ಶುದ್ಧ ನೀರು ಬೇಡ, ಉಪ್ಪು ನೀರಾದ್ರೂ..

7

ಶುದ್ಧ ನೀರು ಬೇಡ, ಉಪ್ಪು ನೀರಾದ್ರೂ..

Published:
Updated:
ಶುದ್ಧ ನೀರು ಬೇಡ, ಉಪ್ಪು ನೀರಾದ್ರೂ..

ಕೋಲಾರ: ಜಾತಿ ರಾಜಕಾರಣ ವಿಧಾನಸಭೆ, ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ. ನಗರಸಭೆಯ ನಾಲ್ಕನೇ ವಾರ್ಡ್ ಕೂಡಾ ಇದಕ್ಕೆ ಸಿಲುಕಿ ನಲುಗುತ್ತಿದೆ. ಇಲ್ಲಿನ ಜನರು `ನಮಗೆ ಶುದ್ಧ ನೀರು ಬೇಡ, ಉಪ್ಪು ನೀರಾದ್ರೂ ಕೊಡ್ರಿ' ಎಂದು ದಯನೀಯವಾಗಿ ಕೇಳುವ ಪರಿಸ್ಥಿತಿಗೆ ತಲುಪಿದ್ದಾರೆ.`ಪ್ರಜಾವಾಣಿ' ಭಾನುವಾರ ವಾರ್ಡಿಗೆ ಭೇಟಿ ನೀಡಿದಾಗ `ನಾವು ಕುಡಿಯುವ ನೀರು ಕೇಳುವುದಿಲ್ಲ. ಆದರೆ ಗಡಸು ನೀರಾದರೂ ಪೂರೈಸುವಂತೆ ಮಾಡಬೇಕು. ಇದರಿಂದ ನಿತ್ಯ ಜೀವನ ಹೇಗೊ ಸಾಗಿಸುತ್ತೇವೆ' ಎಂದು 50ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.ಪಕ್ಕದಲ್ಲಿರುವ ಮೂರನೇ ವಾರ್ಡಿಗೆ ನಾಲ್ಕನೇ ವಾರ್ಡ್ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸ. ಡಾಂಬರ್ ಕಾಣದ ರಸ್ತೆ, ಬಾಗಿದ ಕಂಬ, ಅನುಪಯಕ್ತವಾಗಿ ನಿಂತ ನಲ್ಲಿ, ಮಿನಿಟ್ಯಾಂಕರ್‌ಗಳು ವಾರ್ಡಿನ ದುಃಸ್ಥಿತಿಯನ್ನು ಸಾರಿ ಸಾರಿ ಹೇಳುತ್ತವೆ.ಸುಮಾರು 2500 ಮತದಾರರು ಇರುವ ವಾರ್ಡಿನ ಕೋಟೆಯ ಕೆಲಭಾಗ, ಕುರುಬರಪೇಟೆ, ಜಿಲ್ಲಾ ಕಾರಾಗೃಹ ಸುತ್ತಲಿನ ಕೆಲ ಪ್ರದೇಶ ನಾಲ್ಕನೇ ವಾರ್ಡ್ ವ್ಯಾಪ್ತಿಗೆ ಬರುತ್ತವೆ. ವಾಲ್ವಮೆನ್‌ಗಳದ್ದೇ ಇಲ್ಲಿ ಪ್ರಾಬಲ್ಯ. ಇವರ ಕೈಗಳನ್ನು ಯಾರು `ಬೆಚ್ಚಗೆ' ಮಾಡುತ್ತಾರೋ ಅವರಿಗೆ ಅಂದು ಮನೆಗೆ ನೀರು ಸಿಗುತ್ತದೆ. ನೀರಿಗಾಗಿಯೂ ಇಲ್ಲಿನ ಕುಟುಂಬಗಳು ಪ್ರತಿ ತಿಂಗಳು 600 ರೂಪಾಯಿ ಖರ್ಚು ಮಾಡುತ್ತವೆ. ಒಂದು ವೇಳೆ ಖಾಸಗಿ ಟ್ಯಾಂಕರ್ ಬಾರದಿದ್ದರೆ ಇಲ್ಲಿನ ಜನಕ್ಕೆ ಆ ದಿನ `ನರಕ'.ಚುನಾವಣೆಯಲ್ಲಿ ವಿಜೇತರಾದ ನಂತರ ಒಂದು ಬಾರಿ ನಗರಸಭೆ ಸದಸ್ಯೆ ಇತ್ತ ತಲೆಹಾಕಿಲ್ಲ ಎಂದು ಆಕ್ರೋಶಭರಿತ ಧ್ವನಿಯಲ್ಲಿ ಹೇಳುತ್ತಾರೆ ಇಲ್ಲಿನ ನಿವಾಸಿಗಳು. ವಾರ್ಡಿನ ಮೂಲೆ ಮೂಲೆಗೂ ತಿರುಗಿದರೂ ಕುರುಬರಪೇಟೆಯ ಕನ್ನಡ ಪ್ರಾಥಮಿಕ ಶಾಲೆ ರಸ್ತೆಯೊಂದನ್ನು ಹೊರತುಪಡಿಸಿ ಎಲ್ಲ ರಸ್ತೆಗಳಿಗೆ ಕಾಯಕಲ್ಪ ಬೇಕಾಗಿದೆ ಅನಿಸುತ್ತದೆ.ವಾರ್ಡಿನಲ್ಲಿ ಮೂವತ್ತು ವರ್ಷಗಳಿಂದ ವಾಸಿಸುತ್ತಿರುವ 80 ವರ್ಷದ ಗೋಜಿರಾವ್ ಪ್ರಕಾರ `ವಾಲ್ವಮೆನ್‌ಗಳಿಗೆ ಯಾರು ಹಣ ನೀಡುತ್ತಾರೆ ಅವರಿಗೆ ನೀರು ಸಿಗುತ್ತದೆ. ಆದರೆ ನಾವು ಬಡವರು ಸ್ವಾಮಿ ಎಲ್ಲಿಂದ ಹಣ ತರುವುದು ? ಹೇಗೆ ?' ಎಂದು ನೋವಿನಿಂದ ನುಡಿಯುತ್ತಾರೆ.ಮೂರನೇ ವಾರ್ಡಿನಲ್ಲಿ ಸಂದಿಗೊಂದಿಗೆ ಸಿಮೆಂಟ್ ಹಾಕಲಾಗಿದೆ. ಆದರೆ ಇಲ್ಲಿ ಮುಖ್ಯರಸ್ತೆಗಳೇ ಸುಧಾರಣೆ ಕಂಡಿಲ್ಲ. ಕಸ ವಿಲೇವಾರಿಯಂತೂ ಸಮರ್ಪಕವಾಗಿಲ್ಲ. ರಸ್ತೆ ಸುಧಾರಣೆಗಾಗಿ ಬಿಡುಗಡೆಯಾಗಿದ್ದ ಹಣ ದುರ್ಬಳಕೆಯಾಗಿದೆ ಎಂದು ದೂರುತ್ತಾರೆ ಜನರು. ಟ್ಯಾಂಕರ್‌ನಿಂದ ತರಿಸಿಕೊಂಡ ನೀರು ಮೂರು ದಿನವಾದರೆ ಸಾಕು ವಾಸನೆ ಬರುತ್ತದೆ. ಆದರೂ ಅದನ್ನೇ ಬಳಸಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ.4ನೇ ವಾರ್ಡಿನ ನಗರಸಭೆ ಸದಸ್ಯೆ ಕುಸುಮಾ, ವಾರ್ಡ್ ಅಭಿವೃದ್ಧಿಗೆ ಕೆಲ ನಗರಸಭೆ ಸದಸ್ಯರು ಉದ್ದೇಶಪೂರ್ವಕವಾಗಿ ತಡೆಹಾಕುತ್ತಿದ್ದಾರೆ. ನೀರು ಬೀಡದಂತೆ ಕೆಲ ರಾಜಕೀಯ ಮುಖಂಡರು ವಾಲ್ವಮೆನ್‌ಗಳಿಗೆ ಸೂಚಿಸುತ್ತಾರೆ ಎಂದು ತಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಾರೆ.`ಒಟ್ಟಾರೆ ಜಾತಿ ರಾಜಕಾರಣ, ನಗರಸಭೆ ಸದಸ್ಯರ ನಡುವಿನ ಜಟಾಪಟಿ ಹಾಗೂ ಇತ್ತ ಕಡೆ ತಲೆಹಾಕದ ನಗರಸಭೆ ಸಿಬ್ಬಂದಿಯಿಂದ ಜನರು ಬವಣೆ ಪಡುತ್ತಿದ್ದಾರೆ' ಎಂದು ವೃದ್ಧ ಗೋಜಿರಾವ್ ಹೇಳಿದರು.ವಾರ್ಡ್ ವಿಶೇಷತೆ

ವಾರ್ಡ್ ವ್ಯಾಪ್ತಿಯಲ್ಲಿ ಒಳಾಂಗಣ ಕ್ರೀಡಾಂಗಣ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ, ಜಿಲ್ಲಾ ಕಾರಾಗೃಹ, ಮಿನಿ ಕ್ರೀಡಾಂಗಣ, ಊಟಕ್ಕೆ ಉತ್ತಮ ಮೆಸ್‌ಗಳು ಈ ಪ್ರದೇಶದಲ್ಲಿವೆ. ಆದರೆ ಜನರು ಸಂಕಷ್ಟದಲ್ಲಿದ್ದಾರೆ.ಕೇವಲ ರೂ.8 ಲಕ್ಷ ಬಿಡುಗಡೆ

ನನ್ನ ಅವಧಿಯಲ್ಲಿ ಒಟ್ಟು ಬಿಡುಗಡೆಯಾದ ಅನುದಾನ ಕೇವಲ 8 ಲಕ್ಷ. ಅದು ರಸ್ತೆ ಅಭಿವೃದ್ಧಿಗೆ. ಅಷ್ಟು ದುಡ್ಡಿನಿಂದ ರಸ್ತೆಯಾಗುವುದಿಲ್ಲ ಎಂದು ಗುತ್ತಿಗೆದಾರರು ಹೇಳಿದರು.

ಕೋಲಾರಮ್ಮ ರಸ್ತೆ ಸುಧಾರಣೆಗೆ ಭರವಸೆ ನೀಡಿದ್ದೆ. ಅದನ್ನು ನಾನು ಈಡೇರಿಸಿಲ್ಲ.

-ಕುಸುಮಾ, ನಗರಸಭೆ ಸದಸ್ಯೆನಾವು ನತದೃಷ್ಟರು

ಪಕ್ಕದಲ್ಲೇ ಇರುವ ರಸ್ತೆ, ಮೂಲಸೌಕರ್ಯ ನೋಡಿದರೆ ತುಂಬಾ ಬೇಸರವಾಗುತ್ತದೆ. ಇಲ್ಲಿನ ಜನರು ಈ ವಾರ್ಡಿನ ಸದಸ್ಯೆಯರ ಮುಖವನ್ನೇ ನೋಡಿಲ್ಲ. ಕೇವಲ ಅರ್ಧ ಕೀ.ಮಿ ಅಂತರದಲ್ಲಿ ಅವರ ಮನೆಯಿದೆ. ಇಂದಿಗೂ ಇತ್ತ ಕಡೆ ಹಾಯ್ದಿಲ್ಲ. ಒಟ್ಟಿನಲ್ಲಿ ನಾವು ನತದೃಷ್ಟರು.

-ನಾಗರಾಜ, ಚಾಲಕ

ವಾರದ ಕಸ

ಮನೆ ಎದುರಿನ ಕಸ ವಾರದಿಂದ ಬಿದ್ದಿದೆ. ಅದನ್ನು ವಿಲೇವಾರಿ ಯಾವಾಗ ಮಾಡುತ್ತಾರೆ ಎಂದು ಹೇಳಲು ಬರುವುದಿಲ್ಲ. ಇಲ್ಲಿನ ರಸ್ತೆ ಸುಧಾರಣೆಗೆ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ.

-ಮೈಲಾರಿಗೌಡ, ವಕೀಲಆರು ತಿಂಗಳು

ನಲ್ಲಿಗಳಲ್ಲಿ ನೀರು ಬಂದು ಆರು ತಿಂಗಳವಾಯ್ತು. ನಾವು ಖಾಸಗಿ ಮಿನಿ ಟ್ಯಾಂಕರ್‌ಗಳಿಗೆ ಮೊರೆ ಹೋಗಬೇಕಾದ ಅನಿವಾರ್ಯತೆ. ನಮ್ಮ ಸಮಸ್ಯೆ ಆಲಿಸಲು ಯಾರು ಬರುತ್ತಿಲ್ಲ. ಇಲ್ಲಿ ಬದುಕುವುದೇ ನರಕದ ಅನುವಭ.

-ವೆಂಕಟರಮಣಪ್ಪಸದಸ್ಯೆ ಎಲ್ಲಿದ್ದಾರೆ ?

ಇಲ್ಲಿನ ಸಮಸ್ಯೆ ಒಂದೆರೆಡಲ್ಲ. ಹಲವು. ನಗರಸಭೆ ಸದಸ್ಯರನ್ನು ನೋಡಿ ನಾಲ್ಕು ವರ್ಷವಾಯ್ತು. ಮತ ಕೇಳಿ ಹೋದವರು ಇತ್ತ ತಿರುಗಿಯೂ ನೋಡಿಲ್ಲ. ಈಗ ಚುನಾವಣೆ ಸಮೀಪಿಸಿದೆ. ನೋಡಬೇಕು. ನೀರು ವಿತರಣೆ ಆಗಬಹುದು.

-ಶಾಂತಾ, ಗೃಹಿಣಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry