಲ್ಲಣ ಉಂಟುಮಾಡಿದೆ. ನಮ್ಮ ರಾಜ್ಯವಷ್ಟೇ ಅಲ್ಲ, ದೇಶ, ವಿದೇಶಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕೇಂದ್ರ ಸ್ಥಳವೆನಿಸಿದ ಮಣಿಪಾಲದಲ್ಲಿ ಇಂತಹದೊಂದು ಘಟನೆ ನಡೆದಿರುವುದು ಆಘಾತಕಾರಿ. ಹಿಂದೆಂದೂ ಇಂತಹ ಘಟನೆ ಇಲ್ಲಿ ವರದಿಯಾಗಿರಲಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಸಾವು, ರಾಷ್ಟ್ರದಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು.ಈ ಪ್ರತಿಭಟನೆಗೆ ಮಣಿದ ಸರ್ಕಾರ, ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುವಂತಹ 2013ರ ಅಪರಾಧ ಕಾನೂನು ತಿದ್ದುಪಡಿ ಕಾಯಿದೆಯನ್ನು ರಾಷ್ಟ್ರದಲ್ಲಿ ಈಗಾಗಲೇ ಜಾರಿಗೊಳಿಸಿದೆ.  ಈ ಎಲ್ಲಾ ಕ್ರಮಗಳ ನಂತರವೂ ಅತ್ಯಾಚಾರ ಪ್ರಕರಣಗಳು ವರದಿಯಾಗುವುದು ಕಡಿಮೆಯಾಗಿಲ್ಲ ಎಂದರೆ ಕಾನೂನಿನ ಭಯ ಅಪರಾಧಿಗಳಿಗಿಲ್ಲವಾಗಿದೆ ಎಂದೇ ಹೇಳಬೇಕಾಗುತ್ತದೆ. ಯಾವುದೇ ಅಪರಾಧಕ್ಕೆ ತ್ವರಿತವಾಗಿ ಶಿಕ್ಷೆಯನ್ನು ಅನುಷ್ಠಾನಗೊಳಿಸಿದಲ್ಲಿ ಅದು ಕಾನೂನಿನ ಭಯ ಸೃಷ್ಟಿಸುತ್ತದೆ ಎಂಬುದು ಸಾಬೀತಾಗಿರುವ ಸಂಗತಿ. ಇದು ನಮ್ಮಲ್ಲಿನ್ನೂ ಸಾಧ್ಯವಾಗುತ್ತಿಲ್ಲ ಎಂಬುದೇ ಮುಖ್ಯ ದೋಷ.2012ರ ಸಾಲಿನಲ್ಲಿ ಮಹಿಳೆ ವಿರುದ್ಧ ಹೆಚ್ಚು ಅಪರಾಧಗಳು ನಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 10ನೇ ಸ್ಥಾನದಲ್ಲಿದೆ ಎಂಬುದು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕದ (ಎನ್‌ಸಿಆರ್‌ಬಿ) ವರದಿಯಲ್ಲಿ ವ್ಯಕ್ತವಾಗಿದೆ. ಈ ವಿಚಾರ ಗಂಭೀರ ಪರಿಶೀಲನೆಗೆ ಅರ್ಹ. ಪ್ರತಿಷ್ಠಿತ ಮಣಿಪಾಲದ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ರಾತ್ರಿ ವೇಳೆ ಅಭ್ಯಾಸ ಮಾಡಿ ಹತ್ತಿರದಲ್ಲೇ ಇರುವ ಮನೆಗೆ ನಡೆದು ಹೋಗುವುದೂ ವಿದ್ಯಾರ್ಥಿನಿಯರಿಗೆ ಅಸುರಕ್ಷಿತ ಎನಿಸುವ ಸ್ಥಿತಿ ರಾಜ್ಯದ ಪ್ರತಿಷ್ಠೆಗೇ ಕುಂದು ತರುವಂತಹದ್ದು.ಈ ಘಟನೆ, ಹೊರ ರಾಜ್ಯಗಳು ಹಾಗೂ ಹೊರ ದೇಶಗಳ ವಿದ್ಯಾರ್ಥಿನಿಯರು ಹಾಗೂ ಪಾಲಕರಲ್ಲಿ ಸೃಷ್ಟಿಸಬಹುದಾದ ಅಭದ್ರತೆಯ ಭಾವನೆಗಳನ್ನೂ ಪರಿಗಣಿಸಬೇಕಾಗುತ್ತದೆ. ಈಗಾಗಲೇ ನೈತಿಕ ಪೊಲೀಸ್‌ಗಿರಿಯ ದಾಂದಲೆಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ, ಮಹಿಳೆಯರಿಗೆ ಅಸುರಕ್ಷಿತ ಎನಿಸುವ ಕಳಂಕ ಅಂಟಿದೆ. ಮಹಿಳೆಯ ಚಲನಶೀಲತೆ, ಸ್ವಾತಂತ್ರ್ಯವನ್ನೇ ನಿಯಂತ್ರಿಸುತ್ತಾ ಅಸುರಕ್ಷತೆಯ ಭಾವನೆ ಸೃಷ್ಟಿಸುವ ಇಂತಹ ಘಟನೆಗಳ ವಿರುದ್ಧ ಉಗ್ರ ಕ್ರಮ ಅಗತ್ಯ.ಆರೋಪಿಗಳ ಪತ್ತೆಯ ಜೊತೆಗೆ ವಿಚಾರಣೆಯನ್ನೂ ಶೀಘ್ರ ಪೂರೈಸಿ ಆರೋಪಿಗಳನ್ನು ಶಿಕ್ಷೆಗೊಳಪಡಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿನದು. ಮೊಕದ್ದಮೆ ದಾಖಲು ಮಾಡುವುದರಿಂದ ಹಿಡಿದು ತನಿಖೆಯ ವಿವಿಧ ಹಂತಗಳಲ್ಲಿ ಪೊಲೀಸ್ ವ್ಯವಸ್ಥೆ ಹೆಚ್ಚಿನ ವೃತ್ತಿಪರತೆ ಪ್ರದರ್ಶಿಸುವುದು ಅಗತ್ಯ. ಮಹಿಳೆಯನ್ನು ನಿರ್ಬಂಧಿಸಲು ಯತ್ನಿಸುವ ಇಂತಹ ಲೈಂಗಿಕ ಹಾಗೂ ಸಾಮಾಜಿಕ ಅಪರಾಧವನ್ನು ಸಹಿಸಲಾಗದು ಎಂಬಂಥ ಗಟ್ಟಿ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು ಸರ್ಕಾರದ ಕರ್ತವ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.