ಮಂಗಳವಾರ, ಏಪ್ರಿಲ್ 13, 2021
25 °C

ಶುಲ್ಕ ಏರಿಕೆ ವಿರುದ್ಧ ಸಹಿ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಪಾಲಿಕೆಯ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ ಹೆಚ್ಚಿಸಿರುವುದನ್ನು ವಿರೋಧಿಸಿ ಏ. 26ರಿಂದ ಅವಳಿನಗರದಲ್ಲಿ ಸಹಿ ಸಂಗ್ರಹ ಚಳವಳಿ ನಡೆಸಲಾಗುವುದು’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ದೀಪಕ ಚಿಂಚೋರೆ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಹು-ಧಾ ಪಾಲಿಕೆಯು ಕಟ್ಟಡ ಪರವಾನಗಿ ಶುಲ್ಕವನ್ನು ಅವೈಜ್ಞಾನಿಕವಾಗಿ ಯದ್ವಾ-ತದ್ವಾ ಏರಿಸಿದೆ. ಇದರಿಂದ ಸಾರ್ವಜನಿಕರ ಮೇಲೆ 3-4 ಪಟ್ಟು ಅಧಿಕ ಭಾರ ಬಿದ್ದಿದೆ’ ಎಂದು ಹೇಳಿದರು.‘18 ವರ್ಷಗಳ ನಂತರ ಕಟ್ಟಡ ಪರವಾನಗಿ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂದು ಮೇಯರ್ ತಪ್ಪು ಮಾಹಿತಿ ನೀಡಿದ್ದಾರೆ. ವಾಸ್ತವವಾಗಿ 2005ರ ಏಪ್ರಿಲ್ 21ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲೂ ಕಟ್ಟಡ ಪರವಾನಗಿ ಶುಲ್ಕವನ್ನು ಪರಿಷ್ಕರಿಸಲಾಗಿತ್ತು’ ಎಂದರು. ‘ಮೈಸೂರು ಪಾಲಿಕೆಯಲ್ಲಿ ಪ್ರತಿ ಸಾವಿರ ಚದರ ಅಡಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಶುಲ್ಕವಾಗಿ ರೂ. ಏಳು ಸಾವಿರ ಪಡೆಯಲಾಗುತ್ತದೆ. ಹು-ಧಾ ಪಾಲಿಕೆಯಲ್ಲಿ ಈ ಮೊತ್ತ 22 ಸಾವಿರ ಆಗಿದೆ ’ ಎಂದು  ದೂರಿದರು.ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಪಡೆಯದೆ ಗೃಹ ಪ್ರವೇಶ ಮಾಡಿದರೆ ರೂ. 5 ಸಾವಿರ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ‘ಎಲ್ಲ ನಿರ್ಧಾರಗಳು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಗುತ್ತವೆ. ಮೇಯರ್‌ಗೆ ಈ ವಿಷಯವಾಗಿ ಯಾವುದೇ ಮಾಹಿತಿ ಇಲ್ಲ’ ಎಂದು ಅವರು ಟೀಕಿಸಿದರು. ‘ಪಾಲಿಕೆಯ ಪ್ರಮುಖ ಹುದ್ದೆಗಳು ಖಾಲಿ ಇರುವುದರಿಂದ ಜನರ ಯಾವ ಕೆಲಸಗಳೂ ಆಗುತ್ತಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.