ಶುಕ್ರವಾರ, ನವೆಂಬರ್ 15, 2019
21 °C

ಶೀಲಾ ದೀಕ್ಷಿತ್ ನಿಂದಿಸಿದ್ದ ನಿರೂಪಕ ಪಾಲ್ ಹೆನ್ರಿ....

Published:
Updated:

ಮೆಲ್ಬರ್ನ್ (ಪಿಟಿಐ):  ನ್ಯೂಜಿಲೆಂಟ್ ಟಿ.ವಿ. ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಜನಾಂಗೀಯವಾಗಿ ಅಣಕಿಸಿದ ವಿವಾದಿತ ನಿರೂಪಕ ಪಾಲ್ ಹೆನ್ರಿ ವಿರುದ್ಧ ಆ ದೇಶದ ಪ್ರಸರಣ ಗುಣಮಟ್ಟಗಳ ಪ್ರಾಧಿಕಾರ (ಬಿಎಸ್‌ಎ) 2444 ಡಾಲರ್‌ಗಳ ದಂಡ ವಿಧಿಸಿದೆ.ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿ ಕಳೆದ ಅಕ್ಟೋಬರ್‌ನಲ್ಲಿ ನಡೆಸಿದ ಟಿ.ವಿ. ಚರ್ಚಾ ಕಾರ್ಯಕ್ರಮದಲ್ಲಿ ಶೀಲಾ ದೀಕ್ಷಿತ್ ಅವರ ಹೆಸರನ್ನು ವ್ಯಂಗ್ಯವಾಗಿ ಉಲ್ಲೇಖಿಸಿ ಹಾಸ್ಯ ಮಾಡಿ ನಿಂದಿಸಿದ ಹೆನ್ರಿ ಅವರನ್ನು ಬಿಎಸ್‌ಎ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಹೆನ್ರಿ ಅವರ ನಡವಳಿಕೆಯು ಸಭ್ಯತೆ ಮತ್ತು ನ್ಯಾಯದ ಉಲ್ಲಂಘನೆಯಾಗಿದ್ದು, ಭೇದದಿಂದ ಕೂಡಿದೆ.

 

ಆದ್ದರಿಂದ ಈ ತಪ್ಪಿಗೆ 2444 ನ್ಯೂಜಿಲೆಂಡ್ ಡಾಲರ್‌ಗಳ ದಂಡವನ್ನು ಪಾವತಿಸುವಂತೆ ಕಾರ್ಯಕ್ರಮ ಏರ್ಪಡಿಸಿದ ನ್ಯೂಜಿಲೆಂಡ್ ಟಿ.ವಿ. ಮತ್ತು ಜನಾಂಗೀಯ ನಿಂದನೆಯ ನಿರೂಪಣೆ ಮಾಡಿದ ಹೆನ್ರಿ ಅವರಿಗೆ ಬಿಎಸ್‌ಎ ಆದೇಶಿಸಿದೆ.ಈ ವಿವಾದದ ಚರ್ಚೆಗಾಗಿ ಬಿಎಸ್‌ಎ ಕರೆದ ತುರ್ತು ಸಭೆಯಲ್ಲಿ ಹೆನ್ರಿ ನಡವಳಿಕೆ ಖಂಡಿಸಿ, ಅವರ ವಿರುದ್ಧ ದಂಡ ವಿಧಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ವಾರ ನ್ಯೂಜಿಲೆಂಡ್ ಪ್ರಧಾನಿ ಭಾರತಕ್ಕೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಹೆನ್ರಿ ವಿರುದ್ಧ ತಡವಾಗಿಯಾದರೂ ಬಿಎಸ್‌ಎ ಕ್ರಮ ಜರುಗಿಸಿರುವುದು ಕುತೂಹಲಕ್ಕೆಡೆ ಮಾಡಿದೆ.`ಹೆನ್ರಿ ಅವರ ನಿಂದನಾ ಹೇಳಿಕೆಯು ದೀಕ್ಷಿತ್ ಮತ್ತು ಭಾರತೀಯರಿಗೆ ಅವಮಾನ ಮಾಡಿದಂತಾಗಿದೆ~ ಎಂದು ಬಣ್ಣಿಸಿರುವ ಬಿಎಸ್‌ಎ, `ದೀಕ್ಷಿತ್ ಹೆಸರನ್ನು ಹೆನ್ರಿ ಆಗಾಗ ಅಣಕಿಸಿ ಹೇಳುವ ಮೂಲಕ ಅವರ ವ್ಯಕ್ತಿತ್ವದ ಮೇಲೆ ದುರುದ್ದೇಶಪೂರ್ವಕವಾಗಿ ದಾಳಿ ನಡೆಸಿ ಅಗೌರವ ಸೂಚಿಸಲಾಗಿದೆ~ ಎಂದು ಟೀಕಿಸಿದೆ.

 

ದೀಕ್ಷಿತ್ ಅವರ ಹೆಸರನ್ನು `ಡಿಕ್ ಶೀಟ್~ ಎಂದು ಹಲವು ಬಾರಿ ನಗುತ್ತಾ ಹೇಳಿ ಹಾಸ್ಯ ಮಾಡುವ ಮೂಲಕ ಹೆನ್ರಿ ಭಾರತೀಯರ ಸಭ್ಯತೆಗೆ ವಿರುದ್ಧವಾಗಿ ಅಗೌರವ ಮತ್ತು ತಾರತಮ್ಯದ ಭಾವನೆಯನ್ನು ತೋರಿದ್ದಾರೆ. ಅವರ ನಡವಳಿಕೆ ಎಲ್ಲ ಬಗೆಯ ಮಾನವೀಯ ನಯ ವಿನಯಗಳ ಉಲ್ಲಂಘನೆಯಾಗಿದೆ ಎಂದು ಬಿಎಸ್‌ಎ ದೂಷಿಸಿದೆ.

 

ಪ್ರತಿಕ್ರಿಯಿಸಿ (+)