ಗುರುವಾರ , ಮೇ 19, 2022
21 °C

ಶೀಲ ಶಂಕಿಸಿ ಕೊಲೆ: ಪತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬ ಮರದ ತುಂಡಿನಿಂದ ಹೊಡೆದು ಆಕೆಯನ್ನು ಕೊಲೆ ಮಾಡಿದ ಘಟನೆ ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಸುಶೀಲಾ (45) ಕೊಲೆಯಾದವರು. ಆಕೆಯ ಪತಿ ಆರೋಪಿ ಪೆರುಮಾಳ್ (50) ಎಂಬಾತನನ್ನು ಘಟನೆ ನಡೆದ ಆರು ತಾಸುಗಳಲ್ಲೇ ಬಂಧಿಸುವಲ್ಲಿ ಪರಪ್ಪನ ಅಗ್ರಹಾರ ಪೊಲೀಸರು ಯಶಸ್ವಿಯಾಗಿದ್ದಾರೆ.‘ಗಾರೆ ಕೆಲಸ ಮಾಡುತ್ತಿದ್ದ ಪೆರುಮಾಳ್‌ಗೆ ಪತ್ನಿಯ ಶೀಲದ ಬಗ್ಗೆ ಶಂಕೆ ಇತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಮಧ್ಯಾಹ್ನ ಸಹ ಅವರ ಮಧ್ಯೆ ಜಗಳವಾದಾಗ ಆತ ಮರದ ತುಂಡಿನಿಂದ ಸುಶೀಲಾ ಅವರಿಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ’ ಎಂದು ಇನ್‌ಸ್ಪೆಕ್ಟರ್ ವಿ.ಕೆ.ವಾಸುದೇವ ತಿಳಿಸಿದ್ದಾರೆ.‘ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಠಾಣೆಗೆ ಮಾಹಿತಿ ನೀಡಿದರು. ಪರಾರಿಯಾಗಲು ಯತ್ನಿಸುತ್ತಿದ್ದ ಆತನನ್ನು ಬಂಧಿಸಲಾಯಿತು’ ಎಂದು ಅವರು ಹೇಳಿದ್ದಾರೆ.ಪರಾರಿಯಾಗಿದ್ದ ಕೈದಿಯ ಬಂಧನ

ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಪುಟ್ಟಸ್ವಾಮಿ ಎಂಬ ಕೈದಿಯನ್ನು ಪೊಲೀಸರು ಹಾಸನದಲ್ಲಿ ಬಂಧಿಸಿದ್ದಾರೆ. ಕೂಲಿ ಕಾರ್ಮಿಕನಾಗಿದ್ದ ಪುಟ್ಟಸ್ವಾಮಿ ಪತ್ನಿ ಜತೆ ಸುಬ್ರಹ್ಮಣ್ಯಪುರದಲ್ಲಿ ನೆಲೆಸಿದ್ದ. 2001ರಲ್ಲಿ ಆತ ಪತ್ನಿಯನ್ನು ಕೊಲೆ ಮಾಡಿ ಬಂಧನಕ್ಕೊಳಗಾಗಿದ್ದ. ಪ್ರಕರಣದ ವಿಚಾರಣೆ ನಡೆಸಿದ್ದ ಮೂರನೇ ತ್ವರಿತ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಜೈಲಿನಲ್ಲಿದ್ದ ಆತ ಮಾ.10ರಂದು ತಪ್ಪಿಸಿಕೊಂಡು ಪರಾರಿಯಾಗಿದ್ದ. ಆತ ಹಾಸನದ ಸಾಲಿಗ್ರಾಮದಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಪುಟ್ಟಸ್ವಾಮಿ ಕೆಲ ದಿನಗಳ ಹಿಂದೆ ಪೆರೋಲ್ ಮೇಲೆ ಹೋಗಿದ್ದ. ಆ ಸಂದರ್ಭದಲ್ಲಿ ಆತನಿಗೆ ಹಾಸನದ ಮಹಿಳೆಯ ಪರಿಚಯವಾಗಿತ್ತು. ಆತ ಆಕೆಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.ಅಗ್ನಿ ಅನಾಹುತ

ಮಲ್ಲೇಶ್ವರದ ಸಂಪಿಗೆ ರಸ್ತೆಯ ಹತ್ತನೇ ಅಡ್ಡರಸ್ತೆಯಲ್ಲಿರುವ ವಕೀಲರೊಬ್ಬರ ಕಚೇರಿಯಲ್ಲಿ ಸೋಮವಾರ ಸಂಭವಿಸಿದ ಆಕಸ್ಮಿಕ ಅಗ್ನಿ ಅನಾಹುತದಲ್ಲಿ ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳು ಮತ್ತು ದಾಖಲೆ ಪತ್ರಗಳು ಸುಟ್ಟು ಹೋಗಿವೆ.ವಕೀಲರ ಕಚೇರಿಯ ಒಳ ಭಾಗದಲ್ಲಿ ಬೆಳಿಗ್ಗೆ 8.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು. ಇದನ್ನು ನೋಡಿದ ಸಾರ್ವಜನಿಕರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅರ್ಧ ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು ಎಂದು ಪೊಲೀಸರು ಹೇಳಿದ್ದಾರೆ.ಘಟನೆಯಲ್ಲಿ ಆರು ಕಂಪ್ಯೂಟರ್‌ಗಳು, ಒಂದು ಲ್ಯಾಪ್‌ಟಾಪ್, ಹವಾ ನಿಯಂತ್ರಕ ಸಾಧನಗಳು ಹಾಗೂ ಕಚೇರಿಯಲ್ಲಿದ್ದ ದಾಖಲೆ ಪತ್ರಗಳು ಸುಟ್ಟು ಹೋಗಿವೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಈ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಲೆ ಸಂಚು

ಬೆಂಗಳೂರು: ಸೈಕಲ್ ರವಿಯ ಸಹಚರನಾದ ಅಂಧ್ರಳ್ಳಿ ನವೀನ ಎಂಬಾತನನ್ನು ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ರೌಡಿ ಕೊರಂಗು ಕೃಷ್ಣನ ಐದು ಸಹಚರರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಪಾರ್ವತಿಪುರದ ಪವನ್ (22), ಚಿಕ್ಕಲಸಂದ್ರದ ಜೆ.ಭರಣಿಕುಮಾರ್ (28), ಕತ್ತರಿಗುಪ್ಪೆಯ ವಿ.ಮುನಿಯಪ್ಪ (24), ಕೆಂಪೇಗೌಡ ನಗರದ ನಂಜಪ್ಪ ಬ್ಲಾಕ್‌ನ ಪಿ.ಅಶೋಕ (26) ಮತ್ತು ಚನ್ನಪಟ್ಟಣದ ಬೇವೂರು ಗ್ರಾಮದ ಬಿ.ಆರ್.ಕುಮಾರ (25) ಬಂಧಿತರು.ಆರೋಪಿಗಳೆಲ್ಲ ಅಪರಾಧ ಹಿನ್ನೆಲೆಯುಳ್ಳವರಾಗಿದ್ದು ಕೊಲೆ, ಕೊಲೆ ಯತ್ನ, ದರೋಡೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.