ಶೃಂಗೇರಿ-ಹಾಲಂದೂರು ರಸ್ತೆ ಅಧ್ವಾನ

7

ಶೃಂಗೇರಿ-ಹಾಲಂದೂರು ರಸ್ತೆ ಅಧ್ವಾನ

Published:
Updated:

ಶೃಂಗೇರಿ(ಕೊಪ್ಪ): ತಾಲ್ಲೂಕಿನ ಹಾಲಂದೂರು ಗ್ರಾಮಸ್ಥರು ಮರಳು ಗಣಿಗಾರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಕ್ಕೆ ಲಕ್ಷಾಂತರ ವರಮಾನ ತಂದುಕೊಟ್ಟ ಮರಳು ಗಣಿಗಾರಿಕೆ ಗ್ರಾಮಸ್ಥರಿಗೆ ಶಾಪವಾಗಿ ಪರಿಣಮಿಸಿದೆ. ತಾಲ್ಲೂಕಿನ ಮೆಣಸೆ ಗ್ರಾ.ಪಂ.ವ್ಯಾಪ್ತಿಯ ಹಾಲಂದೂರು ಪಕ್ಕದಲ್ಲಿ ಹರಿವ ತುಂಗಾ ನದಿ ಪಾತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಯಂತ್ರ ಬಳಸಿ ಮರಳು ತೆಗೆಯಲಾಗುತ್ತಿದ್ದು, ಇಡೀ ಗ್ರಾಮಕ್ಕೆ ಹಾನಿಕಾರಕವಾಗಿ ಪರಿಣಮಿಸಿದೆ. ಮೂರು ವರ್ಷದ ಹಿಂದೆ ನದಿ ಪಾತ್ರದಲ್ಲಿ ಸಂಗ್ರವಾಗುತ್ತಿದ್ದ ಮರಳನ್ನು ಸ್ಥಳೀಯ ಬಳಕೆಗೆ ತೆಗೆಯಲಾಗುತ್ತಿತ್ತು. 2009-10ನೇ ಸಾಲಿನಲ್ಲಿ ರೂ. 5.65ಲಕ್ಷಕ್ಕೆ ಮರಳು ಹರಾಜು ನಡೆದು ಸರ್ಕಾರ ಹಾಗೂ ಗ್ರಾ.ಪಂ.ಗೆ ನಿರೀಕ್ಷೆಗೆ ಮೀರಿದ ಆದಾಯ ಹರಿದು ಬಂತು. ಗಣಿಗುತ್ತಿಗೆ ಪಡೆದ ಹೊರ ಜಿಲ್ಲೆಯ ಗುತ್ತಿಗೆದಾರರು ಗ್ರಾಮದ ಹಿತಾಸಕ್ತಿ ಮರೆತು ಗಣಿಗಾರಿಕೆ ನಡೆಸಿದ ಪರಿಣಾಮ ಗ್ರಾಮಸ್ಥರು ಗ್ರಾಮದ ಸಂಪರ್ಕ ರಸ್ತೆಗಳನ್ನು ಕಳೆದುಕೊಳ್ಳಬೇಕಾಗಿ ಬಂದಿದೆ. ಕಾನೂನು ಬಾಹಿರವಾಗಿ ನದಿ ಪಾತ್ರದಲ್ಲಿ ಯಂತ್ರ ಬಳಸಿ ನದಿಯ ಒಡಲು ಬಗೆದು ಮರಳು ತೆಗೆದು ಸಾಗಿಸಲಾಯಿತು. ಇದರಿಂದ ನದಿಯ ಪಾತ್ರ ಬದಲಾಗಿ ಮಳೆಗಾಲದಲ್ಲಿ ನದಿಯ ಪ್ರವಾಹ ನಾಗಭೂಷಣ ಭಟ್, ಚಂದ್ರಶೇಖರ್, ರವಿ ಎಂಬವರ ಕೃಷಿ ಭೂಮಿಗಳಿಗೆ ಹಾನಿ ಮಾಡಿತು.ಮರಳು ಸಾಗಣೆ ವಾಹನಗಳ ವಿಪರೀತ ಸಂಚಾರದಿಂದ ಡಾಂಬರು ಸಂಪೂರ್ಣ ಕಿತ್ತು, ವರ್ಷದ ನಾಲ್ಕು ತಿಂಗಳು ಬಸ್ ಸೇರಿದಂತೆ ಇತರ ವಾಹನ ಸಂಚರಿಸದ ಸ್ಥಿತಿ ನಿರ್ಮಾಣವಾಯಿತು. ಹಾಲಂದೂರು ಪರಿಶಿಷ್ಟ ಕಾಲೊನಿಯ 20ಜನ ಹಂದಿಗೋಡು ಕಾಯಿಲೆ ಯಿಂದ ಅಂಗಹೀನರಾದವರು ಸಾರಿಗೆ ವ್ಯವಸ್ಥೆ ಯಿಲ್ಲದೆ ತೊಂದರೆಗೊಳಗಾದರು, ದಿನನಿತ್ಯ ಅಗತ್ಯ ವಸ್ತು ಖರೀದಿಗೆ 8 ಕಿ.ಮಿ.ದೂರದ ಪಟ್ಟಣಕ್ಕೆ ಗ್ರಾಮಸ್ಥರು ಬರಲು ಪಡಬಾರದ ಪಾಡುಪಡುವಂತಾಗಿದೆ. ಮರಳು ಗಣಿಗಾರಿಕೆ ಅವ್ಯಾಹತವಾಗಿದ್ದು ರಸ್ತೆ ದುರಸ್ತಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry