ಶುದ್ಧ ಕುಡಿಯುವ ನೀರು ಇನ್ನೂ ಮರೀಚಿಕೆ

7
ತುಂಗಭದ್ರಾ ನದಿಯ ಸೆರಗಿನಂಚಿನ ಬನ್ನಿಗೋಳ ಗ್ರಾಮ

ಶುದ್ಧ ಕುಡಿಯುವ ನೀರು ಇನ್ನೂ ಮರೀಚಿಕೆ

Published:
Updated:
ಶುದ್ಧ ಕುಡಿಯುವ ನೀರು ಇನ್ನೂ ಮರೀಚಿಕೆ

ಹಗರಿಬೊಮ್ಮನಹಳ್ಳಿ: `ನಮ್ಮೂರು ಪಕ್ಕಾನೆ ಇಡೀ ವರ್ಷಾ ತುಂಗಭದ್ರೆ ಹರೀತಾಳೆ. ಇಲ್ಲಿಂದಾನೆ ಕೂಡ್ಲಿಗಿ, ಕೊಟ್ಟೂರಿಗೆ ಕುಡಿಯೋಕೆ ನೀರು ಒಯ್ತಾರೆ. ಇಡೀ ಬೊಮ್ನಳ್ಳಿ (ಹಗರಿಬೊಮ್ಮನಹಳ್ಳಿ ತಾಲ್ಲೂಕಿಗೆ)ಗೆ 8 ಕೋಟಿ ಖರ್ಚು ಮಾಡಿ ಕುಡಿಯೋ ನೀರು ಕೊಡ್ತೀನಿ ಅಂತಾ ಎಂಎಲ್‌ಎ ಸಾಹೇಬ್ರು ಹೇಳ್ತಾರ. ಆದ್ರ ನಮ್ಮ ಕೇರ‌್ಯಾಗ ಅಡ್ಡಾಡ್ಲಿ. ನಾವೆಂತಾ ನೀರು ಕುಡಿತಿವೋ ಗೊತ್ತ ಮಾಡ್ಕಳ್ಲಿ...'

ವರ್ಷದ 365 ದಿನಗಳಲ್ಲೂ, ಕೊಚ್ಚೆ ನೀರು ಕುಡಿದು ಸಾಂಕ್ರಾಮಿಕ ಕಾಯಿಲೆ ಭೀತಿಯಲ್ಲಿ ಹಾಗೂ ಮಾರಣಾಂತಿಕ ರೋಗಗಳೊಂದಿಗೆ ಸೆಣಸಾಡುತ್ತಾ ನರಕ ಸದೃಶ ಪರಿಸರದಲ್ಲಿ ದಿನಗಳನ್ನು ಸವೆಸುತ್ತಿರುವ ತಾಲ್ಲೂಕಿನ ತುಂಗಭದ್ರಾ ನದಿಯ ಸೆರಗಿನಂಚಿನ ಬನ್ನಿಗೋಳ ಗ್ರಾಮದ ದಲಿತ ಪಿ. ಉಮೇಶ್ ಆಡಿದ ಮಾತುಗಳಿವು.ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಈ ಪುಟ್ಟ ಹಳ್ಳಿಯಲ್ಲಿ, ಗ್ರಾ.ಪಂ.ಕಚೇರಿಯ ಕೂಗಳತೆ ದೂರದಲ್ಲಿರುವ ದಲಿತರು ಕಾಲೋನಿಯಲ್ಲಿ ನಿಕೃಷ್ಟವಾಗಿ ವಾಸಿಸುತ್ತಿರುವ ಹರಿಜರಿಗೆ ಅಗತ್ಯ ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಶುದ್ಧ ಕುಡಿಯುವ ನೀರು ಮತ್ತಿತರೆ ಸೌಲಭ್ಯಗಳ ಮಾತಿರಲಿ ಶುದ್ಧ ಗಾಳಿಯೂ ಇವರ ಪಾಲಿಗೆ ಇಲ್ಲವಾಗಿದೆ.ಗ್ರಾ.ಪಂ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಇವರಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗಿಲ್ಲ. ಮಲಿನ ತ್ಯಾಜ್ಯದ ಹೂಳು ತುಂಬಿರುವ ಚರಂಡಿಯ ಪಕ್ಕದ ನಲ್ಲಿಯಿಲ್ಲದ ಪೈಪ್‌ಲೈನ್ ಮೂಲಕ ಬರುವ ಕುಡಿಯುವ ನೀರು ಎಂಬ ಕೊಚ್ಚೆ ಸಂಗ್ರಹಿಸಿ ಕುಡಿಯಬೇಕು. ಇಡೀ ಕೇರಿಯಲ್ಲಿ ಮಲಿನ ತ್ಯಾಜ್ಯ ನೀರು ಸಾಗಿಸಲೆಂದು ನಿರ್ಮಾಣವಾಗಿರುವ ಬಹುತೇಕ ಚರಂಡಿಗಳು ಹೂಳಿನಿಂದ ಮುಚ್ಚಿಹೋಗಿವೆ. ತ್ಯಾಜ್ಯ ನೀರು ಸದಾ ರಸ್ತೆಯ ಮೇಲೆ ಸಂಗ್ರಹವಾಗಿರುತ್ತದೆ ಎಂಬುದು ನಿವಾಸಿಗಳ ದೂರು.ಮತ್ತಪ್ಪನವರ ಮೈಲಪ್ಪ ಅವರ ಮನೆಯಲ್ಲಿ ಝಾನ್ಸಿರಾಣಿ, ನಂದಿನಿ, ಮೇಘ ಮತ್ತು ಮನು ಎಂಬ ಹಸುಳೆಗಳು ಹಲವಾರು ತಿಂಗಳಿಂದ ಕಜ್ಜಿಗಳಿಂದ ಪೀಡಿತರಾಗಿದ್ದು, ನೋಡುವ ಎಂತಹವರ ಕರಳು ಸುಡದೇ ಇರದು. ವೈದ್ಯರ ಚಿಕಿತ್ಸಾ ವೆಚ್ಚಗಳನ್ನು ಭರಿಸಲಾಗದೆ ಕೈಚೆಲ್ಲಿದ್ದಾರೆ.ಇದು ಕುಡಿಯುವ ನೀರಿನ ಕಥೆಯಾದರೆ, ಉಸಿರಾಡುವ ಗಾಳಿಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬನ್ನಿಗೋಳ ಗ್ರಾಮದಲ್ಲಿ 6000 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ ಎಂಬ ಅಂದಾಜಿದೆ. ಸೆಪ್ಟೆಂಬರ್‌ನಿಂದ ಡಿಸೆಂಬರ್ ವರೆಗೆ ಈರುಳ್ಳಿ ಕಟಾವು ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಕಟಾವಿನ ನಂತರ ಈರುಳ್ಳಿ ತ್ಯಾಜ್ಯವನ್ನು ಇದೇ ಕೇರಿಯ ಸುತ್ತಲಿನ ಪ್ರದೇಶದಲ್ಲಿ ಬಿಸಾಡಲಾಗುತ್ತದೆ.

ಗ್ರಾ.ಪಂ.ಸದಸ್ಯರಾದ ಸುರೇಶ್, ಯಮನೂರಪ್ಪ, ರಾಜೇಂದ್ರ ಮತ್ತು ತಾ.ಪಂ.ಸದಸ್ಯೆ ಎಂ.ಸಾವಿತ್ರಮ್ಮ ಗೆದ್ದ ನಂತರ ನಮ್ಮ ಕೇರಿಗೆ ಕಾಲಿಟ್ಟಿಲ್ಲ ಎಂದು ಆನಂದಳ್ಳಿ ರಾಮಪ್ಪ ಆಕ್ರೋಶ ವ್ಯಕ್ತಪಡಿಸುತ್ತಾರೆ.`ಮಮತಾ ಸುರೇಶ್, ಜಿ.ಪಂ.ಉಪಾಧ್ಯಕ್ಷೆಯಾಗಲು ತೋರಿದ ಆಸಕ್ತಿ ಮತ್ತು ಶ್ರಮ ನಮ್ಮ ಕೇರಿಯ ಜನರ ಬವಣೆ ನೀಗಿಸಲು ವಿಸ್ತರಿಸಲಿಲ್ಲ. ಅಪಘಾತ ಹಾಗೂ ಅವಘಡಗಳ ಸಂದರ್ಭದಲ್ಲಿ ತಾತ್ಕಾಲಿಕ ಪರಿಹಾರ ವಿತರಿಸುವುದಕ್ಕೆ ಮಾತ್ರ ಅವರು ಸೀಮಿತರಾಗಿದ್ದಾರೆ' ಎಂದು ಪೂಜಾರ್ ಭಕ್ಷಾರಾಮ್ ವ್ಯಂಗವಾಗಿ ಆಕ್ಷೇಪ ವ್ಯಕ್ತಪಡಿಸುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry