ಶುಲ್ಕ ನಿಗದಿಯ ಸುಳಿ

7
ಸಿಇಟಿ ಗೋಜಲು

ಶುಲ್ಕ ನಿಗದಿಯ ಸುಳಿ

Published:
Updated:

ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಸೀಟು ಹಂಚಿಕೆ ವಿಚಾರದಲ್ಲಿ ಸರ್ಕಾರ ಮತ್ತು ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ನಡುವೆ ಹಗ್ಗಜಗ್ಗಾಟ ಇಂದು ನಿನ್ನೆಯದಲ್ಲ. 2003ರಿಂದಲೂ ಇದು ನಡೆದುಕೊಂಡು ಬಂದಿದೆ. ಆದರೆ ಈ ಬಾರಿ, ‘ಕರ್ನಾಟಕ ವೃತ್ತಿ ಶಿಕ್ಷಣ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ– 2006’ ಅನುಷ್ಠಾನಕ್ಕೆ ತರಲು ಮುಂದಾದ ಸರ್ಕಾರ, ಸಾರ್ವಜನಿಕ ವಿರೋಧಕ್ಕೆ ಮಣಿದು ಅನುಷ್ಠಾನ ತಡೆಹಿಡಿಯಿತು. ಇದರಿಂದ ಅಸಮಾಧಾನಗೊಂಡಿರುವ ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘ (ಕುಪೆಕಾ), ಕಾಯ್ದೆಯ ಅನುಷ್ಠಾನಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಇತ್ತೀಚೆಗೆ ಪತ್ರ ಬರೆದಿದೆ.‘ಒಂದೇ ಕಾಲೇಜಿನಲ್ಲಿ ಎರಡು ಬಗೆಯ ಶುಲ್ಕ ಇರಬಾರದು. ಸರ್ಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಒಂದು ಶುಲ್ಕ, ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ನಡೆಸುವ ಪರೀಕ್ಷೆ ಮೂಲಕ ಪ್ರವೇಶ ಗಿಟ್ಟಿಸುವವರಿಗೆ ಇನ್ನೊಂದು ಶುಲ್ಕ ನಿಗದಿ ಮಾಡುವ ಪದ್ಧತಿ ಸರಿಯಲ್ಲ ಎಂದು ನ್ಯಾಯಾಲಯಗಳೂ ಹೇಳಿವೆ. ನಾವು ನಮ್ಮ ಅಷ್ಟೂ ಸೀಟುಗಳನ್ನು ಸರ್ಕಾರಕ್ಕೆ ನೀಡಲು ಸಿದ್ಧರಿದ್ದೇವೆ. ಆದರೆ ಶುಲ್ಕ ನಿಗದಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂಬುದು ನಮ್ಮ ಆಗ್ರಹ’ ಎಂದು ಕುಪೆಕಾ ಕಾರ್ಯದರ್ಶಿ ಎಂ.ಕೆ. ಪಾಂಡುರಂಗ ಶೆಟ್ಟಿ ‘ಪ್ರಜಾವಾಣಿ’ಗೆ ತಮ್ಮ ನಿಲುವು ವಿವರಿಸಿದರು.ಈ ಹೇಳಿಕೆ ನೀಡುವ ಸಂದರ್ಭದಲ್ಲಿ ಅವರು ದೆಹಲಿ ಹೈಕೋರ್ಟ್‌ ನೀಡಿರುವ ಒಂದು ಆದೇಶವನ್ನೂ ಉಲ್ಲೇಖಿಸಿದರು. ಎಜುಕೇಟ್‌ ಇಂಡಿಯಾ ಸೊಸೈಟಿ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ನಡುವಿನ ಪ್ರಕರಣದಲ್ಲಿ 2003ರಲ್ಲಿ ದೆಹಲಿ ಹೈಕೋರ್ಟ್‌, ‘ಎಲ್ಲಾ ಕಾಲೇಜುಗಳು ಏಕರೂಪದ ಶುಲ್ಕ ಸಂಗ್ರಹಿಸಬೇಕು ಎನ್ನುವುದು ಸರಿಯಲ್ಲ. ತಾವು ನಿರ್ಧರಿಸಿದ ಶುಲ್ಕವನ್ನು ಸಂಗ್ರಹಿಸಲು ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರ ಇದೆ. ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಶುಲ್ಕ ನಿಗದಿ ಸಮಿತಿಯು, ಶಿಕ್ಷಣ ಸಂಸ್ಥೆಗಳು ಸಂಗ್ರಹಿಸಬೇಕಾದ ಶುಲ್ಕ ಎಷ್ಟಿರಬೇಕು ಎಂಬುದನ್ನು ನಿರ್ಧರಿಸುವವರೆಗೆ ಈ ವ್ಯವಸ್ಥೆಯನ್ನು ಮುಂದುವರಿಸಬಹುದು ಎಂದು ಹೇಳಿದೆ’ ಎನ್ನುತ್ತಾರೆ.ಖಾಸಗಿ ವೃತ್ತಿ ಶಿಕ್ಷಣ ಕಾಲೇಜುಗಳು ವಿದ್ಯಾರ್ಥಿಗಳಿಂದ ಎಷ್ಟು ಶುಲ್ಕ ಸಂಗ್ರಹಿಸಬಹುದು? ವೈಜ್ಞಾನಿಕ ಶುಲ್ಕ ನಿಗದಿ ಎಂದರೇನು ಎಂಬ ಪ್ರಶ್ನೆಗಳಿಗೂ ಕುಪೆಕಾ ಬಳಿ ಸ್ಪಷ್ಟ ಉತ್ತರ ಇದೆ. ಇದಕ್ಕೆ 2005ರಲ್ಲಿ ಸುಪ್ರೀಂ ಕೋರ್ಟ್ (ಪಿ.ಎ. ಇನಾಂದಾರ್‌ ಪ್ರಕರಣ) ನೀಡಿದ್ದ ತೀರ್ಪೊಂದನ್ನು ಅವರು ಉಲ್ಲೇಖಿಸುತ್ತಾರೆ. ‘ಶುಲ್ಕ ನಿಗದಿಯು ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಹಕ್ಕು. ಶಿಕ್ಷಣ ಸಂಸ್ಥೆಗಳು ತಮ್ಮ ಭವಿಷ್ಯದ ಯೋಜನೆಗಳಿಗೆ ಬೇಕಿರುವ ಮೊತ್ತವನ್ನು ಶುಲ್ಕದ ಮೂಲಕ ಸಂಗ್ರಹಿಸಬಹುದು. ಆದರೆ ಅವು ಲಾಭಕೋರತನಕ್ಕೆ ಮುಂದಾಗುವಂತಿಲ್ಲ, ಕ್ಯಾಪಿಟೇಷನ್‌ ಶುಲ್ಕವನ್ನೂ ಸಂಗ್ರಹಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಾಗ ಸೀಟು ಹಂಚಿಕೆಗೆ ಒಪ್ಪಿಕೊಳ್ಳುವಂತೆ ಸರ್ಕಾರ ನಮ್ಮನ್ನು ಒತ್ತಾಯಿಸುವಂತಿಲ್ಲ’ ಎಂಬುದು ಕುಪೆಕಾ ವಾದ.ಅಷ್ಟೇ ಅಲ್ಲ, ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರದ ನಡುವೆ ನಡೆಯುತ್ತಿರುವ ಸೀಟು ಹಂಚಿಕೆ ತಾತ್ಕಾಲಿಕ ಕ್ರಮ ಮಾತ್ರ. ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಬೇರೆ ಬೇರೆ ಸಂಗತಿಗಳು. 2013–14ನೇ ಸಾಲಿನಲ್ಲಿ ಸರ್ಕಾರದ ಸಿಇಟಿ ಮೂಲಕ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆ­ಗಳಿಗೆ ಪ್ರವೇಶ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳಿಗೆ ನಿಗದಿ ಮಾಡಿ­ರುವ ಶುಲ್ಕ ತೀರಾ ಕಡಿಮೆ. ಈ ಶುಲ್ಕ ಪಡೆದು, ಉತ್ತಮ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟ. ಕಾಮೆಡ್‌–ಕೆ ನಡೆಸುವ ಪ್ರವೇಶ ಪರೀಕ್ಷೆ ಮೂಲಕ ವೃತ್ತಿ ಶಿಕ್ಷಣ ಸೇರುವ ವಿದ್ಯಾರ್ಥಿ­ಗಳಿಂದಲೇ ದೊಡ್ಡ ಮೊತ್ತದ ಶುಲ್ಕ ಸಂಗ್ರಹಿಸಬೇಕಿರುವ ಕಾರಣ, ಆ ಸೀಟುಗಳೂ ಭರ್ತಿಯಾಗದೆ ಉಳಿದುಕೊಳ್ಳು­ತ್ತಿವೆ. ಇದರಿಂದಾಗಿ ಖಾಸಗಿ ಕಾಲೇಜುಗಳಿಗೆ ಆರ್ಥಿಕವಾಗಿ ಕಷ್ಟವಾಗುತ್ತಿದೆ ಎಂದು ಕುಪೆಕಾ ಹೇಳಿದೆ. ಈ ಸಂಬಂಧ ಉನ್ನತ ಶಿಕ್ಷಣ ಸಚಿವರಿಗೆ ನಾಲ್ಕು ಪುಟಗಳ ಪತ್ರವನ್ನೂ ಬರೆದಿದೆ.2014–15ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ನಡೆಯುವ ಪ್ರವೇಶವನ್ನು ಕಾಯ್ದೆಯ ಆಶಯಗಳಿಗೆ ಅನುಗುಣವಾಗಿ ಮಾಡಲಾಗುವುದು ಎಂದು ಸರ್ಕಾರವೇ ವಿಧಾನ ಮಂಡಲದಲ್ಲಿ ಹೇಳಿತ್ತು. ಆದರೆ ಒತ್ತ­ಡಕ್ಕೆ ಮಣಿದ ಸರ್ಕಾರ ಈಗ ಹಿಂದೇಟು ಹಾಕು­ತ್ತಿದೆ. ಎಲ್ಲಾ ಕಾಲೇಜುಗಳಿಗೆ ಒಂದೇ ಮಾದರಿಯ ಶುಲ್ಕ ನಿಗದಿ ಮಾಡು­ವುದು ಸರಿಯಲ್ಲ. ಆಯಾ ಕಾಲೇಜುಗಳ ಖರ್ಚು-ವೆಚ್ಚಗಳನ್ನು ಪರಿಗಣಿಸಿಯೇ ಶುಲ್ಕ ನಿಗದಿಪಡಿಸ­ಬೇಕು. ಎರಡು ಬಗೆಯ ಶುಲ್ಕ ನಿಗದಿ ಮಾಡುವ ಸೀಟು ಹಂಚಿಕೆ ವ್ಯವಸ್ಥೆಗೆ ನಮ್ಮ ಸಹಮತವಿಲ್ಲ ಎಂಬುದು ಕುಪೆಕಾ ಸ್ಪಷ್ಟ ನುಡಿ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry