ಮಂಗಳವಾರ, ಮೇ 17, 2022
27 °C

ಶುಭಾರಂಭದ ಲೆಕ್ಕಾಚಾರದಲ್ಲಿ ಆಸೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡದವರು ಹತ್ತನೇ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಅಭಿಯಾನವನ್ನು ಸೋಮವಾರ ಆರಂಭಿಸಲಿದ್ದಾರೆ.ಮೊಟೇರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ರಿಕಿ ಪಾಂಟಿಂಗ್ ನೇತೃತ್ವದ ತಂಡ ಜಿಂಬಾಬ್ವೆ ವಿರುದ್ಧ ಪೈಪೋಟಿ ನಡೆಸಲಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆಯುವ ವಿಶ್ವಾಸದಲ್ಲಿ ಆಸೀಸ್ ತಂಡ ಇದೆ.ಸತತ ಮೂರು ಸಲ ಟ್ರೋಫಿ ಜಯಿಸಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಆಸ್ಟ್ರೇಲಿಯಾ ತಂಡಕ್ಕೆ ಈ ಬಾರಿ ‘ಫೇವರಿಟ್’ ಎಂಬ ಹಣೆಪಟ್ಟಿ ಲಭಿಸಿಲ್ಲ. ಏಕೆಂದರೆ ಕಳೆದ ಕೆಲ ತಿಂಗಳುಗಳಲ್ಲಿ ಕಾಂಗರೂ ನಾಡಿನವರು ಕಳಪೆ ಪ್ರದರ್ಶನ ನೀಡಿದ್ದಾರೆ.ವಿಶ್ವಕಪ್ ಟೂರ್ನಿಗೆ ಸಜ್ಜಾಗುವ ನಿಟ್ಟಿನಲ್ಲಿ ಆಡಿದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಪಾಂಟಿಂಗ್ ಬಳಗ ನಿರಾಸೆ ಅನುಭವಿಸಿತ್ತು. ಬೆಂಗಳೂರಿನಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಕೈಯಲ್ಲಿ ತಂಡಕ್ಕೆ ಸೋಲು ಎದುರಾಗಿತ್ತು.ಆದ್ದರಿಂದ ಜಿಂಬಾಬ್ವೆ ವಿರುದ್ಧ ಭರ್ಜರಿ ಗೆಲುವು ಪಡೆದು ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಆತ್ಮವಿಶ್ವಾಸವನ್ನು ಮರಳಿ ಪಡೆಯುವ ಗುರಿಯನ್ನು ಆಸ್ಟ್ರೇಲಿಯಾ ಹೊಂದಿದೆ. ವಿಶ್ವಕಪ್ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ತಂಡದ ದಾಖಲೆ ಅತ್ಯುತ್ತಮವಾಗಿದೆ. ಕಳೆದ ಎರಡು ವಿಶ್ವಕಪ್ (2003 ಮತ್ತು 2007) ಟೂರ್ನಿಗಳಲ್ಲಿ ಈ ತಂಡ ರಿಕಿ ಪಾಂಟಿಂಗ್ ಅವರ ನೇತೃತ್ವದಲ್ಲಿ ಸತತ 22 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಗೆಲುವಿನ ದಾಖಲೆಯ ಓಟವನ್ನು ಮುಂದುವರಿಸುವ ತವಕದಲ್ಲಿ ತಂಡ ಇದೆ.ಜಿಂಬಾಬ್ವೆ ತಂಡ ಬಲಾಢ್ಯ ಎದುರಾಳಿಗಳಿಗೆ ಎಷ್ಟರಮಟ್ಟಿಗೆ ಪೈಪೋಟಿ ನೀಡುತ್ತದೆ ಎಂಬುದನ್ನು ನೋಡಬೇಕು. ಎಲ್ಟಾನ್ ಚಿಗುಂಬುರ ನೇತೃತ್ವದ ತಂಡ ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿದೆ. ತಂಡದ ಬ್ಯಾಟಿಂಗ್ ಬ್ರೆಂಡನ್ ಟೇಲರ್ ಅವರನ್ನು ಅವಲಂಬಿಸಿದೆ. ಆದರೆ ಬ್ರೆಟ್ ಲೀ ಒಳಗೊಂಡಂತೆ ಆಸೀಸ್ ತಂಡದ ಬೌಲರ್‌ಗಳ ಪ್ರಭಾವಿ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಲ್ಲುವಂತಹ ಬ್ಯಾಟ್ಸ್‌ಮನ್ ಜಿಂಬಾಬ್ವೆ ತಂಡದಲ್ಲಿ ಇಲ್ಲ.ಮಾಜಿ ನಾಯಕ ಪ್ರಾಸ್ಪರ್ ಉತ್ಸೇಯ, ರೇ ಪ್ರೈಸ್ ಮತ್ತು ಗ್ರೇಮ್ ಕ್ರೆಮರ್ ಅವರ ಮೂಲಕ ಸ್ಪಿನ್ ಆಕ್ರಮಣ ನಡೆಸಿ ಆಸೀಸ್ ತಂಡವನ್ನು ಕಟ್ಟಿಹಾಕುವ ಯೋಜನೆ ಜಿಂಬಾಬ್ವೆ ತಂಡದ್ದು.ಶೇನ್ ವ್ಯಾಟ್ಸನ್, ರಿಕಿ ಪಾಂಟಿಂಗ್ ಮತ್ತು ಮೈಕಲ್ ಕ್ಲಾರ್ಕ್ ಲಯ ಕಂಡುಕೊಂಡರೆ ಆಸೀಸ್‌ಗೆ ಬೃಹತ್ ಮೊತ್ತ ಪೇರಿಸುವುದು ಕಷ್ಟವಾಗದು. ವ್ಯಾಟ್ಸನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಪಾಂಟಿಂಗ್ ಕೂಡ ಅಭ್ಯಾಸ ಪಂದ್ಯಗಳಲ್ಲಿ ಎರಡು ಅರ್ಧ ಶತಕ ಸಿಡಿಸುವ ಮೂಲಕ ಮಿಂಚಿದ್ದಾರೆ.ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಪಾಂಟಿಂಗ್ ಚಿಂತೆಗೆ ಕಾರಣವಾಗಿದೆ. ಬ್ರಾಡ್ ಹಡಿನ್, ಕ್ಯಾಮರೂನ್ ವೈಟ್ ಮತ್ತು ಡೇವಿಡ್ ಹಸ್ಸಿ ಅವರು ದೊಡ್ಡ ಇನಿಂಗ್ಸ್ ಕಟ್ಟುವ ಕನಸಿನಲ್ಲಿದ್ದಾರೆ.ಆಸ್ಟ್ರೇಲಿಯಾ

ರಿಕಿ ಪಾಂಟಿಂಗ್ (ನಾಯಕ), ಮೈಕಲ್ ಕ್ಲಾರ್ಕ್, ಶೇನ್ ವ್ಯಾಟ್ಸನ್, ಬ್ರಾಡ್ ಹಡಿನ್, ಕ್ಯಾಮರೂನ್ ವೈಟ್, ಕಾಲಮ್ ಫರ್ಗ್ಯುಸನ್, ಡೇವಿಡ್ ಹಸ್ಸಿ, ಟಿಮ್ ಪೈನ್, ಸ್ಟೀವನ್ ಸ್ಮಿತ್, ಜಾನ್ ಹೇಸ್ಟಿಂಗ್ಸ್, ಮಿಷೆಲ್ ಜಾನ್ಸನ್, ಜಾಸನ್ ಕ್ರೇಜಾ, ಬ್ರೆಟ್ ಲೀ, ಡಗ್ ಬೋಲಿಂಜರ್, ಶಾನ್ ಟೇಟ್.ಜಿಂಬಾಬ್ವೆ

ಎಲ್ಟಾನ್ ಚಿಗುಂಬುರ (ನಾಯಕ), ರೆಜಿಸ್ ಚಕಾಬ್ವ, ಚಾರ್ಲ್ಸ್ ಕೊವೆಂಟ್ರಿ, ಗ್ರೇಮ್ ಕ್ರೆಮರ್, ಕ್ರೆಗ್ ಇರ್ವಿನ್, ಟೆರಿ ಡಫಿನ್, ಜಾರ್ಜ್ ಲ್ಯಾಂಬ್, ಶಿಂಗಿರೈ ಮಸಕಜ, ಕ್ರಿಸ್ ಮೊಫು, ರೇ ಪ್ರೈಸ್, ತಟೇಂಡ ತೈಬು, ಟಿನೇಶ್ ಪನ್ಯಾಗರ, ಬ್ರೆಂಡನ್ ಟೇಲರ್, ಪ್ರಾಸ್ಪರ್ ಉತ್ಸೇಯ, ಸೀನ್ ವಿಲಿಯಮ್ಸ್.ಅಂಪೈರ್: ಅಶೋಕ ಡಿ’ಸಿಲ್ವ ಮತ್ತು ರಿಚರ್ಡ್ ಕೆಟೆಲ್‌ಬರೋ; ಮೂರನೇ ಅಂಪೈರ್: ಅಮೀಷ್ ಸಾಹಿಬಾ.

ಮ್ಯಾಚ್ ರೆಫರಿ: ಜೆಫ್ ಕ್ರೋವ್

ಆಟದ ಅವಧಿ: ಮಧ್ಯಾಹ್ನ 2.30ರಿಂದ ಸಂಜೆ 6.00 ಹಾಗೂ 6.40ರಿಂದ

ಪಂದ್ಯ ಮುಗಿಯುವವರೆಗೆ.

ನೇರ ಪ್ರಸಾರ: ಇಎಸ್‌ಪಿಎನ್/ಸ್ಟಾರ್ ಕ್ರಿಕೆಟ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.