ಸೋಮವಾರ, ಮೇ 17, 2021
25 °C
ಹಿರೇಕಂದವಾಡಿ, ಶಾಂತಿಸಾಗರಕ್ಕೆ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಭೇಟಿ

ಶುದ್ಧ ನೀರು ಸರಬರಾಜಿಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ:  ಕುಡಿಯುವ ನೀರನ್ನು   ಸಂಪೂರ್ಣ ಶುದ್ಧೀಕರಿಸಿದ ನಂತರ ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ನಗರಸಭೆ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಆದೇಶಿಸಿದರು.ತಾಲ್ಲೂಕಿನ ಹಿರೇಕಂದವಾಡಿ ಸಮೀಪದ ಮಧ್ಯಂತರ ಜಲ ಶುದ್ಧೀಕರಣ ಕೇಂದ್ರ, ಕೊಟಿಗೆಹಳ್ಳಿ ಪಂಪ್‌ಹೌಸ್ ಹಾಗೂ ಶಾಂತಿಸಾಗರದ ಮೂಲಸ್ಥಾವರಕ್ಕೆ ಸೋಮವಾರ ನಗರಸಭೆ ಹಾಗೂ ಜಲಮಂಡಳಿ ಅಧಿಕಾರಿಗಳ ಜತೆ ಭೇಟಿ ನೀಡಿ ನಂತರ ಅವರು ಮಾತನಾಡಿದರು.ಅಲ್ಲಲ್ಲಿ ಸೋರಿಕೆ ತಡೆಯಲು ಒಂದೆರಡು ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಹಾಗೂ ಮೂಲಸ್ಥಾವರದ ಟ್ರಾನ್ಸ್‌ಫಾರ್ಮರ್  ದುರಸ್ತಿಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಚಿತ್ರದುರ್ಗ, ಹೊಳಲ್ಕೆರೆ, ಮತ್ತಿತರ ಕಡೆಗೆ ಶಾಂತಿಸಾಗರ ಹಾಗೂ ವಾಣಿವಿಲಾಸ ಸಾಗರದಿಂದ ಕುಡಿಯುವ ನೀರು ಸರಬರಾಜಿನ ಸಂಪೂರ್ಣ ನಿರ್ವಹಣೆಯನ್ನು ಜಲಮಂಡಳಿಯೇ ವಹಿಸಿಕೊಳ್ಳಲು ಜಲಮಂಡಳಿಯ ಮೇಲಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ಶಾಂತಿಸಾಗರದಿಂದ ನೀರು ಸರಬರಾಜು ಆಗುವ ಪ್ರದೇಶದವರೆಗೆ ನಿರ್ವಹಣೆಗಾಗಿ ಬೇಕಾಗಿರುವ ತಾಂತ್ರಿಕ ಸಿಬ್ಬಂದಿ, ನಿರಂತರ ವಿದ್ಯುತ್ ಹಾಗೂ ನಿರ್ವಹಣಾ ವೆಚ್ಚವನ್ನು ಜಲಮಂಡಳಿಯೇ ನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.ನೀರು ಸರಬರಾಜು ಆಗುತ್ತಿರುವ ಪುರಸಭೆ, ಗ್ರಾಮ ಪಂಚಾಯಿತಿಗಳಿಂದ ಈವರೆಗೆ ಸುಮಾರು ರೂ 2.7 ಕೋಟಿ ನೀರಿನ ತೆರಿಗೆ ಬಾಕಿ ಇದ್ದು, ಕೂಡಲೇ ಪಾವತಿಸಲು ಜಿಲ್ಲಾ ಪಂಚಾಯ್ತಿ, ಸಂಬಂಧಪಟ್ಟ ಪುರಸಭೆಗಳಿಗೆ ಪತ್ರ ಬರೆಯಲು ನಗರಸಭೆ ಅಧಿಕಾರಿಗೆ ಸೂಚನೆ ನೀಡಿದರು.ನಗರಕ್ಕೆ ಸರಬರಾಜಾಗುತ್ತಿರುವ ಕುಡಿಯುವ ನೀರಿಗೆ ಪಾಲಿ ಅಲ್ಯುಮಿನಿಯಂ ಕ್ಲೋರೈಡ್ ಅನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಸಂಪೂರ್ಣ ಶುದ್ಧೀಕರಿಸಬೇಕು. ಕುಡಿಯುವ ನೀರಿನ ಸರಬರಾಜಿನಲ್ಲಿ ನಾಗರಿಕರಿಂದ ಮತ್ತೆ ಯಾವುದೇ ದೂರು ಬಾರದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.ಜಲಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಚಿದಾನಂದ್, ಎಲೆಕ್ಟ್ರಿಕಲ್ ಸಹಾಯಕ ಎಂಜಿನಿಯರ್ ವಿಜಯಭಾಸ್ಕರ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.