ಮಂಗಳವಾರ, ನವೆಂಬರ್ 12, 2019
28 °C
ಸಚಿವ ಆರ್.ಆರ್. ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲು

ಶೆಟ್ಟರ್ ಜೊತೆ ಚರ್ಚೆ: ಚವಾಣ್

Published:
Updated:

>ಮುಂಬೈ: ಗೃಹ ಸಚಿವ ಆರ್.ಆರ್. ಪಾಟೀಲ್ ವಿರುದ್ಧ ಕರ್ನಾಟಕ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನ್ನು ಕೈ ಬಿಡುವಂತೆ ಕರ್ನಾಟಕ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಲ್ಲಿ ಮನವಿ ಮಾಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಸೋಮವಾರ ವಿಧಾನಸಭೆಗೆ ತಿಳಿಸಿದರು.ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉತ್ತೇಜನಕಾರಿ ಭಾಷಣ ಮಾಡಿ ಎರಡು ಗುಂಪುಗಳ ನಡುವೆ ದ್ವೇಷ ಹರಡಲು ಯತ್ನಿಸಿದ ಆರೋಪದಲ್ಲಿ ಕರ್ನಾಟಕ ಪೊಲೀಸರು ಕಳೆದವಾರ ಆರ್.ಆರ್.ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಪಕ್ಷ ಭೇದ ಮರೆತು ಖಂಡಿಸಿದ ಮಹಾರಾಷ್ಟ್ರ ಶಾಸಕರು,  ಎರಡೂ ಸದನಗಳಲ್ಲಿ ಪ್ರತಿಭಟನೆ ನಡೆಸಿದರು.ಕರ್ನಾಟಕ ಸರ್ಕಾರದ ನಿರ್ಧಾರವನ್ನು ಖಂಡಿಸಿದ ಮಹಾರಾಷ್ಟ್ರ ಕಾರ್ಮಿಕ ಸಚಿವ ಹಸನ್ ಮುಷ್ರಿಫ್, ಈ ವಿಚಾರವಾಗಿ ನೆರೆ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಬೇಕು ಎಂದು ಚವಾಣ್ ಅವರನ್ನು ಒತ್ತಾಯಿಸಿದರು.ಒಂದು ವೇಳೆ ಶಾಸನ ಸಭೆ ಬಯಸಿದ್ದೇ ಆದರೆ ತಾವು ಕರ್ನಾಟಕದ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುವುದು ಮಾತ್ರವಲ್ಲ, ಗಡಿ ವಿವಾದವನ್ನು ಚರ್ಚಿಸುವುದಕ್ಕಾಗಿ ಮತ್ತೊಮ್ಮೆ ಸರ್ವ ಪಕ್ಷಗಳ ನಿಯೋಗವನ್ನು ನೆರೆ ರಾಜ್ಯಕ್ಕೆ ಕರೆದುಕೊಂಡು ಹೋಗಲು ಸಿದ್ಧವಿರುವುದಾಗಿ ಚವಾಣ್ ಹೇಳಿದರು.ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಮರಾಠಿ ದಿನಪತ್ರಿಕೆ `ತರುಣ್ ಭಾರತ್' ಸಂಪಾದಕ  ಕಿರಣ್ ಠಾಕೂರ್ ಅವರ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಟೀಲ್ ಉತ್ತೇಜನಾಕಾರಿ ಭಾಷಣ ಮಾಡಿದ್ದರು.ಸಭಾತ್ಯಾಗ : ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿವಾದಾತ್ಮಕ ಹೇಳಿಕೆ ನೀಡಿ ಕರಾಡ್‌ನಲ್ಲಿ `ಪಶ್ಚಾತ್ತಾಪದ ಉಪವಾಸ' ನಡೆಸಿದ ವಿಷಯ ಸೋಮವಾರ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪಗೊಂಡು ವಿರೋಧ ಪಕ್ಷದ ಸದಸ್ಯರು ಸಭೆಯಿಂದ ಹೊರನಡೆದ ಘಟನೆ ನಡೆಯಿತು.

ಪ್ರತಿಕ್ರಿಯಿಸಿ (+)