ಶೀಲಾ ದೀಕ್ಷಿತ್ ವಿರುದ್ಧ ಎಫ್‌ಐಆರ್‌ಗೆ ತಡೆ

7

ಶೀಲಾ ದೀಕ್ಷಿತ್ ವಿರುದ್ಧ ಎಫ್‌ಐಆರ್‌ಗೆ ತಡೆ

Published:
Updated:

ನವದೆಹಲಿ (ಪಿಟಿಐ): 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಮೊದಲ ಜಾಹೀರಾತಿಗಾಗಿ ಸರ್ಕಾರಿ ಹಣ ದುರುಪಯೋಗ ಮಾಡಿದ ಆರೋಪದ ಮೇಲೆ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 19 ರವರೆಗೆ ತಡೆಯಾಜ್ಞೆ ನೀಡಿದೆ.ವಿಚಾರಣಾ ನ್ಯಾಯಾಲಯ ಆಗಸ್ಟ್ 31 ರಂದು ನೀಡಿದ್ದ ಆದೇಶವನ್ನು ರದ್ದುಪಡಿಸಬೇಕು ಎಂದು ದೆಹಲಿ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಈ  ಹಿನ್ನೆಲೆಯಲ್ಲಿ  ನ್ಯಾಯಮೂರ್ತಿ ಸುನಿಲ್ ಅಗರವಾಲ್ ಅವರು ಆದೇಶವನ್ನು ಕಾಯ್ದಿರಿಸಿ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿದರು. ಮುಂದಿನ ಆದೇಶ ನೀಡುವವರೆಗೆ ಎಫ್‌ಐಆರ್ ದಾಖಲಿಸದೆ ಯಥಾಸ್ಥಿತಿ ಮುಂದುವರಿಸಬೇಕು ಎಂದು ಅವರು ಹೇಳಿದರು.2013 ರ ಮೇ 22 ರಂದು ಲೋಕಾಯುಕ್ತರು ಸಲ್ಲಿಸಿರುವ ವರದಿ ರಾಷ್ಟ್ರಪತಿಗಳ ಪರಿಶೀಲನೆಯಲ್ಲಿದೆ. ಆದ್ದರಿಂದ ಎರಡೂ ಕಡೆಯ ವಾದ ಆಲಿಸಿದ ನಂತರವೇ ತನಿಖೆಯ ಪ್ರಶ್ನೆ ಉದ್ಬವಿಸಲಿದೆ ಎಂದು ನ್ಯಾಯಾಲಯ ಹೇಳಿತು.ಶೀಲಾದೀಕ್ಷಿತ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವ ಸಂಬಂಧ ವಿಚಾರಣಾ ನ್ಯಾಯಾಲಯದ ಆದೇಶದ ಕುರಿತು ಸೆಪ್ಟೆಂಬರ್ 19 ಒಳಗೆ ಪ್ರತಿಕ್ರಿಯಿಸುವಂತೆ ದೂರು ದಾಖಲಿಸಿದ ಬಿಜೆಪಿ ಮುಖಂಡ ವಿಜೇಂದರ್ ಗುಪ್ತಾ ಹಾಗೂ ದೆಹಲಿ ಪೊಲೀಸ್ ಆಯುಕ್ತರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ತಿಳಿಸಿತ್ತು.ವಿಜೇಂದರ್ ಗುಪ್ತಾ ಅವರು ಲೋಕಾಯುಕ್ತ ವರದಿ ಒಂದರ ಆಧಾರದಿಂದಲೇ ದೂರು ದಾಖಲಿಸಿದ್ದಾರೆ. ಉಳಿದಂತೆ ಚುನಾವಣೆಯಲ್ಲಿ ಹಣ ದುರುಪಯೋಗ ಆಗಿರುವ ಬಗ್ಗೆ ದಾಖಲೆ ಇಲ್ಲದೆ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ ಎಂದು ದೆಹಲಿ ಸರ್ಕಾರದ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಿದ್ಧಾರ್ಥ ಲುಟೇರಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry