ಬುಧವಾರ, ಮೇ 18, 2022
27 °C

ಶೀತಲ್ ಚೌಗುಲೆ ಕೊಲೆ ಪ್ರಕರಣ: ಪತಿ ಸೇರಿ ಐವರಿಗೆ ಶಿಕ್ಷೆ ಇಂದು ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೀತಲ್ ಚೌಗುಲೆ ಕೊಲೆ ಪ್ರಕರಣ: ಪತಿ ಸೇರಿ ಐವರಿಗೆ ಶಿಕ್ಷೆ ಇಂದು ಪ್ರಕಟ

ಬೆಳಗಾವಿ: ಐದು ವರ್ಷಗಳ ಹಿಂದೆ ನಗರದಲ್ಲಿ ಕೋಲಾಹಲ ಮೂಡಿಸಿದ್ದ ಶೀತಲ್ ಚೌಗುಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ರವೀಂದ್ರ ಚೌಗುಲೆ ಸೇರಿದಂತೆ ಐವರನ್ನು ತಪ್ಪಿತಸ್ಥರೆಂದು 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಗಣ್ಣ ಪಾಟೀಲ ಸೋಮವಾರ  ಆದೇಶದಲ್ಲಿ ತಿಳಿಸಿದ್ದಾರೆ. ಈ ಐವರಿಗೆ ಶಿಕ್ಷೆಯ ಪ್ರಮಾಣವನ್ನು ಮಂಗಳವಾರ ಪ್ರಕಟಿಸಲಿದ್ದಾರೆ.ಸರ್ಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ರವಿ ಚಾಟೆ ಅವರು, `ಶೀತಲ್ ಅವರನ್ನು ಪತಿ ರವೀಂದ್ರ ರಕ್ಷಿಸಬೇಕಿತ್ತು. ಆದರೆ, ಇಲ್ಲಿ ಆತನೇ ಪತ್ನಿಯನ್ನು ಹಂತಕರ ವಶಕ್ಕೆ ನೀಡುವ ಮೂಲಕ ಆಕೆಯ ಚಾರಿತ್ರ್ಯಹರಣಕ್ಕೂ ಕಾರಣೀಭೂತರಾಗಿದ್ದಾನೆ. ಇದೊಂದು ಅತಿ ವಿರಳ ಪ್ರಕರಣವಾಗಿದ್ದು, ಅಪರಾಧಿಗಳಿಗೆ ಅತಿ ಹೆಚ್ಚಿನ ಶಿಕ್ಷೆ ನೀಡಬೇಕು~ ಎಂದು ನ್ಯಾಯಾಧೀಶರನ್ನು ಕೋರಿದರು.`ಬೆಳಗಾವಿ ತಾಲ್ಲೂಕಿನ ಮನ್ನೂರ ಗ್ರಾಮದ ನಿವಾಸಿ, ಗುತ್ತಿಗೆದಾರ ಆರ್. ಡಿ. ಚೌಗುಲೆ ಅವರ ಪುತ್ರ ರವೀಂದ್ರ   1998ರಲ್ಲಿ ಶೀತಲ್ ಅವರನ್ನು ವಿವಾಹವಾಗಿದ್ದ. ನಿಖಿತಾ, ಶ್ರೇಯಾ ಹಾಗೂ ಮನಸ್ವಿ ಎಂಬ ಮೂವರು ಪುತ್ರಿಯರು ಇದ್ದಾರೆ. ಆದರೆ, ರವೀಂದ್ರನಿಗೆ ವಿವಾಹ ಪೂರ್ವದಲ್ಲೇ ಪ್ರಕರಣದ ಆರೋಪಿಯಾಗಿದ್ದ ರೀನಾ ತಹಸೀಲ್ದಾರ ಎಂಬವರೊಂದಿಗೆ ಅನೈತಿಕ ಸಂಬಂಧವಿತ್ತು. ಶೀತಲ್ ಬದುಕಿರುವವರೆಗೂ ರವೀಂದ್ರನನ್ನು ವಿವಾಹವಾಗುವುದಿಲ್ಲ ಎಂದು ರೀನಾ ಹೇಳಿದ್ದಳು. ಹೀಗಾಗಿ ಇಬ್ಬರೂ ಸೇರಿಕೊಂಡು ಶೀತಲ್ ಕೊಲೆಗೆ ಸಂಚು ರೂಪಿಸಿದ್ದರು.ಬಳಿಕ ರವೀಂದ್ರ, ರಂಜಿತ ಶಿಂತ್ರೆ ಎಂಬಾತನನ್ನು  ಸಂಪರ್ಕಿಸಿ, ಶೀತಲ್ ಕೊಲೆಗೆ ರೂ 4 ಲಕ್ಷ  ಸುಪಾರಿ ನೀಡಿದ್ದ~ ಎಂದು ವಿಶೇಷ ಸರ್ಕಾರಿ ಅಭಿಯೋಜಕ ರವಿ ಚಾಟೆ ವಿವರಿಸಿದರು.2007 ಆಗಸ್ಟ್ 11 ರಂದು ರವೀಂದ್ರ,  ಶೀತಲ್‌ಗೆ ಕರೆ ಮಾಡಿ, ಶ್ರಾವಣ ಪೂಜೆಗೆ ಅಗತ್ಯ ವಸ್ತುಗಳನ್ನು ಖರೀದಿಸಿ, ಜೊತೆಯಲ್ಲೇ ಊಟ ಮಾಡಲು ಮಾರುಕಟ್ಟೆಗೆ ಬಾ ಎಂದು ಕರೆದ. ಹೀಗಾಗಿ ಮನೆಯಿಂದ ಬಸ್ಸಿನಲ್ಲಿ ಬಂದ ಶೀತಲ್, ಕಾರಿನಲ್ಲಿ ಪತಿ ಕಾಯುತ್ತಿದ್ದ ಹಿಂಡಲಗಾ ಗಣಪತಿ ಗುಡಿ ಬಳಿ ಇಳಿದುಕೊಂಡಳು. ಬಳಿಕ ರವೀಂದ್ರ ಆಕೆಯನ್ನು ಲಕ್ಷ್ಮೀನಗರದ `ರಾಜದೀಪ ಬಂಗಲೆ~ಗೆ ಕರೆದುಕೊಂಡು ಹೋದ.ಅದಾಗಲೇ ಅಲ್ಲಿ ರಂಜಿತ ಶಿಂತ್ರೆ, ವಿಜಯಾನಂದ ಅಲಿಯಾಸ್ ದಿಂಕು ಶಿಂಧೆ, ಬಂಗಲೆಯ ಮಾಲೀಕ ರಾಜೇಶ ಮೆಣಸಿ, ಪರಶುರಾಮ ಕಾಂಬಳೆ ಹಾಗೂ ಪ್ರವೀಣ ಶಿಂತ್ರೆ ಇದ್ದರು. ಮೀಟಿಂಗ್ ಇದೆ ಎಂದು ಗೆಳೆಯರಿಗೆ ಹೇಳಿ ಪತ್ನಿಯನ್ನು ಅಲ್ಲೇ ಬಿಟ್ಟು ರವೀಂದ್ರ ಹೊರ ಹೋಗಿ ನಂತರ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ.ರಂಜೀತ ಶಿಂತ್ರೆ, ವಿಜಯಾನಂದ ಶಿಂಧೆ, ರಾಜೇಶ ಮೆಣಸೆ, ಪರಶುರಾಮ ಕಾಂಬಳೆ ಹಾಗೂ ಪ್ರವೀಣ ಶಿಂತ್ರೆ ಅವರು ಶೀತಲ್ ಮೇಲೆ ಅತ್ಯಾಚಾರ ನಡೆಸಿ, 2007 ಆಗಸ್ಟ್ 12 ರಂದು ರಾತ್ರಿ 8 ಗಂಟೆಗೆ ಉಸಿರುಗಟ್ಟಿಸಿ ಕೊಂದು,  ದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಕಟ್ಟಿಕೊಂಡು ಕಾರಿನಲ್ಲಿ ಹೋಗಿ ಖಾನಾಪುರದ ಕಲ್ಮನಿ ನಾಲಾದಲ್ಲಿ ಎಸೆದಿದ್ದರು.ಪ್ರಕರಣದ 5ನೇ ಆರೋಪಿಯಾಗಿದ್ದ ಪರಶುರಾಮ ಕಾಂಬಳೆ ಅವರನ್ನು ನ್ಯಾಯಾಲಯ ಆರೋಪದಿಂದ  ಮುಕ್ತಗೊಳಿಸಿದೆ.ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮಹಿಳೆಯರೆಲ್ಲ ಬೀದಿಗಿಳಿದು ಎರಡು ದಿನ ನಗರದಲ್ಲಿ ಬಂದ್ ಆಚರಿಸಿದ್ದರು. ಈ ಪ್ರಕರಣವು ನಗರದ ಮಹಿಳೆಯರಲ್ಲಿ ಭೀತಿ ಮೂಡಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.