ಶುದ್ಧ ಕನ್ನಡ ಪದ ಬಳಕೆಯ ವ್ರತ ತೊಡಿ

7
ಕಂದಿಕೆರೆ ಹೋಬಳಿ ಕಸಾಪ ಸಮ್ಮೇಳನ

ಶುದ್ಧ ಕನ್ನಡ ಪದ ಬಳಕೆಯ ವ್ರತ ತೊಡಿ

Published:
Updated:

ಚಿಕ್ಕನಾಯಕನಹಳ್ಳಿ: ದೇಶ, ಭಾಷೆ, ಸಂಸ್ಕೃತಿ ಹಾಗೂ ಆದರ್ಶಗಳನ್ನು ಉಳಿಸಲು ಶ್ರಮಿಸಿದ ಹಾಗೂ ಬಲಿದಾನ ಮಾಡಿದ ಪೂರ್ವಿಕರನ್ನು ನೆನೆದು ಕನ್ನಡಿಗರೆಲ್ಲರೂ ಭಾಷೆಯ ಬೆಳವಣಿಗೆಗಾಗಿ ಒಂದಾಗಬೇಕು ಎಂದು ಕಂದಿಕೆರೆ ಹೋಬಳಿ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಕೆ.ಎಂ.ನಂಜಪ್ಪ ಕರೆ ನೀಡಿದರು.ಕಂದಿಕೆರೆಯಲ್ಲಿ ಶನಿವಾರ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಕನ್ನಡಿಗರೆಲ್ಲರೂ ಕನ್ನಡ ಭಾಷೆಯ ಪದಗಳನ್ನೇ ಬಳಸುವ ಪಣ ತೊಡಬೇಕು. ಪರಭಾಷಾ ಬಳಕೆಯನ್ನು ಪ್ರಜ್ಞಾ ಪೂರ್ವಕವಾಗಿ ಕಡಿಮೆ ಮಾಡಬೇಕು. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರು ಈ ಕುರಿತು ಎಚ್ಚರ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.ನಮ್ಮ ಸಂಸ್ಕೃತಿಯ ಪ್ರತೀಕವಾದ ಜಾನಪದ ಕಲೆಗಳನ್ನು ಮರೆತು ಆರ್ಕೆಷ್ಟ್ರಾಗಳ ಮೊರೆ ಹೋಗುತ್ತಿರುವುದು ಸಂಸ್ಕೃತಿಯ ಪಾಲಿಗೆ ಅಪಾಯದ ಲಕ್ಷಣವಾಗಿದೆ. ಮಾಯಾಲೋಕದಲ್ಲಿ ಮುಳುಗಿರುವ ನಾವು ವಾಸ್ತವಿಕ ಜಗತ್ತಿನೆಡೆ ಹೆಜ್ಜೆ ಹಾಕದಿದ್ದರೆ ನಮಗೆ ಹಾಗೂ ನಮ್ಮ ಭಾಷೆಗೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.ಸಮ್ಮೇಳನವನ್ನು ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್ ಮಾತನಾಡಿ, ಬದುಕುವ ದಾರಿಯನ್ನು ಹುಡುಕುವ ನೆಪದಲ್ಲಿ ನಮ್ಮ ಭೂಮಿಯನ್ನು ಮಾರಿಕೊಳ್ಳುತ್ತಿದ್ದೇವೆ. ಭೂಮಿಯೊಂದಿಗೆ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ, ಬದುಕು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.ಶಾಸಕ ಸಿ.ಬಿ.ಸುರೇಶ್‌ಬಾಬು ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಜಿ.ಪಂ. ಸದಸ್ಯೆ ಲೋಹಿತಾಬಾಯಿ, ಮುಖಂಡರಾದ ಸಿಂಗದಹಳ್ಳಿ ರಾಜ್‌ಕುಮಾರ್, ರೇವಣ್ಣ ಒಡೆಯರ್, ಕೆ.ಜಿ.ಮಲ್ಲಿಕಾರ್ಜುನಯ್ಯ, ಲಕ್ಷ್ಮಿದೇವಮ್ಮ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry