ಮಂಗಳವಾರ, ಏಪ್ರಿಲ್ 13, 2021
29 °C

ಶೃಂಗಾರ ರಸ; ಕಥೆ ನೀರಸ

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ನಿರ್ಮಾಪಕರು: ಪೂಜಾ ಭಟ್, ಡಿನೋ ಮೊರಿಯಾ

ನಿರ್ದೇಶಕಿ: ಪೂಜಾ ಭಟ್

ತಾರಾಗಣ: ಸನ್ನಿ ಲಿಯೋನ್, ರಣದೀಪ್ ಹೂಡಾ, ಅರುಣೋದಯ ಸಿಂಗ್, ಆರಿಫ್ ಜಕಾರಿಯಾ, ಇಮ್ರಾನ್ ಜಾಹಿದ್.

ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಕಲೆ ಬಾಲಿವುಡ್ ಮಂದಿಗೆ ಕರಗತ. ಆದಿಯಿಂದ ಅಂತ್ಯದವರೆಗೂ ಹಿಡಿದಿಟ್ಟುಕೊಳ್ಳಬಲ್ಲ ಗಟ್ಟಿ ಕಥೆಯಿರಬೇಕು, ಇಲ್ಲವೇ ಹಸಿಬಿಸಿ ದೃಶ್ಯಗಳಿರಬೇಕು. ಪೂಜಾ ಭಟ್ ನಿರ್ದೇಶನ ಮತ್ತು ಸನ್ನಿ ಲಿಯೋನ್ ಎಂಬ ನೀಲಿ ಚಿತ್ರಗಳ ತಾರೆ, ಇಬ್ಬರ ಸಂಗಮ ಈ ಎರಡರ ರಸದೌತಣವನ್ನೂ ನೀಡುತ್ತದೆ ಎನ್ನುವ ನಿರೀಕ್ಷೆಯನ್ನು ಹುಸಿಗೊಳಿಸುತ್ತದೆ `ಜಿಸ್ಮ್ 2~ ಚಿತ್ರ.`ಜಿಸ್ಮ್ 2~ ಸದ್ದು ಮಾಡಿದ್ದು ಸನ್ನಿ ಲಿಯೋನ್ ತಮ್ಮ ನೀಲಿ ಚಿತ್ರಗಳಂತೆಯೇ ಇಲ್ಲಿಯೂ ಎಗ್ಗಿಲ್ಲದೆ ಪ್ರಣಯ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂಬ ಕಾರಣಕ್ಕೆ. ಶೀರ್ಷಿಕೆಗೆ ತಕ್ಕಂತೆ (ಜಿಸ್ಮ್- ದೇಹ) ಸನ್ನಿ ಲಿಯೋನ್ ದೇಹವನ್ನು ಮುಕ್ತವಾಗಿ ಗಾಳಿಗೊಡ್ಡಿದ್ದಾರೆ. ಮಾತ್ರವಲ್ಲ ನಟಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಅವರಿಗದು ಸಾಧನೆಯೇ ಸರಿ!

 

ಆದರೆ 2003ರಲ್ಲಿ ತೆರೆಕಂಡ `ಜಿಸ್ಮ್~ ಚಿತ್ರದ ಮುಂದುವರಿದ ಭಾಗವಿದು ಎಂದು ಊಹಿಸಿದರೆ ತಪ್ಪಾಗುತ್ತದೆ. ಆ ಚಿತ್ರದಲ್ಲಿದ್ದಂತೆ ಕೌತುಕಮಯ ಕಥೆಯಾಗಲಿ, ಹದವಾದ ನಿರೂಪಣೆಯಾಗಲಿ ಇಲ್ಲಿಲ್ಲ. ಇರುವುದು ಸನ್ನಿ ಲಿಯೋನ್ ಎಂಬ ದೇಹ ಪ್ರದರ್ಶಕಿ ಮಾತ್ರ. ನಿರ್ದೇಶಕಿ ಪೂಜಾ ಭಟ್‌ರ ಚಿತ್ರ ಪ್ರಚಾರದ ತಂತ್ರದ ವಸ್ತುವಾಗಿ ಸನ್ನಿ ಬಳಕೆಯಾಗಿದ್ದಾರಷ್ಟೆ.`ಮರ್ಡರ್~, `ಹೇಟ್ ಸ್ಟೋರಿ~ ಮುಂತಾದ ಚಿತ್ರಗಳನ್ನು ನೋಡಿ, ಸನ್ನಿ ಲಿಯೋನ್‌ರಿಂದ ಹೆಚ್ಚಿನದನ್ನು ನಿರೀಕ್ಷಿಸಿದವರಿಗೆ ರಸಭಂಗ ಖಚಿತ! ಹಿಂದಿ ಚಿತ್ರಗಳಲ್ಲಿ ಇಂಥ ಹಸಿಬಿಸಿ ದೃಶ್ಯಗಳು ಹೊಸತೇನಲ್ಲ. ಲವ್, ಸೆಕ್ಸ್, ಕ್ರೈಂ ಮತ್ತು ದೋಖಾ (ಮೋಸ) ಈ ನಾಲ್ಕು ಸೂತ್ರಗಳನ್ನಷ್ಟೆ ನೆಚ್ಚಿಕೊಂಡು ಕಥೆ ಹೆಣೆಯುವವರು ಅನುಸರಿಸುವ ಸಾದಾ ಮಾರ್ಗದಲ್ಲಿಯೇ ಪೂಜಾ ಭಟ್ ನಡೆದಿದ್ದಾರೆ. ರಸಭರಿತ ಸನ್ನಿವೇಶಗಳ ಜೊತೆಯಲ್ಲಿ ಕುತೂಹಲಕಾರಿ ಕಥಾಹಂದರವಿರಬಹುದೆಂಬ ಊಹೆ ತಲೆಕೆಳಗಾಗುತ್ತದೆ.ನಿಜ ಜೀವನದ ನೀಲಿಚಿತ್ರ ತಾರೆ ಸನ್ನಿ ಲಿಯೋನ್‌ಗೆ ಚಿತ್ರದಲ್ಲಿಯೂ ಅದೇ ಪಾತ್ರ. ಹಾಗೆಂದು ಆಕೆಯ ಆ ಬದುಕನ್ನು ಚಿತ್ರಿಸುವ ಸಾಹಸಕ್ಕೆ ಮುಂದಾಗದಿರುವುದು ಪುಣ್ಯ.ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಯ ಬಳಿ ಇರುವ ದಾಖಲೆಗಳನ್ನು ಪಡೆದುಕೊಳ್ಳಲು ಗುಪ್ತಚರ ಅಧಿಕಾರಿಗಳು ಆಕೆಯನ್ನು ಬಳಸಿಕೊಳ್ಳುತ್ತಾರೆ. ಆ ಪಾತಕಿ ಒಂದು ಕಾಲದಲ್ಲಿ ಆಕೆಯ ಪ್ರಿಯತಮನಾಗಿದ್ದವನು. ಮುಂದೆ ಒಂದಿಷ್ಟು ನಿರೀಕ್ಷಿತ ತಿರುವುಗಳು. ಸನ್ನಿ ಲಿಯೋನ್ ತಮ್ಮಿಂದ ಅಭಿನಯವೂ ಸಾಧ್ಯ ಎಂಬುದನ್ನು ಕೆಲವೆಡೆ ಸಾಬೀತು ಮಾಡಿದ್ದಾರೆ. ರಣದೀಪ್ ಹೂಡಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅರುಣೋದಯ ಸಿಂಗ್‌ರದು ನೀರಸ ನಟನೆ.ಮಹೇಶ್ ಭಟ್ ರಚಿಸಿದ ಕಥೆಯಲ್ಲಿರುವುದು ಹಳೆಪುರಾಣ. ಅದರಲ್ಲಿ ಕಸುವೂ ಇಲ್ಲ. ಚಿತ್ರಕಥೆಯ ಹೆಣಿಗೆ ಗಮನಸೆಳೆಯುತ್ತದೆ. ಅದನ್ನು ಅಷ್ಟೇ ಪ್ರಬಲವಾಗಿ ನಿರೂಪಿಸುವಲ್ಲಿ ಪೂಜಾ ಎಡವಿದ್ದಾರೆ. ನಾಲ್ಕು ಪಾತ್ರಗಳ ಮಧ್ಯೆಯೇ ಚಿತ್ರವನ್ನು ಕೇಂದ್ರೀಕರಿಸುವ ಪ್ರಯತ್ನ ಸಫಲವಾಗಿಲ್ಲ. ಚಿತ್ರದಲ್ಲಿ ಹೆಚ್ಚು ಗಮನ ಸೆಳೆಯವುದು ಎರಡು ಅಂಶಗಳು.ನಿಗಮ್ ಬೊಮ್ಜಾನ್‌ರ ಛಾಯಾಗ್ರಹಣ ಮತ್ತು ಅರ್ಕೊ ಮುಖರ್ಜಿ ಸಂಗೀತ. ಮಂದ ಬೆಳಕಿನ ಮೂಲಕ ಸನ್ನಿವೇಶಗಳಲ್ಲಿ ಗಾಢತೆ ತುಂಬಿದ್ದಾರೆ ನಿಗಮ್ ಬೊಮ್ಜಾನ್. ಅರ್ಕೊ ಮುಖರ್ಜಿ ಸಂಗೀತದಲ್ಲಿ ಮೆಲುಕು ಹಾಕುವ ಹಾಡುಗಳಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.