ಬುಧವಾರ, ನವೆಂಬರ್ 20, 2019
27 °C
ಮತದಾರರ ಜಾಗೃತಿ- 13ರಂದು ಸಭೆಯಲ್ಲಿ ಚರ್ಚೆ

ಶುದ್ಧಹಸ್ತರು ಆಯ್ಕೆಯಾಗಬೇಕು: ಹಿರೇಮಠ

Published:
Updated:

ಕೊಪ್ಪಳ: `1957ರಿಂದ 1980ರ ವರೆಗಿನ ಅವಧಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ದೇಶದ ಅಭಿವೃದ್ಧಿ ಮತ್ತು ಜನಪರ ಕಾಳಜಿ ಹೊಂದಿದವರು ಆಯ್ಕೆಯಾಗಿದ್ದಾರೆ. ಆದರೆ, 1980ರಿಂದ ಈಚೆಗೆ ನಡೆದಿರುವ ಚುನಾವಣೆಗಳಲ್ಲಿ ಆಯ್ಕೆಗೊಂಡವರಲ್ಲಿ ಬಹುತೇಕ ಭ್ರಷ್ಟರು, ಅಕ್ರಮ ಸಂಪತ್ತಿನಿಂದ ಮೆರೆಯುವವರೇ ಇದ್ದಾರೆ. ಮತ್ತೊಮ್ಮೆ ಶುದ್ಧಹಸ್ತರು, ಜನಪರ ಕಾಳಜಿ ಹೊಂದಿದವರು ಆಯ್ಕೆಯಾಗುವ ಅಗತ್ಯವಿದೆ'-ಇದು ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವವರ ವಿರುದ್ಧ ಸಮರ ಸಾರಿರುವ ಹಾಗೂ ಜಿಲ್ಲೆಯಲ್ಲಿ ಈಗಾಗಲೇ ಒಂದು ಸುತ್ತಿನ `ಮತದಾರರ ಜಾಗೃತಿ ಜಾಥಾ' ಆಯೋಜಿಸಿರುವ ಸಮಾಜ ಪರಿವರ್ತನಾ ಸಮುದಾಯದ ಹಿರಿಯ ಸಲಹೆಗಾರ ಹಾ ಗೂ ಜನ ಸಂಗ್ರಾಮ ಪರಿಷತ್ತಿನ ಮುಖಂಡ ಎಸ್. ಆರ್. ಹಿರೇಮಠ ಅವರ ಪ್ರತಿಪಾದನೆ.ಕಾರ್ಯ ನಿಮಿತ್ತ ಗುರುವಾರ ಇಲ್ಲಿಗೆ ಆಗಮಿಸಿದ್ದ ಅವರು `ಪ್ರಜಾವಾಣಿ'ಯೊಂದಿಗೆ ಮಾತನಾಡಿದರು.`ಈಗೀಗ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರಲ್ಲಿ ಬಹುತೇಕ ಭ್ರಷ್ಟರಿದ್ದಾರೆ. ಯಾರಿಗೆ ಮತ ಹಾಕಬೇಕು ಎಂಬ ಗೊಂದಲ ಮತ್ತು ಪ್ರಶ್ನೆ ಜನರಲ್ಲಿ ಮೂಡಿದೆ' ಎನ್ನುವ ಹಿರೇಮಠ, ಭ್ರಷ್ಟರ ಸಂಖ್ಯೆ ಹೆಚ್ಚಿದ್ದರೂ ಎಲ್ಲ ರಾಜಕೀಯ ಪಕ್ಷಗಳಲ್ಲಿ ಶುದ್ಧಹಸ್ತರು ಇದ್ದಾರೆ ಎನ್ನುತ್ತಾರೆ.ಹೀಗಾಗಿ ಶುದ್ಧಹಸ್ತರು, ಅಭಿವೃದ್ಧಿಪರ ನಿಲುವು ಹೊಂದಿದವರ ಆಯ್ಕೆ ಈಗಿನ ಚುನಾವಣೆಯಿಂದಲೇ ಆರಂಭಗೊಳ್ಳಲಿ ಎಂದು ಜನರಲ್ಲಿನ ಗೊಂದಲಕ್ಕೆ ಪರಿಹಾರ ಹೇಳಿದರು.ರಾಜ್ಯದ ನಿಸರ್ಗ ಸಂಪತ್ತನ್ನು ಲೂಟಿ ಮಾಡಿ ಗಳಿಸಿದ ಹಣ, ಅಭಿವೃದ್ಧಿಗಾಗಿ ಬಂದ ಹಣವನ್ನು ಚುನಾವಣೆಯಲ್ಲಿ ಖರ್ಚು ಮಾಡಿ ಗೆಲ್ಲುವವರು ಹೆಚ್ಚಾಗಿದ್ದಾರೆ.ಇಂಥವರಿಂದ ನಾಡಿನ ಅಭಿವೃದ್ಧಿ ಅಸಾಧ್ಯ. ಅವರೇ ಈಗ ರಾಜಕೀಯದಲ್ಲಿ ಮುಂಚೂಣಿಯಲ್ಲಿಯೂ ಇದ್ದಾರೆ. ಆದರೆ, ಇಷ್ಟೊಂದು ಹಣ ಎಲ್ಲಿಂದ ಬಂತು, ನಿಮಗೇ ಏಕೆ ಮತ ಹಾಕಬೇಕು ಎಂಬ ಪ್ರಶ್ನೆಗಳನ್ನು ಕೇಳಲು ಜನರು ಸಿದ್ಧರಾಗಬೇಕು. ಈ ಸಿದ್ಧತೆ ಬಂದರೆ ಭ್ರಷ್ಟರಲ್ಲಿ ನಡುಕು ಹುಟ್ಟುತ್ತದೆ. ನಿಧಾನವಾಗಿಯಾದರೂ ವ್ಯವಸ್ಥೆಯಲ್ಲಿ ಸುಧಾರಣೆ ತರಬಹುದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅಕ್ರಮ ಗಣಿಗಾರಿಕೆ, ಭೂ ಮಾಫಿಯಾ ಸೇರಿದಂತೆ ವಿವಿಧ ಸ್ವರೂಪದ ಭ್ರಷ್ಟಾಚಾರಗಳ ಆರೋಪ ಎದುರಿಸುತ್ತಿವವರು ಚುನಾವಣೆಯಲ್ಲಿ ಸ್ಪರ್ಧಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಬೇಕು. ಚುನಾವಣೆ ಸಂದರ್ಭದಲ್ಲಿ `ಅಭ್ಯರ್ಥಿಯನ್ನು ತಿರಸ್ಕರಿಸುವ ಹಕ್ಕು' ಹೆಚ್ಚು ಪ್ರಾಮುಖ್ಯ ಪಡೆಯಬೇಕು ಎಂದೂ ಅಭಿಪ್ರಾಯಪಟ್ಟರು.ಈ ಹಿನ್ನೆಲೆಯಲ್ಲಿ ಈಗಾಗಲೇ ಕಳೆದ ತಿಂಗಳು ಜಿಲ್ಲೆಯ ಕುಷ್ಟಗಿಯಲ್ಲಿ ಒಂದು ವಾರ ಕಾಲ ಮತದಾರರ ಜಾಗೃತಿ ಜಾಥಾ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪರಿಷತ್ ಮಾಡಿದೆ.ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಏ. 13ರಂದು ಧಾರವಾಡದಲ್ಲಿ ಪರಿಷತ್ತಿನ ಪದಾಧಿಕಾರಿಗಳ ಮಹತ್ವದ ಸಭೆಯನ್ನು ಆಯೋಜಿಸಲಾಗಿದೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಅಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)