ಶುದ್ಧ ನೀರು ಸಾಧ್ಯವಾಗದೇ?

7

ಶುದ್ಧ ನೀರು ಸಾಧ್ಯವಾಗದೇ?

Published:
Updated:

ಶುದ್ಧ ನೀರು, ಒಂದು ಸೂರು, ನೆಮ್ಮದಿಯ ಜೀವನಕ್ಕೆ ಮೂರು ವೇಳೆಯ ಕೂಳು. ಜನತೆಗೆ ಇದಿಷ್ಟನ್ನೂ ಒದಗಿಸಲು ಸಾಧ್ಯವಾಗದ ಸರ್ಕಾರವನ್ನು ಸರ್ಕಾರ ಎಂದು ಕರೆಯಲಾದೀತೇ? ರಾಜಕೀಯ ಕಾರಣಗಳಿಂದ ಸರ್ಕಾರ ಈಗ ದುರ್ಬಲವಾಗಿದೆ.

ಗುಂಪುಗಾರಿಕೆ, ಭ್ರಷ್ಟಾಚಾರ, ಪಕ್ಷತ್ಯಾಗಗಳಿಂದ ಸರ್ಕಾರ ನಲುಗಿಹೋಗಿದೆ. ರಾಜ್ಯ ಸರ್ಕಾರ ಜನತೆಗೆ ಶುದ್ಧ ಕುಡಿಯುವ ನೀರನ್ನು ಕೂಡ ಪೂರೈಸಲು ಶಕ್ತವಾಗಿಲ್ಲದ ವರದಿ ಬಂದಿದೆ. ಇದು ಸರ್ಕಾರದ  ದೌರ್ಬಲ್ಯವಲ್ಲದೆ ಬೇರೇನೂ ಅಲ್ಲ.

2012-13 ರ ಹಣಕಾಸು ಅವಧಿಯಲ್ಲಿ ಜನವಸತಿ ಪ್ರದೇಶಗಳಲ್ಲಿಯ ಕಲುಷಿತ ನೀರಿನ ಸಮಸ್ಯೆ ಪರಿಹಾರಕ್ಕೆ ಗುರಿ ನಿಗದಿ ಮಾಡಲಾಗಿತ್ತು. ಈ ಗುರಿಯ ಪ್ರಕಾರ ಈ ಅವಧಿಯಲ್ಲಿ ರಾಜ್ಯವು 2218 ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿಯ ಕಲುಷಿತ ನೀರಿನ ಸಮಸ್ಯೆ ಪರಿಹರಿಸಬೇಕಿತ್ತು. ಆದರೆ ಕಳೆದ ಸೆಪ್ಟೆಂಬರ್ ವೇಳೆಗೆ ರಾಜ್ಯ ಸರ್ಕಾರವು ಕೇವಲ 265 ಗ್ರಾಮಗಳಲ್ಲಿಯ ಸಮಸ್ಯೆಗೆ ಮಾತ್ರ ಪರಿಹಾರ ನೀಡಿದೆ.ಇದು ಶೇ 12.85 ಸಾಧನೆ.  ಸರ್ಕಾರದ ಆಲಸಿತನಕ್ಕೆ ಕನ್ನಡಿ ಹಿಡಿಯುವ ಈ ಅಂಶ ನೈರ್ಮಲ್ಯ ಸಚಿವಾಲಯದ ಮಧ್ಯಂತರ ವರದಿಯಲ್ಲಿ ಬಯಲಾಗಿದೆ. ನಮ್ಮ ಬಹುತೇಕ ಹಳ್ಳಿಗಳಲ್ಲಿ ಜನರಿಗೆ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯವಿಲ್ಲ. ಅನೇಕ ಹಳ್ಳಿಗಳಲ್ಲಿ ಜನ ನೀರಿಗಾಗಿ ಮೈಲಿಗಟ್ಟಲೆ  ಹೋಗಿ ಕೆರೆಕಟ್ಟೆಗಳಿಂದ ನೀರು ತರುವ ಸ್ಥಿತಿ ಇದೆ.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಕಾರ್ಯಕ್ರಮಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಜೆಟ್ಟಿನಲ್ಲಿ ಕೋಟಿಗಟ್ಟಲೆ ಹಣ ಒದಗಿಸಿದರೂ ಪುರಸಭೆಗಳು ಮತ್ತು ಪಂಚಾಯತ್ ಆಡಳಿತ ವ್ಯವಸ್ಥೆ ಸಮಸ್ಯೆ ಬಗೆಹರಿಸಲು ವಿಫಲಗೊಂಡಿವೆ. ಇಡೀ ವಿಶ್ವದಲ್ಲೇ ಇಂದು 2.6 ಶತಕೋಟಿ ಜನರು ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ.

ನಗರೀಕರಣ, ಕೈಗಾರಿಕೀಕರಣ ಹಾಗೂ ಏರುತ್ತಿರುವ ಜನಸಂಖ್ಯೆಯಿಂದಾಗಿ ನಮ್ಮ ದೇಶವೂ ಕುಡಿಯುವ ನೀರಿನ ಒತ್ತಡ ಎದುರಿಸುತ್ತಿದೆ. ಎಲ್ಲರಿಗೂ ಆರೋಗ್ಯಕರವಾದ ಶುದ್ಧ ಕುಡಿಯುವ ನೀರು ಒದಗಿಸುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯ. ಈ ಕರ್ತವ್ಯವನ್ನು ಈಡೇರಿಸುವ ಧಾವಂತದಲ್ಲಿ ಸರ್ಕಾರ ಖಾಸಗಿ ಕೊಳವೆಬಾವಿಗಳಿಂದಲೂ ತಾತ್ಕಾಲಿಕವಾಗಿ ನೀರು ಪೂರೈಸಿ ಕೈತೊಳೆದುಕೊಳ್ಳುವ ಕೆಲಸವನ್ನೂ ಮಾಡುತ್ತದೆ.

ಶುದ್ಧತೆಯ ಪ್ರಶ್ನೆಯನ್ನು ಗಮನಿಸುತ್ತಿಲ್ಲ. ರಾಜ್ಯದ ಎರಡು ಲಕ್ಷ ಕೊಳವೆಬಾವಿಗಳಲ್ಲಿ ಲಭ್ಯವಿರುವ ನೀರು ಅಪಾಯಕಾರಿ ಪರಿಣಾಮ ಬೀರುವ ಫ್ಲೋರೈಡ್, ನೈಟ್ರೇಟ್‌ನಂಥ ರಾಸಾಯನಿಕಗಳಿಂದ ಕಲುಷಿತಗೊಂಡಿದೆ ಎಂಬ ಆಘಾತಕಾರಿ ವರದಿಯೂ ಇದೆ.

ನೀರು ಪೂರೈಕೆಯಷ್ಟೇ ಸರ್ಕಾರದ ಜವಾಬ್ದಾರಿ ಅಲ್ಲ. ಶುದ್ಧ ನೀರು ಒದಗಿಸುವುದೂ ಸರ್ಕಾರದ ಜವಾಬ್ದಾರಿ. ಸಾಂಕ್ರಾಮಿಕ ರೋಗಗಳು ಕಲುಷಿತ ನೀರಿನ ಪರಿಣಾಮಗಳಾಗಿದ್ದರೆ, ಅಕಾಲ ಮುಪ್ಪು, ಎಲುಬುಗಳ ಸವೆತದಂತಹ ದೀರ್ಘಕಾಲೀನ ಸಮಸ್ಯೆಗಳು ರಾಸಾಯನಿಕಯುಕ್ತ ನೀರಿನ ಬಳಕೆಯಿಂದ ಉಂಟಾಗುತ್ತದೆ. ಮುನ್ನೆಚ್ಚರಿಕೆ ವಹಿಸುವುದರಲ್ಲೂ ಎಡವಿರುವುದರಿಂದ ಹಳ್ಳಿಗಳಲ್ಲಿ ಜನ ನೀರಿನ ಮೂಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಗ್ರಾಮೀಣಭಾಗದಲ್ಲಿ ಅಂತರ್ಜಲವೂ ಕುಸಿದಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ಚಿಂತನೆ ಕಾರ್ಯರೂಪಕ್ಕೆ ತರಲು ಇವರಿಗೇನು ಅಡ್ಡಿ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry