ಶುಕ್ರವಾರ, ನವೆಂಬರ್ 22, 2019
23 °C

ಶುಭ ಮುಹೂರ್ತಕ್ಕೆ ಶರಣು...!

Published:
Updated:

ಬಾಗಲಕೋಟೆ: ಮೇ 5ರಂದು ನಡೆಯುವ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರದ ಚುನಾವಣೆಗೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಬಿಎಸ್‌ಆರ್‌ಕಾಂಗ್ರೆಸ್, ಬಿಎಸ್‌ಪಿ ಪಕ್ಷಗಳಿಂದ ಸ್ಪರ್ಧಿಸಲು ಅಖಾಡಕ್ಕೆ ಇಳಿದಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವಿಷಯದಲ್ಲಿ ಶುಭ ಮುಹೂರ್ತದ ಮೊರೆಹೋಗಿದ್ದಾರೆ.ಹೊಸ ವರ್ಷ `ಯುಗಾದಿ'ಯ ಬೇವು-ಬೆಲ್ಲ ತಿಂದು, ಹಿರಿಯರ ಆಶೀರ್ವಾದ ಪಡೆದು ಬಳಿಕ ಇದೇ 15ರಂದು ನಾಮಪತ್ರ ಸಲ್ಲಿಸಲು ಮೂಹೂರ್ತ ನಿಗದಿ ಮಾಡಿಕೊಂಡಿದ್ದಾರೆ.ತಮ್ಮ ಜಾತಕ, ಕುಂಡಲಿ, ನಕ್ಷತ್ರ, ರಾವುಕಾಲ, ಶುಭಕಾಲವನ್ನು ಜ್ಯೋತಿಷಿಗಳಿಂದ ಕೇಳಲಾಗಿ ಎಲ್ಲರಿಗೂ ನಾಮಪತ್ರ ಸಲ್ಲಿಸಲು 15 ಶುಭ ದಿನ ಎಂಬ ಸಂದೇಶ ವ್ಯಕ್ತವಾಗಿದೆ. ಪಕ್ಷ, ಕ್ಷೇತ್ರಗಳು ಬೇರೆಯಾದರೂ ನಾಮಪತ್ರ ಸಲ್ಲಿಕೆಯಲ್ಲಿ ಮಾತ್ರ ಎಲ್ಲ ಅಭ್ಯರ್ಥಿಗಳ  ಗ್ರಹಗತಿ ಒಂದೇ ಆಗಿದೆ. ಕಾರಣ ಅಂದು ಒಂದೇ ದಿನ ಹೆಚ್ಚಿನ ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ.ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕುರಿತು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವಪ್ರಭು ಸರನಾಡಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಮತ್ತು ಕಾಂಗ್ರೆಸ್ ಎಸ್‌ಸಿ. ಎಸ್‌ಟಿ ಮುಖಂಡ ಮುತ್ತಣ್ಣ ಬೆಣ್ಣೂರ(ಡಿಸಿಸಿ ಅಧ್ಯಕ್ಷ ಸೌದಾಗರ ಸಂಪರ್ಕಕ್ಕೆ ಸಿಗಲಿಲ್ಲ) ಅವರನ್ನು ಮಂಗಳವಾರ `ಪ್ರಜಾವಾಣಿ' ದೂರವಾಣಿ ಮೂಲಕ ಸಂಪರ್ಕಿಸಿದಾಗ ಎಲ್ಲರೂ ತಮ್ಮ ಪಕ್ಷಗಳ ಅಭ್ಯರ್ಥಿಗಳು 15 ರಂದೇ ನಾಮಪತ್ರ ಸಲ್ಲಿಸಲು ನಿಶ್ಚಯಿಸಿದ್ದಾರೆ ಎಂದು ತಿಳಿಸಿದರು.ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಎಂ.ಕೆ.ಪಟ್ಟಣಶೆಟ್ಟಿ, ಮುರುಗೇಶ ನಿರಾಣಿ, ಗೋವಿಂದ ಕಾರಜೋಳ (ಕ್ಷೇತ್ರ ಅಂತಿಮಗೊಂಡಿಲ್ಲ), ಶ್ರೀಕಾಂತ ಕುಲಕರ್ಣಿ, ಸಿದ್ದು ಸವದಿ, ಕಾಂಗ್ರೆಸ್‌ನ ಎಚ್.ವೈ.ಮೇಟಿ, ವಿಜಯಾನಂದ ಕಾಶಪ್ಪನವರ, ಡಾ.ದೇವರಾಜ ಪಾಟೀಲ, ಆರ್.ಬಿ.ತಿಮ್ಮಾಪುರ, ಸಿದ್ದು ನ್ಯಾಮ ಗೌಡ, ಉಮಾಶ್ರೀ ಹಾಗೂ ಜೆಡಿಎಸ್‌ನ ಬಸವ ಪ್ರಭು ಸರನಾಡಗೌಡ, ಮಹಾಂತೇಶ ಮಮದಾಪುರ, ರಂಗನಗೌಡ ಪಾಟೀಲ, ಬಿ.ಎಸ್.ಸಿಂಧೂರ, ಬಸವರಾಜ ಜಕ್ಕನಗೌಡ ಅವರು ಸೇರಿದಂತೆ ಮತ್ತಿತರರ ಪಕ್ಷಗಳ ಅಭ್ಯರ್ಥಿಗಳು 15ರಂದು ತಮ್ಮ ಬೆಂಬಲಿಗರೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಆಯಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.17 ಕೊನೆಯ ದಿನ: ನಾಮಪತ್ರ ಸಲ್ಲಿಸಲು ಇದೇ 17 ಕೊನೆಯ ದಿನವಾಗಿದೆ. 18ರಂದು ನಾಮಪತ್ರ ಪರಿಶೀಲನೆ,  20ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.ಸೂಚಕರು: ಮಾನ್ಯತೆ ಪಡೆದ ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಒಬ್ಬ ಸೂಚಕರು ಸಹಿ ಮಾಡಿರಬೇಕು. ಮಾನ್ಯತೆ ಪಡೆಯದ ಮತ್ತು ಪಕ್ಷೇತರ ಅಭ್ಯರ್ಥಿಗಳು 10 ಜನ ಸೂಚಕರ ಸಹಿ ಮಾಡಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.ಸೂಚಕರು ಕಡ್ಡಾಯವಾಗಿ ಅದೇ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯೊಂದಿಗೆ ತನ್ನ ಮತದಾರರ ಗುರುತಿನ ಚೀಟಿ ಮತ್ತು ಮತದಾರರ ಪಟ್ಟಿಯೊಂದಿಗೆ ಹಾಜರಿರಬೇಕು.ಠೇವಣಿ: ಸಾಮಾನ್ಯ ಅಭ್ಯರ್ಥಿಗಳಿಗೆ ರೂ.10 ಸಾವಿರ ಮತ್ತು ಎಸ್.ಸಿ., ಎಸ್.ಟಿ ಅಭ್ಯರ್ಥಿಗಳಿಗೆ ರೂ 5 ಸಾವಿರ ಠೇವಣಿ ಇಡಬೇಕು ಎಂದು ಆಯೋಗ ತಿಳಿಸಿದೆ.ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತ್ರ ಸಲ್ಲಿಸಲು ಅವಕಾಶ ಇದೆ. ಒಬ್ಬ ಅಭ್ಯರ್ಥಿ 2 ವಿಧಾನಸಭಾ ಮತಕ್ಷೇತ್ರಕ್ಕಿಂತ ಹೆಚ್ಚು ಮತಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ. ಅಭ್ಯರ್ಥಿ ಸೇರಿದಂತೆ ಒಟ್ಟು 5 ಜನರು ಮಾತ್ರ ಚುನಾವಣಾಧಿಕಾರಿಗಳ ಕಚೇರಿಯೊಳಗೆ ನಾಮಪತ್ರ ಸಲ್ಲಿಸಲು ಹೋಗಬಹುದು. ಕೇವಲ 3 ವಾಹನಗಳನ್ನು ಮಾತ್ರ ಚುನಾವಣಾಧಿಕಾರಿಗಳ ಕಚೇರಿಯ 100 ಮೀಟರ್ ಆವರಣದೊಳಗೆ ಬಿಡಲಾಗುತ್ತದೆ.ಅಭ್ಯರ್ಥಿಗಳು ತಮ್ಮ ಚರ, ಸ್ಥಿರಾಸ್ತಿ, ಶಿಕ್ಷೆ, ಬಾಕಿ ಇತ್ಯಾದಿಗಳ ಪ್ರಮಾಣ ಪತ್ರವನ್ನು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ 17ರಂದು ಮಧ್ಯಾಹ್ನ 3 ಗಂಟೆಯೊಳಗೆ ಚುನಾವಣಾಧಿಕಾರಿ ಗಳಿಗೆ ಸಲ್ಲಿಸಬೇಕು.ಬ್ಯಾಂಕ್ ಖಾತೆ: ಅಭ್ಯರ್ಥಿಯು ನಾಮಪತ್ರ ವನ್ನು ಸಲ್ಲಿಸುವಾಗ ಚುನಾವಣಾ ನಿಮಿತ್ಯ ಬ್ಯಾಂಕಿನ ತನ್ನ ಹೆಸರಿನಲ್ಲ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಹೊಸದಾಗಿ ತೆಗೆದು ಅದರ ವಿವರಗಳನ್ನು ನಾಮಪತ್ರದೊಂದಿಗೆ ಸಲ್ಲಿಸಬೇಕು. ಬ್ಯಾಂಕ್ ಖಾತೆಯು ಅಭ್ಯರ್ಥಿ ಮತ್ತು ಆತನ ಚುನಾವಣಾ ಏಜೆಂಟ್‌ನ ಜಂಟಿ ಖಾತೆಯಲ್ಲಿ ಇರಬೇಕು. ರೂ.20 ಸಾವಿರಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿದಲ್ಲಿ ಕಡ್ಡಾಯವಾಗಿ ಅದೇ ಖಾತೆಯಿಂದ ಚೆಕ್ ಮೂಲಕ ನೀಡಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರತಿಕ್ರಿಯಿಸಿ (+)