ಶೆಟ್ಟರ್ ನೇಮಕಕ್ಕೆ ಉತ್ಸುಕತೆ

7

ಶೆಟ್ಟರ್ ನೇಮಕಕ್ಕೆ ಉತ್ಸುಕತೆ

Published:
Updated:
ಶೆಟ್ಟರ್ ನೇಮಕಕ್ಕೆ ಉತ್ಸುಕತೆ

ನವದೆಹಲಿ:  ಮುಖ್ಯಮಂತ್ರಿ ಸದಾನಂದಗೌಡರ ಬದಲಾವಣೆ ಬಗ್ಗೆ ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಶೀಲಿಸುತ್ತಿದ್ದು, ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಬಹುಸಂಖ್ಯಾತ ವೀರಶೈವ ಸಮಾಜಕ್ಕೆ ಸೇರಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲು ಉತ್ಸಾಹ ತೋರುತ್ತಿದ್ದಾರೆ.

ಸದಾನಂದಗೌಡರ ಆಡಳಿತದ ಬಗ್ಗೆ ಬೆಟ್ಟು ಮಾಡುವಂತಿಲ್ಲದಿದ್ದರೂ ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ನಾಯಕತ್ವ ಬದಲಾವಣೆಗೆ ವರಿಷ್ಠರು ಚಿಂತನೆ ನಡೆಸುತ್ತಿದ್ದಾರೆಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ರಾಜ್ಯದಲ್ಲಿ ಬಿಜೆಪಿಗೆ ಲಿಂಗಾಯತ ಸಮುದಾಯದ ಬೆಂಬಲವಿರುವುದರಿಂದ ಅದೇ ಸಮಾಜದವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರೆ ಚುನಾವಣೆಯಲ್ಲಿ ಲಾಭವಾಗಲಿದೆ. ಈ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಸೂಕ್ತ ವ್ಯಕ್ತಿ. ಅಲ್ಲದೆ, ಅವರಿಗೆ ಯಡಿಯೂರಪ್ಪನವರ ಬೆಂಬಲವಿದೆ. ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಆಗಿ ನೇಮಿಸುವುದರಿಂದ ವೀರಶೈವ ಸಮಾಜದ ಮೇಲೆ ಪ್ರಾಬಲ್ಯ ಹೊಂದಿರುವ ಮಾಜಿ ಮುಖ್ಯಮಂತ್ರಿ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂಬ ಚಿಂತನೆ ವರಿಷ್ಠರಲ್ಲಿದೆ.

ಸದ್ಯದ ಸ್ಥಿತಿಯಲ್ಲಿ ಲಿಂಗಾಯತ ಸಮಾಜದ ವ್ಯಕ್ತಿಯನ್ನು ಹೊರತುಪಡಿಸಿ ಬೇರೆ ಯಾರನ್ನೂ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವ ಪರಿಸ್ಥಿತಿಯಲ್ಲಿ ಪಕ್ಷದ ನಾಯಕತ್ವವಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಒಳಗೊಂಡಂತೆ ಯಾರಿಗೂ ಶಾಸಕಾಂಗ ಪಕ್ಷದ ನಾಯಕತ್ವ ದಕ್ಕುವುದಿಲ್ಲ. ಆದರೂ ಯಾವ ಕಾರಣಕ್ಕೆ ಈಶ್ವರಪ್ಪ ಕಣಕ್ಕಿಳಿದಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಮೂಲಗಳು ಹೇಳಿವೆ.

ವರಿಷ್ಠರ ಆತಂಕ: ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ನೇಮಕಗೊಂಡ ಬಳಿಕ ಸದಾನಂದಗೌಡರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಖಾಲಿ ಮಾಡಿದರು. ಈ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಯಿತು. ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ತಮ್ಮ ಸ್ವಂತ ಕ್ಷೇತ್ರದಲ್ಲೇ ಮುಖ್ಯಮಂತ್ರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸದಿದ್ದ ಮೇಲೆ ರಾಜ್ಯದಲ್ಲಿ ಪಕ್ಷವನ್ನು ಹೇಗೆ ಅಧಿಕಾರಕ್ಕೆ ತರುತ್ತಾರೆಂಬ ಆತಂಕ ವರಿಷ್ಠರಿಗಿದೆ. ಈ ಕಾರಣಕ್ಕೆ ಅವರ ಬದಲಾವಣೆಗೆ ಚಿಂತನೆ ಆರಂಭವಾಗಿದೆ.

ಸದಾನಂದಗೌಡರ ಬದಲಾವಣೆಗೆ ಪಕ್ಷ ಮತ್ತು ಸರ್ಕಾರದೊಳಗೆ ವಿರೋಧವಿದೆ. ಸಚಿವ ಬಾಲಚಂದ್ರ ಜಾರಕಿಹೊಳಿ ಬಣ ಗೌಡರ ಬೆಂಬಲಕ್ಕೆ ನಿಂತಿದೆ. ಸರ್ಕಾರಕ್ಕೆ ಹಾನಿ ಆಗದಂತೆ ನಾಯಕನ ಬದಲಾವಣೆಗೆ ವರಿಷ್ಠರು ಮುಂದಾಗಿದ್ದಾರೆ. ಜಾರಕಿಹೊಳಿ ಬಣವನ್ನೂ ಮನವೊಲಿಸಲಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಗೌಡರನ್ನು ಕದಲಿಸಿದರೆ ಪಕ್ಷದೊಳಗೆ ಸ್ಥಾನಮಾನ ದೊರೆಯಲಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ನೇಮಕವಾಗುವ ಸಂಭವವಿದೆ. ಆದರೆ, ಇದು ಸದ್ಯಕ್ಕಲ್ಲ.

ರಾಜ್ಯದ ಉಸ್ತುವಾರಿ ಹೊತ್ತಿರುವ ಬಿಜೆಪಿ ಹಿರಿಯ ಮುಖಂಡ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಮುಖರ ಸಮಿತಿ ಸದಸ್ಯ ಸತೀಶ್ ಬೆಂಗಳೂರಿಗೆ ತೆರಳಿ ಪಕ್ಷದಲ್ಲಿನ ಬೆಳವಣಿಗೆ ಕುರಿತು ಅಧ್ಯಯನ ನಡೆಸಲಿದ್ದಾರೆ. ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಆನಂತರ ವರಿಷ್ಠರಿಗೆ ವರದಿ ಸಲ್ಲಿಸಲಿದ್ದಾರೆ. ಈ ವರದಿ ಆಧರಿಸಿ ಪಕ್ಷ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಆದರೆ, ರಾಷ್ಟ್ರಪತಿ ಚುನಾವಣೆ ಮುಗಿಯುವವರೆಗೂ ಯಾವುದೇ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry