ಶುಕ್ರವಾರ, ಏಪ್ರಿಲ್ 23, 2021
31 °C

ಶೀತಲ್ ಪತ್ರ!

ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಹಾಯ್, ನಾನು ಶೀತಲ್...

ಈಗ ಎಲ್ಲರ ಬಾಯಲ್ಲೂ ನನ್ನದೇ ಮಾತು. ಅಬ್ಬಾ, ಏನ್ ಚಳಿ. ನವೆಂಬರ್‌ನಲ್ಲೇ  ಹೀಗಾದ್ರೆ, ಇನ್ನು ಡಿಸೆಂಬರ್ -ಜನವರಿ ಕಳೆಯೋದು ಹೆಂಗೆ? ಅಂಥ ಜನರು ನಡುಗುತ್ತಲೇ ಹಲ್ಲುಕಡಿಯುತ್ತಿದ್ದಾರೆ. ಪ್ರತಿ ವರ್ಷ ಡಿಸೆಂಬರ್‌ಗೆ ಬಂದು ಎಲ್ಲರಿಗೂ ಕಚಗುಳಿ ಇಡುತ್ತಿದ್ದ ನಾನು ಈ ಬಾರಿ ಒಂದು ತಿಂಗಳು ಮುಂಚಿತವಾಗಿಯೇ ಕಾಲಿಟ್ಟಿದ್ದೇನೆ. ಅದಕ್ಕೆ ಕೆಲವರಿಗೆ ತುಸುಕೋಪ. ಆ ಸಿಟ್ಟಿನಿಂದಲೋ ಏನೋ, ಎಲ್ಲರೂ ನನ್ನನ್ನು ಈಗ ಅವಧಿಗೂ ಮೊದಲೇ ಜನಿಸಿದ ಕೂಸಿನಂತೆ ಕಾಣುತ್ತಿದ್ದಾರೆ.ಮಣ ಮಣ ಅಂತ ಮನಸ್ಸಿನಲ್ಲಿ ಬೈದುಕೊಳ್ಳುತ್ತಲೇ ಕೆಲಸದಲ್ಲಿ ತೊಡಗುತ್ತಿದ್ದಾರೆ. ಅದಕ್ಕೆ ನಾನೇನ್ಮಾಡಕ್ಕಾಗುತ್ತೆ. ಆ ಬಗ್ಗೆ ನಂಗೆ ಬೇಜಾರೇನೂ ಇಲ್ಲ. ಆದರೆ, ಹೊಸದಾಗಿ ಮದುವೆಯಾದವರಿಗೆ ಮಾತ್ರ ನನ್ನ ಬಗ್ಗೆ ವಿಶೇಷ ಪ್ರೀತಿ. ನನಗೂ ಅಷ್ಟೇ ಅವರ ಮೇಲೆ ವಿಶೇಷ ಅಕ್ಕರೆ. ಎಷ್ಟೇ ಆದ್ರೂ ನಾನು ಪ್ರಣಯಿನಿ ಅಲ್ವಾ!ಅಂದಹಾಗೆ, ನನಗೂ ಬೆಂಗಳೂರಿಗೆ ಇಷ್ಟು ಬೇಗ ಬರಬೇಕು ಅಂತ ಏನೂ ಆಸೆ ಇರಲಿಲ್ಲ. ಆದರೆ, ಏನ್ಮಾಡೋದು? ಈಗ ಆಕಾಶ ಸ್ವಚ್ಛವಾಗಿದೆ. ಮುಗಿಲಲ್ಲಿ ಕಟ್ಟಬೇಕಿದ್ದ `ಮೋಡ~ರಾಜ ಈಗ ರಜೆ ತೆಗೆದುಕೊಂಡಿದ್ದಾನೆ. ಅವನ ಅನುಪಸ್ಥಿತಿಯಲ್ಲಿ ನಾನು ಹಾಜರಾಗಬೇಕಾಯ್ತು. ವಾತಾವರಣದಲ್ಲಿ ಉಷ್ಣಾಂಶ ಕಡಿಮೆ ಆಗಿರುವುದರಿಂದ ನನ್ನ ಆರ್ಭಟ ಹೆಚ್ಚಿದೆ. ಹಾಗಾಗಿ ಮುಂಜಾನೆ ವಾಯುವಿಹಾರ ಮಾಡುವವರು, ಕಚೇರಿ ಹಾಗೂ ಶಾಲೆಗೆ ತೆರಳುವ ಜನರಿಗೆ ನಾನು ಕಿರಿ ಕಿರಿ ಎನಿಸುತ್ತಿದ್ದೇನೆ. ಅವನಿದ್ದಿದ್ದರೆ ನಗರ ಸ್ವಲ್ಪ ಬೆಚ್ಚಗೆ (ಉಷ್ಣಾಂಶ) ಇರುತ್ತಿತ್ತು. ನನ್ನ ತೀವ್ರತೆಯೂ ಕಮ್ಮಿ ಆಗುತ್ತಿತ್ತು. ನೋಡಿ, ಕರೆಯದೇ ಬಂದಿದ್ದರಲ್ಲಿ ನನ್ನ ತಪ್ಪೇನೂ ಇಲ್ಲ. ಅದಕ್ಕೆ ಕಾರಣ ಬೇರೆ ಇದೆ. ಅದೇನು ಅಂತ ನನ್ನನ್ನು ಅಳೆದು ತೂಗೋ ಹವಾಮಾನ ಇಲಾಖೆ ತಜ್ಞ ಪುಟ್ಟಣ್ಣ ಅವರ ಮಾತುಗಳಲ್ಲೇ ಕೇಳಿ...“ಚಳಿಗಾಲ ಇನ್ನೂ ಆರಂಭವಾಗಿಲ್ಲ. ಸಾಮಾನ್ಯವಾಗಿ ಚಳಿಗಾಲ ಶುರುವಾಗುವುದು ಡಿಸೆಂಬರ್‌ನಿಂದ. ಆದರೆ ಉತ್ತರದಿಂದ ಶೀತಗಾಳಿ ಬೀಸುತ್ತಿರುವುದರಿಂದ ನಗರದ ಜನರಿಗೆ ಚಳಿಯ ಅನುಭವ ಅಕಾಲಿಕವಾಗಿಯೇ ತಗುಲಿಕೊಂಡಿದೆ.ಅಲ್ಲದೇ ಚಳಿಗಾಲದಲ್ಲಿ ರಾತ್ರಿ ಸಮಯ ಹೆಚ್ಚುವುದರಿಂದ ಚಳಿಯೂ ಹೆಚ್ಚು. ಪರಿಣಾಮ ಎಲ್ಲರೂ ಥರಥರ ಅಂತ ನಡುಗುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಉಷ್ಣಾಂಶದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡು ಬಂದಿದೆ.  ಬೆಂಗಳೂರಷ್ಟೇ ಅಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ 5ರಿಂದ 8 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ. ಪರಿಣಾಮವಾಗಿ ಚಳಿಗಾಲಕ್ಕೆ ಮುನ್ನವೇ ಜನ ಚಳಿಗೆ ನಡುಗುವಂತಾಗಿದೆ.ಬಂಗಾಳ ಕೊಲ್ಲಿಯ ಆಗ್ನೇಯ ಮತ್ತು ಮಧ್ಯಪೂರ್ವ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಇದರ ವಿಸ್ತರಣೆಯಾದರೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಆವರಿಸಲಿದ್ದು, ಚಳಿ ಪ್ರಮಾಣ ಕಡಿಮೆಯಾಗಲಿದೆ.ಕೆಲವು ದಿನದ ಹಿಂದೆ ಬೆಂಗಳೂರಿನ ಸುತ್ತಮುತ್ತ 10 ಡಿಗ್ರಿ ತಾಪಮಾನ ದಾಖಲಾಗಿತ್ತು. ಈಗ 13.3 ಡಿಗ್ರಿ ಇದೆ. ನಗರದಲ್ಲಿ ಕೆಲದಿನಗಳಂತೂ ತಾಪಮಾನ ಕುಸಿತದ ಏರಿಳಿತವಂತೂ ಇದ್ದೇ ಇರುತ್ತದೆ”.ನೋಡಿದ್ರಾ, ಪುಟ್ಟಣ್ಣ ಅವರ ಮಾತು ಕೇಳಿದ ಮೇಲೆ ನಿಮಗೆ ನನ್ನ ಮೇಲೆ ಬಂದಿರುವ ಕೋಪ ತುಸು ಶಮನವಾಗಿರಬಹುದು. ಇನ್ನೂ ನಿಮ್ಮ ಮನಸ್ಸಿನಲ್ಲಿ ಸಿಟ್ಟು ಉಳಿದುಕೊಂಡಿದ್ರೆ, ಬೆಂಗಳೂರು ಕೃಷಿ ವಿವಿ ಹವಾಮಾನ ವಿಭಾಗದ ಪ್ರೊ. ಎಂ.ಬಿ.ರಾಜೇಗೌಡ ಅವರ ಮಾತುಗಳನ್ನು ಕೇಳಿಬಿಡಿ:

`ಕರ್ನಾಟಕದ ಒಳ ಪ್ರದೇಶಗಳತ್ತ ಉತ್ತರ ದಿಕ್ಕಿನಿಂದ ಒಣಗಾಳಿ ಜತೆಗೆ ಶೀತಗಾಳಿಯೂ ನುಸುಳುತ್ತಿದೆ. ಆದ್ದರಿಂದ ನಗರದಲ್ಲಿ ದಿಢೀರನೆ ಚಳಿ ಕಾಣಿಸಿಕೊಂಡಿದೆ. ಕರ್ನಾಟಕದ ಇತರೆ ಭಾಗಗಳ್ಲ್ಲಲೂ ಇದೇ ಪರಿಸ್ಥಿತಿ ಇದೆ. ಇದು ಫೆಬ್ರುವರಿ ಮೊದಲ ವಾರದವರೆಗೂ ಮುಂದುವರಿಯಲಿದೆ.ಬೆಂಗಳೂರಿನಲ್ಲಿ ಸರಾಸರಿಯಾಗಿ 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಇರಬೇಕು. ಆದರೆ, ನಗರ 13 ಡಿಗ್ರಿ ಸೆಲ್ಸಿಯಸ್ ಇದೆ. ಗಾಳಿಯಲ್ಲಿ ನೀರಿನ ಅಂಶ ಕಡಿಮೆಯಾಗಿ ಶುಷ್ಕ ವಾತಾವರಣ ಇದೆ. ಇವೆಲ್ಲವೂ ತಾಪಮಾನ ಕುಗ್ಗಿಸಿ, ಶೀತದ ಅಲೆ ಉಂಟು ಮಾಡಲು ಕಾರಣವಾಗಿವೆ~.ಅಬ್ಬ. ಈಗ ನಿಮಗೆ ನನ್ನ ಮೇಲಿರುವ ಅಸಮಾಧಾನ ಎಲ್ಲ ದೂರಾಯ್ತು ಅಲ್ವಾ. ಮತ್ತೆ ಯಾಕೆ ಸಿಡುಕು. ಇನ್ನೊಂದು ವಿಷ್ಯಾ ಗೊತ್ತಾ?. ಚಳಿಗಾಲ ಬಂತೂ ಅಂದ್ರೆ, ಅವರೆಕಾಯಿ ಸೊಗಡೂ ಜಾಸ್ತಿ. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಅವರೆ ಇಳುವರಿ ಮೇಲೂ ತುಸು ಹೊಡೆತ ಬಿದ್ದಿದೆ. ಆದರೆ ಫಸಲು ಅಷ್ಟೇನೂ ಕೈಕೊಡಲ್ಲ ಬಿಡಿ.ನೀರಾವರಿ ಭೂಮಿ ಇರುವವರು ಬೆಂಗಳೂರು ಕೃಷಿ ವಿವಿ ಸಂಶೋಧಿಸಿದ `ಹೆಬ್ಬಾಳ~ ಅವರೆ ತಳಿ ಬೆಳೆದಿದ್ದಾರೆ. ಇದು ನವೆಂಬರ್ ಅಂತ್ಯಕ್ಕೆ ಫಸಲು ಕೊಡಲಿದೆ. ನಾಟಿ ಅವರೆ ತಿನ್ನಬೇಕು ಅಂದ್ರೆ ಇನ್ನೂ ಒಂದು ತಿಂಗಳು ಕಾಯಬೇಕು. ಯಾಕಂದ್ರೆ, ನಾಟಿ ಅವರೆ ಈಗಷ್ಟೇ ಹೂ ಕಟ್ಟಲು ಶುರು ಮಾಡಿದೆ.ಋತುಮಾನಗಳು ಮನುಷ್ಯನಿಗೆ ಹೊಸತೇನೂ ಅಲ್ಲ. ಹಾಗಾಗಿ ಅವಧಿಗೂ ಮೊದಲೇ ಬಂದಿದ್ದೇನೆ ಅಂತ ನನ್ನ ಬಗ್ಗೆ ಯಾರೂ ಭಯ ಬೀಳುವ ಅಗತ್ಯ ಕೂಡ ಇಲ್ಲ. ಡಿಸೆಂಬರ್ 15ರ ನಂತರ ನನ್ನ ಆರ್ಭಟ ಇನ್ನೂ ಹೆಚ್ಚುತ್ತೆ. ಅಲ್ಲಿಯವರೆಗೂ ನನ್ನನ್ನು ಅಪ್ಪಿ ಸುಖಿಸಿ. ಯಾಕಂದ್ರೆ, ಎಷ್ಟೇ ಆದ್ರೂ ನಾನು ಪ್ರಣಯಿನಿ ಅಲ್ವಾ!

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.