ಶುರುವಾಗದ ಹೆದ್ದಾರಿ ಕಾಮಗಾರಿ

7

ಶುರುವಾಗದ ಹೆದ್ದಾರಿ ಕಾಮಗಾರಿ

Published:
Updated:

ಭಟ್ಕಳ: ದೊಡ್ಡ ಮಳೆ ಮುಗಿದು ತಿಂಗಳಾಯಿತು. ಮಳೆಗಾಲದ ನಂತರ ಹೆದ್ದಾರಿ ದುರಸ್ತಿ ಕಾಮಗಾರಿ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ನೀಡಿದ್ದ ಭರವಸೆಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಇದರಿಂದಾಗಿ ಪ್ರಯಾಣಿಕರು ರಸ್ತೆಯಲ್ಲಿ ಸಂಚರಿಸುವ ನರಕ ಯಾತನೆಯಿಂದ ಮುಕ್ತಿ ಪಡೆಯಲು ಸಾಧ್ಯವಾಗಿಲ್ಲ.ಕಳೆದ ನಾಲ್ಕೈದು ತಿಂಗಳಲ್ಲಿ ಮಳೆಯ ರಭಸಕ್ಕೆ ರಾಷ್ಟ್ರೀಯ ಹೆದ್ದಾರಿ 17 ಹಾಳಾಗಿದೆ. ಹದಗೆಟ್ಟ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತಪ್ಪಿಸಿ ಮುಂದೆ ಸಾಗಲು ಹರ ಸಾಹಸ ಮಾಡಬೇಕಾಗಿದೆ. ಎದುರಿಗೆ ವಾಹನ ಬಂದಾಗ ಗುಂಡಿಗಿಳಿದರೆ ಮೇಲೇರುವುದು ಮತ್ತೊಂದು ರೀತಿಯ ಸಾಹಸವಾಗಿದೆ. ಅಪಘಾತಕ್ಕೆ ನಿತ್ಯ ಆಹ್ವಾನ ನೀಡುತ್ತಿರುವ ರಸ್ತೆ ಪ್ರಯಾಣಿಕರ ಪಾಲಿಗೆ `ಯಮ ದಾರಿ~ ಎನಿಸಿದೆ.ಹಾಳಾದ ರಸ್ತೆಯಲ್ಲಿ ವಾಹನ ಚಲಾಯಿಸುವುದು ಚಾಲಕರಿಗೆ ಸವಾಲಿನ ಪ್ರಶ್ನೆಯಾದರೆ, ಪ್ರಯಾಣಿರಿಗೆ ಆತಂಕದ ಸಂಚಾರ. ರಾತ್ರಿ ಪಯಣಿಸಿದರೆ ಬೆಳಗಾಗೆದ್ದು ಮೈಕೈ ನೋವಿಗೆ ನೇರವಾಗಿ ಆಸ್ಪತ್ರೆ ಸೇರಿದರೂ ವಿಶೇಷವೇನಿಲ್ಲ. ವಾಹನದ ಬಿಡಿ ಭಾಗಗಳು ಜಖಂಗೊಂಡು ಗ್ಯಾರೇಜ್‌ಗೆ ಬಿಡುವುದು ಅನಿವಾರ್ಯ.ಭಟ್ಕಳದಿಂದ ಬೈಲೂರು ವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಕಳೆದ ವರ್ಷ ಸುಮಾರು 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿತ್ತು. ಇದರಲ್ಲಿ ವೆಂಕಟಾಪುರದ ವರೆಗಿನ ರಸ್ತೆ ಮಾತ್ರ ಸ್ವಲ್ಪ ಸುಸ್ಥಿತಿಯಲ್ಲಿದೆ. ಅಲ್ಲಿಂದ ಮುಂದೆ ಹೊನ್ನಾವರ ವರೆಗೆ ಹೆದ್ದಾರಿಯಲ್ಲಿ ಬರೀ ಹೊಂಡಗಳದ್ದೇ ಕಾರುಬಾರು.ಹೆದ್ದಾರಿ ಉತ್ತಮವಾಗಿದ್ದರೆ ಭಟ್ಕಳ- ಹೊನ್ನಾವರ ನಡುವಿನ 38 ಕಿ.ಮೀ ದೂರವನ್ನು ತಲುಪಲು ಕೇವಲ 45 ನಿಮಿಷ ಸಾಕು. ಸಂಚಾರದ ಒತ್ತಡವಿದ್ದರೆ ಹದಿನೈದು ನಿಮಿಷ ಜಾಸ್ತಿ ಆಗುವುದು. ಆದರೆ ಈಗ ಇದೇ ದೂರವನ್ನು ಕ್ರಮಿಸಲು ಕನಿಷ್ಠ ಎರಡೂವರೆ ತಾಸಿಗೂ ಹೆಚ್ಚು ಸಮಯ ಬೇಕು. ಇನ್ನು ಡೀಸೆಲ್, ಪೆಟ್ರೋಲ್‌ಸಹ ಹೆಚ್ಚಿಗೆ ಬಳಕೆಯಾಗುವುದು. ಪ್ರಯಾಣದ ವೆಚ್ಚವೂ ದುಪ್ಪಟ್ಟಾಗುತ್ತದೆ. ಇದಲ್ಲದೆ ಅಪಘಾತದ ಭಯ ಕ್ಷಣ ಕ್ಷಣವೂ ಕಾಡುತ್ತದೆ. ಟೆಂಪೋ ಮಾಲೀಕ- ಚಾಲಕರ ಸಂಘದ ಅಧ್ಯಕ್ಷ ಗಣೇಶ ನಾಯ್ಕ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಎಲ್ಲರಿಗೂ ಮಾದರಿ ಆಗಬೇಕಿತ್ತು. ಆದರೆ ಇದು ಈಗ ಹಳ್ಳಿ ರಸ್ತೆಗಿಂತ ಕೆಟ್ಟದ್ದಾಗಿದೆ. ಇದರಲ್ಲಿ ವಾಹನ ಚಲಿಸುವುದಕ್ಕೆ ಭಯವಾಗುತ್ತದೆ. ಇನ್ನು ಪ್ರಯಾಣಿಕರ ಗತಿ ದೇವರೇ ಬಲ್ಲ.ದುರಸ್ತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ ಎನ್ನುತ್ತಾರೆ. ರಾಷ್ಟ್ರೀಯ ಹೆದ್ದಾರಿ ಹೊನ್ನಾವರ ಉಪವಿಭಾಗದ ಎಂಜಿನಿಯರ್ ಎಂ.ಜಿ. ಹೆಗಡೆ ಮಾತನಾಡಿ, ಮಳೆಯ ರಭಸಕ್ಕೆ ಹೆದ್ದಾರಿ ಹಾಳಾಗಿದೆ. ದುರಸ್ತಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಸದ್ಯದಲ್ಲಿಯೇ ಕೆಲಸ ಆರಂಭಿಸಲಾಗುವುದು. ತಾತ್ಕಾಲಿಕವಾಗಿ ತೇಪೆ ಕಾರ್ಯ ಪ್ರಗತಿಯಲ್ಲಿದೆ ಎನ್ನುವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry