ಮಂಗಳವಾರ, ಏಪ್ರಿಲ್ 20, 2021
32 °C

ಶುಲ್ಕ ಮರುಪಾವತಿ ಯೋಜನೆ ಪರಿಷ್ಕರಣೆ

ಎ.ಎಂ.ಸುರೇಶ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಸುವ ಯೋಜನೆಯನ್ನು ಪುನಃ ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಸುಮಾರು 4.5 ಲಕ್ಷ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ, ಕಾಲೇಜು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಶುಲ್ಕ ಪಾವತಿಯಿಂದ ವಿನಾಯಿತಿ ಪಡೆಯಲಿದ್ದಾರೆ.ಹಿಂದುಳಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರುವ ವಿದ್ಯಾರ್ಥಿಗಳು ಪ್ರವೇಶ ಸಂದರ್ಭದಲ್ಲಿ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಅಂತಹ ವಿದ್ಯಾರ್ಥಿಗಳ ಶುಲ್ಕವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೇರವಾಗಿ ಸಂಬಂಧಪಟ್ಟ ಕಾಲೇಜು, ಶಿಕ್ಷಣ ಸಂಸ್ಥೆಗೆ ಪಾವತಿಸಲಿದೆ.

ಶುಲ್ಕ ಮರುಪಾವತಿ ಯೋಜನೆಯನ್ನು ಮಾರ್ಪಡಿಸಿ ಜೂನ್ 23ರಂದು ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ವಿದ್ಯಾರ್ಥಿ ಸಮೂಹ, ಪೋಷಕರು, ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬುಧವಾರ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಆ ಪ್ರಕಾರ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶುಲ್ಕ ವಿನಾಯಿತಿ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ.

ಪ್ರವರ್ಗ -2`ಎ~, 3`ಎ~ ಮತ್ತು 3`ಬಿ~ ಅಡಿಯಲ್ಲಿ ಬರುವ ವಿದ್ಯಾರ್ಥಿಗಳು ಮಾತ್ರ ಶುಲ್ಕ ವಿನಾಯಿತಿ ಪಡೆಯಲು ಅರ್ಹರು ಎಂಬ ಷರತ್ತನ್ನು ರದ್ದುಪಡಿಸಲಾಗಿದೆ. ಪರಿಷ್ಕೃತ ಆದೇಶದ ಪ್ರಕಾರ ಕುಟುಂಬದ ವಾರ್ಷಿಕ ಆದಾಯ 44,500 ರೂಪಾಯಿಗಿಂತ ಕಡಿಮೆ ಇರುವ ಎಲ್ಲ ಜಾತಿ, ಸಮುದಾಯದ ವಿದ್ಯಾರ್ಥಿಗಳು ಶುಲ್ಕ ವಿನಾಯಿತಿ ಪಡೆಯಲಿದ್ದಾರೆ.ಪ್ರವರ್ಗ-1ರ ಅಡಿಯಲ್ಲಿ ಬರುವ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಯ ಸೌಲಭ್ಯ ಪಡೆಯಲು ನಿಗದಿಪಡಿಸಿದ್ದ ತಂದೆ -ತಾಯಿ ಅಥವಾ ಪೋಷಕರ ವಾರ್ಷಿಕ ಆದಾಯದ ಮಿತಿಯನ್ನು ಒಂದರಿಂದ ಎರಡು ಲಕ್ಷ ರೂಪಾಯಿಗೆ ಏರಿಸಲಾಗಿದೆ. ಎರಡು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವುಳ್ಳ ಪೋಷಕರ ಮಕ್ಕಳು ಶುಲ್ಕ ವಿನಾಯತಿಗೆ ಅರ್ಹರಾಗಿರುತ್ತಾರೆ.ಪ್ರವರ್ಗ-1ರ ಅಡಿಯಲ್ಲಿ ಬರುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ, ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ, ಕ್ರೀಡಾ ಮತ್ತು ಗ್ರಂಥಾಲಯ ಶುಲ್ಕದಿಂದ ವಿನಾಯಿತಿ ಪಡೆಯಲಿದ್ದಾರೆ. ಇತರೆ ಸಮುದಾಯದ ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷಾ ಶುಲ್ಕ, ಬೋಧನಾ ಶುಲ್ಕ ಮತ್ತು ಪ್ರಯೋಗಾಲಯ ಶುಲ್ಕದಿಂದ ಮಾತ್ರ ವಿನಾಯಿತಿ ಸಿಗಲಿದೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಮಿತಿ ಪ್ರತಿ ವರ್ಷ ಜೂನ್ ತಿಂಗಳಲ್ಲಿ ವಿವಿಧ ಕೋರ್ಸ್‌ಗಳ ಶುಲ್ಕವನ್ನು ನಿಗದಿಪಡಿಸಲಿದೆ. ಸಮಿತಿ ನಿಗದಿಪಡಿಸುವ ದರದ ಪ್ರಕಾರ ಹಿಂದುಳಿದ ವರ್ಗಗಳ ಇಲಾಖೆಯಿಂದ ಶಾಲಾ - ಕಾಲೇಜುಗಳ ಬ್ಯಾಂಕ್ ಖಾತೆಗೆ ಶುಲ್ಕವನ್ನು ಜಮಾ ಮಾಡಲಾಗುತ್ತದೆ.ಶಿಕ್ಷಣ ಸಂಸ್ಥೆಗಳು ಈಗಾಗಲೇ ವಿದ್ಯಾರ್ಥಿಗಳಿಂದ ಶುಲ್ಕವನ್ನು ಪಡೆದಿದ್ದಲ್ಲಿ, ಚೆಕ್ ಮೂಲಕ ಸಂಬಂಧಪಟ್ಟ ವಿದ್ಯಾರ್ಥಿಗೆ ಹಿಂತಿರುಗಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಚೆಕ್ ಸಂಖ್ಯೆ ಮತ್ತು ಹಣ ಪಾವತಿಯ ವಿವರಗಳನ್ನು ಆಯಾ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಲಿಖಿತ ಮೂಲಕ ತಿಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಶುಲ್ಕ ವಿನಾಯಿತಿಗೆ ಅರ್ಹರಾಗಿರುತ್ತಾರೆ. ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ವೈದ್ಯಕೀಯ, ಎಂ.ಫಿಲ್, ಪಿ.ಎಚ್‌ಡಿ ಸೇರಿದಂತೆ ಪಿಯುಸಿಗೆ ಮೇಲ್ಪಟ್ಟ ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿನಾಯಿತಿ ಸೌಲಭ್ಯ ಪಡೆಯಲಿದ್ದಾರೆ.ಹಿಂದಿನ ವರ್ಷದ ಪಬ್ಲಿಕ್ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗದಿದ್ದರೆ, ಮುಂದಿನ ವರ್ಷದಲ್ಲಿ ಶುಲ್ಕ ಮರುಪಾವತಿಗೆ ಅರ್ಹರಾಗುವುದಿಲ್ಲ. ಆದರೆ, ಕ್ಯಾರಿಓವರ್ ಪದ್ಧತಿ ಜಾರಿಯಲ್ಲಿದ್ದು, ಮುಂದಿನ ತರಗತಿ/ಸೆಮಿಸ್ಟರ್‌ಗೆ ಪ್ರವೇಶ ಪಡೆದಿದ್ದರೆ ಅಂತಹವರು ಶುಲ್ಕ ಮರುಪಾವತಿಗೆ ಅರ್ಹರಾಗಿರುತ್ತಾರೆ.

ಪರಿಷ್ಕೃತ ಶುಲ್ಕ ವಿನಾಯಿತಿ ಆದೇಶದಿಂದಾಗಿ ಕೋರ್ಸ್ ಆಧಾರದ ಮೇಲೆ ಸುಮಾರು 600 ರೂಪಾಯಿಯಿಂದ 16 ಸಾವಿರ ರೂಪಾಯಿವರೆಗೆ ವಿನಾಯಿತಿ ಸಿಗಲಿದೆ.ಇನ್ನು ವೈದ್ಯಕೀಯ ವಿದ್ಯಾರ್ಥಿಗಳು, ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅನ್ವಯವಾಗುವಂತೆ ಸರ್ಕಾರ ನಿಗದಿ ಮಾಡಿರುವ ಬೋಧನೆ, ಪರೀಕ್ಷೆ ಮತ್ತು ಪ್ರಯೋಗಾಲಯ ಶುಲ್ಕದಿಂದ ವಿನಾಯಿತಿ ಪಡೆಯಲಿದ್ದಾರೆ.

`170 ಕೋಟಿ ರೂಪಾಯಿ ವೆಚ್ಚ~

ಶುಲ್ಕ ವಿನಾಯಿತಿ ಪಡೆಯುವ ವಿದ್ಯಾರ್ಥಿಗಳು ಮತ್ತು ಕೋರ್ಸ್‌ಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಸರ್ಕಾರದಿಂದ ಬರುವ ಅನುದಾನ ಸಾಕಾಗುತ್ತಿಲ್ಲ. ಹೀಗಾಗಿ ಪ್ರಸಕ್ತ ವರ್ಷ ಶುಲ್ಕ ಮರುಪಾವತಿ ನೀತಿಯಲ್ಲಿ ಬದಲಾವಣೆ ಮಾಡಲಾಗಿತ್ತು. ಆದರೆ, ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಪರಿಷ್ಕತ ಆದೇಶ ಹೊರಡಿಸಲಾಗಿದೆ. ಶುಲ್ಕ ಮರುಪಾವತಿಗಾಗಿ ಈ ವರ್ಷ ರೂ 170 ಕೋಟಿ  ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಒಪ್ಪಿದೆ.

- ಆರ್.ಶಾಂತರಾಜು (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.