ಶುಕ್ರವಾರ, ಫೆಬ್ರವರಿ 26, 2021
30 °C
ಹಾಕಿ ಇಂಡಿಯಾ ಲೀಗ್‌ ಟೂರ್ನಿ: ಇಂದು ಕಳಿಂಗ ಲ್ಯಾನ್ಸರ್‌್ ಎದುರು ಪಂದ್ಯ

ಶುಭಾರಂಭದ ನಿರೀಕ್ಷೆಯಲ್ಲಿ ವಿಜರ್ಡ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುಭಾರಂಭದ ನಿರೀಕ್ಷೆಯಲ್ಲಿ ವಿಜರ್ಡ್ಸ್‌

ಭುವನೇಶ್ವರ (ಪಿಟಿಐ/ಐಎಎನ್‌ಎಸ್‌): ಮೊದಲ ಮೂರು ಆವೃತ್ತಿಗಳಲ್ಲಿ ಹಾಕಿ ಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದ ಹಾಕಿ ಇಂಡಿಯಾ ಲೀಗ್‌ನ  (ಎಚ್ಐಎಲ್‌) ನಾಲ್ಕನೇ ಆವೃತ್ತಿಗೆ ಸೋಮವಾರ ಚಾಲನೆ ಲಭಿಸಲಿದೆ.ಹೊಸ ಆಟಗಾರರು, ನೂತನ ಸ್ಕೋರಿಂಗ್‌ ಪದ್ಧತಿ ಹೀಗೆ ಹಲವು ಬದಲಾವಣೆಗಳೊಂದಿಗೆ ಆರಂಭವಾಗು ತ್ತಿರುವ ಲೀಗ್‌ ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.ಆರಂಭಿಕ ಪಂದ್ಯದಲ್ಲಿ ಬಲಿಷ್ಠ ಉತ್ತರ ಪ್ರದೇಶ ವಿಜರ್ಡ್ಸ್‌ ಮತ್ತು ಕಳಿಂಗ ಲ್ಯಾನ್ಸರ್‌ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೆ ಕಳಿಂಗ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧಗೊಂಡಿದೆ.ಈ ವರ್ಷದ ಆಗಸ್ಟ್‌ನಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಒಲಿಂಪಿಕ್‌ ನಡೆಯಲಿದೆ. ಪ್ರತಿಷ್ಠಿತ ಕೂಟಕ್ಕೂ ಮುನ್ನ ಉತ್ತಮ ಸಾಮರ್ಥ್ಯ ನೀಡಿ ಮನೋಬಲ ವೃದ್ಧಿಸಿಕೊಳ್ಳಲು ಆಟಗಾರರಿಗೆ ಈ ಲೀಗ್‌ ವೇದಿಕೆಯಾಗಿದೆ.ಹೋದ ವರ್ಷ ಹೊಸದಾಗಿ ಆಟಗಾರರ ಹರಾಜು ನಡೆದಿದ್ದರಿಂದ ಹಿಂದಿನ ಆವೃತ್ತಿಗಳಲ್ಲಿ ಆಡಿದ್ದ ಆಟಗಾರರು ಈ ಬಾರಿ ಬೇರೆ ಬೇರೆ  ತಂಡಗಳನ್ನು ಸೇರಿಕೊಂಡಿದ್ದಾರೆ. ಒಟ್ಟು ₹ 5.7 ಕೋಟಿ ಬಹುಮಾನ ಮೊತ್ತ ಹೊಂದಿರುವ  ಟೂರ್ನಿಯಲ್ಲಿ ಆರು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಫೆಬ್ರುವರಿ 21ರಂದು ಲೀಗ್‌ನ ಫೈನಲ್‌ ಪಂದ್ಯ ನಡೆಯಲಿದೆ.ವಿಶ್ವಾಸದಲ್ಲಿ ವಿಜರ್ಡ್ಸ್‌: ಡ್ರಾಗ್‌ ಫ್ಲಿಕ್‌ ಪರಿಣತ ಕರ್ನಾಟಕದ ವಿ.ಆರ್‌. ರಘುನಾಥ್‌ ನಾಯಕತ್ವದ ವಿಜರ್ಡ್ಸ್‌ ತಂಡ ಕಳಿಂಗ ಲ್ಯಾನ್ಸರ್‌ ತಂಡವನ್ನು ಮಣಿಸಿ ಶುಭಾರಂಭ ಮಾಡುವ ವಿಶ್ವಾಸ ಹೊಂದಿದೆ.ವಿಜರ್ಡ್ಸ್‌ ಈ ಬಾರಿ ರೋಜರ್‌ ವಾನ್‌ ಜೆಂಟ್‌ ಅವರನ್ನು ಕೋಚ್ ಆಗಿ ನೇಮಿಸಿಕೊಂಡಿದೆ. ರೋಲಂಟ್‌ ಓಲ್ಟಮಸ್‌ ಹಿಂದಿನ ಮೂರು ಆವೃತ್ತಿಗಳಲ್ಲಿ ತರಬೇತುದಾರರಾಗಿದ್ದರು.ಜೆಂಟ್‌ ಮಾರ್ಗದರ್ಶನದಲ್ಲಿ ಈ ತಂಡದ ಆಟಗಾರರು ಕೆಲ ದಿನಗಳಿಂದ ಕಠಿಣ ಅಭ್ಯಾಸವನ್ನೂ ನಡೆಸಿದ್ದಾರೆ. ಇದು ತಂಡದ ವಿಶ್ವಾಸಕ್ಕೆ ಕಾರಣವಾಗಿದೆ.ಆಸ್ಟ್ರೇಲಿಯಾದ ಜೆಮಿ ಡ್ವೇಯರ್‌, ಜರ್ಮನಿಯ ತೋಬಿಯಸ್‌ ಹೌಕ್‌, ಅರ್ಜೆಂಟೀನಾದ ಹೊಂಜಾಲೊ ಪೀಲಟ್‌ , ಭಾರತದ ಆಕಾಶ್‌ದೀಪ್‌ ಸಿಂಗ್‌ ಅವರಂತಹ ಪ್ರತಿಭಾನ್ವಿತರನ್ನು ಹೊಂದಿರುವ ವಿಜರ್ಡ್ಸ್‌ ಮುಂಚೂಣಿ ಹಾಗೂ ರಕ್ಷಣಾ ವಿಭಾಗದಲ್ಲಿ ಶಕ್ತಿಯುತವಾಗಿದೆ.ಪ್ರಮುಖ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರ ಬಲವೂ ತಂಡದ ಬೆನ್ನಿಗಿದೆ. ಹೀಗಾಗಿ ರಘುನಾಥ್‌ ಪಡೆ ಲ್ಯಾನ್ಸರ್‌ ತಂಡವನ್ನು ಸುಲಭವಾಗಿ ಹಣಿಯುವ ವಿಶ್ವಾಸ ಹೊಂದಿದೆ.‘ನಮ್ಮ ತಂಡ ಎಲ್ಲಾ ವಿಭಾಗಗ ಳಲ್ಲಿಯೂ ಬಲಿಷ್ಠವಾಗಿದೆ. ಒಂದು ವಾರದಿಂದ ಸತತ ಅಭ್ಯಾಸ ನಡೆಸಿದ್ದು ಲ್ಯಾನ್ಸರ್‌ ಸವಾಲಿಗೆ ಸಿದ್ಧವಾಗಿದ್ದೇವೆ’ ಎಂದು ವಿಜರ್ಡ್ಸ್‌ ಕೋಚ್ ಜೆಂಟ್‌ ತಿಳಿಸಿದ್ದಾರೆ.ಕಳಿಂಗ ಲ್ಯಾನ್ಸರ್ಸ್ ತಂಡ ಕೂಡ ಬಲಿಷ್ಠ ಆಟಗಾರರನ್ನು ಹೊಂದಿದ್ದು ವಿಜರ್ಡ್ಸ್‌ಗೆ ಸೋಲುಣಿಸುವ ಲೆಕ್ಕಾಚಾರ ಹೊಂದಿದೆ.ಮುಖ್ಯಾಂಶಗಳು

* ಹೋದ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ರಾಂಚಿ ರೇಸ್‌

* ಒಟ್ಟು 5.7 ಕೋಟಿ ಬಹುಮಾನ

* ರಘುನಾಥ್‌, ಶ್ರೀಜೇಶ್‌, ಆಕಾಶ್‌ದೀಪ್‌ ಆಕರ್ಷಣೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.