ಶೀಲಾ ದೀಕ್ಷಿತ್ ಸುತ್ತ ಆಪಾದನೆಗಳ ಸುಳಿ

7

ಶೀಲಾ ದೀಕ್ಷಿತ್ ಸುತ್ತ ಆಪಾದನೆಗಳ ಸುಳಿ

Published:
Updated:
ಶೀಲಾ ದೀಕ್ಷಿತ್ ಸುತ್ತ ಆಪಾದನೆಗಳ ಸುಳಿ

ನವದೆಹಲಿ (ಪಿಟಿಐ/ಐಎಎನ್‌ಎಸ್): ಕಾಮನ್‌ವೆಲ್ತ್  ಕ್ರೀಡಾಕೂಟ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿ ನಿಯಮಗಳ ಉಲ್ಲಂಘನೆ ಮಾಡಿದ್ದು, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ  ಗಮನದಲ್ಲಿ ಇದ್ದೇ 31 ಕೋಟಿ ರೂಪಾಯಿಗಳನ್ನು ಅನಗತ್ಯವಾಗಿ ವ್ಯಯಮಾಡಲಾಗಿದೆ ಎಂದು ಮಹಾಲೇಖಪಾಲರು (ಸಿಎಜಿ) ವರದಿ ನೀಡಿದ್ದಾರೆ.ಸಂಸತ್‌ನಲ್ಲಿ ಶುಕ್ರವಾರ ಮಂಡನೆ ಮಾಡಿದ್ದು, ಅದರ ಬೆನ್ನಲ್ಲೇ ಪ್ರತಿಪಕ್ಷಗಳು ಶೀಲಾ ದೀಕ್ಷಿತ್ ರಾಜೀನಾಮೆಗೆ ಒತ್ತಾಯಿಸಿವೆ. ಸಿಎಜಿ ವರದಿಯ ಸಾರಾಂಶ ಇಂತಿದೆ.

ಸುರೇಶ್ ಕಲ್ಮಾಡಿ ವಿರುದ್ಧ ಗಂಭೀರ ಆಕ್ಷೇಪಣೆಗಳಿದ್ದರೂ ಪ್ರಧಾನ ಮಂತ್ರಿ ಕಚೇರಿಯ ಇಚ್ಛೆಯಂತೆ ಸಂಘಟನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಕ್ರೀಡಾಕೂಟ ಆಯೋಜಿಸಲು ಅನಗತ್ಯವಾಗಿ ನೂರಾರು ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಾಗಿದೆ. ಹಣಕಾಸಿನ ನಿರ್ವಹಣೆಯೂ ಸರಿಯಾಗಿಲ್ಲ. ಕ್ರೀಡಾ ಕೂಟದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಬಗ್ಗೆ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಮಾಹಿತಿ ಇದೆ. ಕನಿಷ್ಠ 31 ಕೋಟಿ ರೂಪಾಯಿ ವೆಚ್ಚವನ್ನು ಅನಗತ್ಯವಾಗಿ ಮಾಡಲಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಮಹಾಲೇಖಪಾಲರಾದ ರೇಖಾ ಗುಪ್ತ ಅವರು, ಕ್ರೀಡಾಕೂಟ ಸಂಘಟನೆ ಮತ್ತು ನಿರ್ವಹಣೆಯಲ್ಲಿ `ಏಕ ಗುತ್ತಿಗೆ~ ಪದ್ಧತಿಯನ್ನು ಅನುಸರಿಸಲಾಗಿದೆ. ಜತೆಗೆ ಸಾಮರ್ಥ್ಯ ಇಲ್ಲದವರಿಗೂ ಗುತ್ತಿಗೆ ನೀಡಲಾಗಿದೆ. ಕೆಲವೇ ಮಂದಿಗೆ ಗುತ್ತಿಗೆ ನೀಡುವಲ್ಲಿ ಶೀಲಾ ದೀಕ್ಷಿತ್ ಪಕ್ಷಪಾತ ಮಾಡಿದ್ದಾರೆ ಎಂದರು.2010ರ ಅಕ್ಟೋಬರ್‌ನಲ್ಲಿ ಆಯೋಜಿಸಿದ್ದ ಕ್ರೀಡಾಕೂಟದ ವಿವಿಧ ಯೋಜನೆ, ನಿರ್ಮಾಣ ಮತ್ತು ಕ್ರೀಡಾ ಕೇಂದ್ರಗಳ ಅಭಿವೃದ್ಧಿ, ಕ್ರೀಡಾ ಗ್ರಾಮ ನಿರ್ಮಾಣ, ಮೂಲಭೂತ ಸೌಕರ್ಯ ಕಲ್ಪಿಸುವುದು, ದೆಹಲಿ ಮಹಾನಗರ  ಸೌಂದರ್ಯ ಹೆಚ್ಚಿಸುವುದು ಮತ್ತು ಕ್ರೀಡಾಕೂಟದ ಪ್ರಸಾರದ ಹಕ್ಕು ನೀಡುವ ಗುತ್ತಿಗೆಯಲ್ಲಿ ಅಕ್ರಮ, ಪಕ್ಷಪಾತ ಮತ್ತು ಪೂರ್ವಗ್ರಹ ಪೀಡಿತ ನೀತಿಗಳನ್ನು ಅನುಸರಿಸಲಾಗಿದೆ.ಸುರೇಶ್ ಕಲ್ಮಾಡಿ ಅವರ ವಿವಾದಾತ್ಮಕ ನೇಮಕಾತಿಗೆ ಸಂಬಂಧಿಸಿದಂತೆ 2003ರಲ್ಲಿ ಸಂಘಟನಾ ಸಮಿತಿ ಸರ್ಕಾರಿ ಒಡೆತನದ ನೋಂದಾಯಿತ ಸೊಸೈಟಿಯಾಗಿತ್ತು. ಇದರಲ್ಲಿ ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿ ಇದ್ದು, ಅಧ್ಯಕ್ಷರು ಮತ್ತು ಸದಸ್ಯರನ್ನು ಸರ್ಕಾರದಿಂದ ನೇಮಕ ಮಾಡಬೇಕು. ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರು ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾಗಿರುತ್ತಿದ್ದರು.ಆದರೆ 2005ರ ಫೆಬ್ರುವರಿಯಲ್ಲಿ ಸಂಘಟನಾ ಸಮಿತಿಯನ್ನು ರಚನೆ ಮಾಡಿದ್ದು, ಸರ್ಕಾರದ ನೇರ ಹಿಡಿತದಿಂದ ತಪ್ಪಿಸಿಕೊಳ್ಳುವಂತಾಗಿದೆ. ಈ ನೇಮಕವನ್ನು ಅಂದಿನ ಕ್ರೀಡಾ ಸಚಿವ ದಿವಂಗತ ಸುನಿಲ್ ದತ್ ಅವರು ತೀವ್ರವಾಗಿ ಆಕ್ಷೇಪಿಸಿದ್ದರು. ಆದನ್ನು ಪರಿಗಣಿಸದ ಪ್ರಧಾನ ಮಂತ್ರಿ ಕಚೇರಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಶಿಫಾರಸು ಮಾಡಿತ್ತು.2007ರಲ್ಲಿ ಅಂದಿನ ಕ್ರೀಡಾ ಸಚಿವ ಮಣಿ ಶಂಕರ್ ಅಯ್ಯರ್ ಮತ್ತು ಕ್ರೀಡಾ ಕಾರ್ಯದರ್ಶಿ ಎಸ್.ಕೆ.ಅರೋರಾ ಅವರು ಕಲ್ಮಾಡಿ ಅಧ್ಯಕ್ಷತೆಗೆ ಪ್ರಧಾನ ಮಂತ್ರಿ ಕಚೇರಿಗೆ ಆಕ್ಷೇಪ ಸಲ್ಲಿಸಿದ್ದರು. ಆದರೆ ಕೆಲವು ಸಚಿವರು ಹಾಗೂ ಸಂಪುಟ ಕಾರ್ಯದರ್ಶಿ ಅದನ್ನು ಲಘುವಾಗಿ ಪರಿಗಣಿಸಿದರು.ಖಾಸಗಿ ಕಂಪೆನಿಗಳು ಮಾತ್ರವಲ್ಲ: ಸಿಡಬ್ಲ್ಯೂಸಿ ಹಗರಣದಲ್ಲಿ ಖಾಸಗಿ ಕಂಪೆನಿಗಳು ಮಾತ್ರವಲ್ಲದೇ ಸರ್ಕಾರಿ ವಲಯದ ಉದ್ದಿಮೆಗಳೂ ಹಣ ಮಾಡಿವೆ ಎಂದು ವರದಿ ತಿಳಿಸಿದೆ.ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಐಎಲ್) ಸಹ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ವರದಿಯಲ್ಲಿ ಖಚಿತಪಡಿಸಲಾಗಿದ್ದು, ಈ ಕಂಪೆನಿಯೊಂದೇ ಸಿಡಬ್ಲ್ಯೂಸಿ ಗುತ್ತಿಗೆಯಲ್ಲಿ 126.28 ಕೋಟಿ ರೂಪಾಯಿ ಲಾಭಗಳಿಸಿದೆ.ಭದ್ರತಾ ವ್ಯವಸ್ಥೆಗಾಗಿ `ಇಂಟಿಗ್ರೇಟೆಡ್ ಸೆಕ್ಯುರಿಟಿ ಸಿಸ್ಟಂ~ಗಳ ದರವನ್ನು ಮಿತಿಮೀರಿ ಹೆಚ್ಚಿಸುವ ಮೂಲಕ ಈ ಲಾಭ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.ಇಸಿಐಎಲ್ 2010ರ ಮಾರ್ಚ್ ತಿಂಗಳಿನಲ್ಲಿ 176 ಪಿಇಡಿಗಳನ್ನು 38.55 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಿತ್ತು. ಆದರೆ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಇನ್ನೂ 42 ಪಿಇಡಿಗಳು ಅವುಗಳನ್ನು ಪ್ಯಾಕ್ ಮಾಡಿದ ರೀತಿಯಲ್ಲಿಯೇ ಇವೆ. ಹಾಗೆಯೆ ರೇಡಿಯೊ ತರಂಗಾಂತರ ಇರುವ 18,700 ಗುರುತಿನ ಚೀಟಿಗಳನ್ನು ತಯಾರಿಸಿದೆ. ವಾಸ್ತವದಲ್ಲಿ 3,610 ಗುರುತಿನ ಚೀಟಿಗಳು ಮಾತ್ರ ಉಪಯೋಗಕ್ಕೆ ಬಂದಿವೆ. ಮಿಕ್ಕವುಗಳ ಉಪಯೋಗವೇ ಆಗಿಲ್ಲ. ಜತೆಗೆ ಇಸಿಐಎಲ್ ತಯಾರಿಸಿದ ವಸ್ತುಗಳ ಗುಣಮಟ್ಟವೂ ಸರಿಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry