ಶೆಟ್ಟರ್ ಸಂಪುಟಕ್ಕೆ ಇನ್ನಿಬ್ಬರ ವಿದಾಯ

7

ಶೆಟ್ಟರ್ ಸಂಪುಟಕ್ಕೆ ಇನ್ನಿಬ್ಬರ ವಿದಾಯ

Published:
Updated:
ಶೆಟ್ಟರ್ ಸಂಪುಟಕ್ಕೆ ಇನ್ನಿಬ್ಬರ ವಿದಾಯ

ಬೆಂಗಳೂರು: ನಿರೀಕ್ಷೆಯಂತೆ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಮತ್ತು ಸಣ್ಣ ಕೈಗಾರಿಕಾ ಸಚಿವ ರಾಜು ಗೌಡ ಅವರು ಸಚಿವ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದು, ರಾಜ್ಯಪಾಲರು ಅಂಗೀಕರಿಸಿದ್ದಾರೆ. ಇವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಶುಕ್ರವಾರ ರಾಜೀನಾಮೆ ನೀಡಲಿದ್ದಾರೆ.

ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಗೃಹ ಕಚೇರಿ `ಕೃಷ್ಣಾ'ದಲ್ಲಿ ಭೇಟಿ ಮಾಡಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು. ಇದಕ್ಕೂ ಮುನ್ನ ಯೋಗೇಶ್ವರ್ ತಮ್ಮ ನಿವಾಸದಲ್ಲಿ ರಾಜುಗೌಡ ಜತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ರಾಜೀನಾಮೆ ನೀಡದಂತೆ ಮನವೊಲಿಸುವ ಪ್ರಯತ್ನ ನಡೆಸಿದರು. ಇದಕ್ಕೆ ಅವರು ಒಪ್ಪದ ಕಾರಣ ರೇಣುಕಾಚಾರ್ಯ ಬರಿಗೈಲಿ ವಾಪಸಾದರು.

ರಾಜೀನಾಮೆ ಬಳಿಕ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಉದ್ದೇಶದಿಂದ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಭೇಟಿ ಮಾಡಲು ಮಡಿಕೇರಿಗೆ ತೆರಳಿದರು. ಮದ್ದೂರು ಸಮೀಪ ತೆರಳುತ್ತಿದ್ದಾಗ ಬೋಪಯ್ಯ ಅವರು ದೂರವಾಣಿ ಕರೆ ಮಾಡಿ, ಶುಕ್ರವಾರ ಬೆಳಿಗ್ಗೆ 11ಕ್ಕೆ ಬರುವಂತೆ ಸಲಹೆ ಮಾಡಿದರು. ಕೇರಳ ಪ್ರವಾಸದಲ್ಲಿ ಇರುವ ಕಾರಣ ಗುರುವಾರ ಸಿಗುವುದು ಕಷ್ಟ ಎಂದು ಹೇಳಿದರು ಎನ್ನಲಾಗಿದೆ.

ಶೆಟ್ಟರ್ ಸಂಪುಟದಲ್ಲಿ ಒಟ್ಟು ಐದು ಮಂದಿ ಸಚಿವರು ಇದುವರೆಗೂ ರಾಜೀನಾಮೆ ಕೊಟ್ಟಂತಾಗಿದೆ. ಕೆಜೆಪಿಯ ಹಾವೇರಿ ಸಮಾವೇಶದ ಸಂದರ್ಭದಲ್ಲಿ ಸುನೀಲ್ ವಲ್ಯಾಪುರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜನವರಿ ಅಂತ್ಯದಲ್ಲಿ ಸಿ.ಎಂ.ಉದಾಸಿ ಮತ್ತು ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಿದರು. ಈಗ ಕೊಟ್ಟಿರುವ ಇಬ್ಬರ ರಾಜೀನಾಮೆಯಿಂದ ಶೆಟ್ಟರ್ ಸಂಪುಟದ ಸಚಿವರ ಸಂಖ್ಯೆ 29ಕ್ಕೆ ಇಳಿದಿದೆ.

ಪಕ್ಷ ಯಾಕೆ ಕಟ್ಟಲಿಲ್ಲ?: `ನಮ್ಮ ಭಾಗದಲ್ಲಿ ಬಿಜೆಪಿ ಟಿಕೆಟ್ ಮೇಲೆ ಚುನಾವಣೆ ಎದುರಿಸುವುದು ಕಷ್ಟ. ಹೀಗಾಗಿ ಪಕ್ಷ ಬಿಡುವುದು ಅನಿವಾರ್ಯವಾಗಿದೆ' ಎಂದು ಯೋಗೇಶ್ವರ್ ಅವರು ಶೆಟ್ಟರ್ ಅವರಿಗೆ ವಿವರಿಸಿದರು ಎನ್ನಲಾಗಿದೆ.

`ಪಕ್ಷ ಕಟ್ಟಲಿ ಎನ್ನುವ ಕಾರಣಕ್ಕೇ ನಿಮ್ಮನ್ನು ಸಚಿವರನ್ನಾಗಿ ಮಾಡಿದ್ದು. ಸಚಿವರಿದ್ದಾಗ ಏಕೆ ಪಕ್ಷ ಕಟ್ಟಲಿಲ್ಲ? ಸಚಿವರಿದ್ದುಕೊಂಡೇ ಆ ಕೆಲಸ ಮಾಡಲಿಲ್ಲ ಅಂದರೆ ಹೇಗೆ' ಎಂದು ಶೆಟ್ಟರ್ ಪ್ರಶ್ನಿಸಿದರು ಎಂದು ತಿಳಿದುಬಂದಿದೆ.

`ನೀವು ಬಿಜೆಪಿಗೆ ಬಂದ ಕಾರಣಕ್ಕೆ ಸಚಿವರಾದಿರಿ. ಬಳಿಕ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನೂ ಮಂಜೂರು ಮಾಡಲಾಯಿತು. ನೀರಾವರಿ ಯೋಜನೆಗಳಿಗೂ ಹೆಚ್ಚು ಹಣ ಮಂಜೂರು ಮಾಡಲಾಗಿದೆ. ಎಲ್ಲ ಕೆಲಸ ಮಾಡಿಸಿಕೊಂಡ ನಂತರ ಹೀಗೆ ಹೋದರೆ ಹೇಗೆ' ಎಂದೂ ಶೆಟ್ಟರ್ ಕೇಳಿದರು ಎನ್ನಲಾಗಿದೆ.

`ನಮ್ಮ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಇದೆ. ಅದನ್ನು ಎದುರಿಸಲು ಕಾಂಗ್ರೆಸ್ ಸೇರುವುದು ಅನಿವಾರ್ಯ' ಎಂದು ಯೋಗೇಶ್ವರ್ ಸಮಜಾಯಿಷಿ ನೀಡಿದರು ಎಂದು ಗೊತ್ತಾಗಿದೆ.

ಭ್ರಮನಿರಸನ: `ಬಿಜೆಪಿಯ ತತ್ವ- ಆದರ್ಶ ನಂಬಿ ಆ ಪಕ್ಷ  ಸೇರಿದೆ.  ಒಳಹೊಕ್ಕ ನಂತರ ಭ್ರಮನಿರಸನ ಆಯಿತು' ಎಂದು ಯೋಗೇಶ್ವರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು.

`ಪಕ್ಷ ಕಟ್ಟಿದ ಯಡಿಯೂರಪ್ಪ ಅವರೇ ಇವತ್ತು ಅಲ್ಲಿ ಇಲ್ಲ. ಅವರ ಬಳಿಕ ಮುಖ್ಯಮಂತ್ರಿಯಾದ ಸದಾನಂದ ಗೌಡರನ್ನೂ ಪಕ್ಷ ಉಳಿಸಲಿಲ್ಲ. ಈಗ ಶೆಟ್ಟರ್ ಇದ್ದಾರೆ.  ಮೂವರು ಮುಖ್ಯಮಂತ್ರಿಗಳನ್ನು ನೋಡಿದ ಪಕ್ಷದಲ್ಲಿ ಎಲ್ಲವೂ ನಿರೀಕ್ಷೆಯಂತೆ ನಡೆಯಲಿಲ್ಲ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಬಲ ಇಲ್ಲ. ಹೀಗಾಗಿ ಬಿಜೆಪಿ ಬಿಡುವುದು ಅನಿವಾರ್ಯ' ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದರು.

`ಬೆಳೆ ಹುಲುಸಾಗಿರಬೇಕು'

`ಬೆಳೆ ಎಲ್ಲಿ ಚೆನ್ನಾಗಿ ಇರುತ್ತದೋ ಅಲ್ಲಿ ಕೊಯಿಲು ಮಾಡಬೇಕಾಗುತ್ತದೆ. ಅಧಿಕಾರಕ್ಕಾಗಿ ಪಕ್ಷ ಬಿಡುತ್ತಿದ್ದಾರೆ, ಅವಕಾಶವಾದಿ ರಾಜಕಾರಣಿ... ಹೀಗೆ ಏನೇ ಅಂದರೂ ಬೇಸರ ಇಲ್ಲ. ನಮ್ಮ ಕ್ಷೇತ್ರದ (ಚನ್ನಪಟ್ಟಣ) ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ತೀರ್ಮಾನ ತೆಗೆದುಕೊಂಡಿದ್ದೇನೆ. ಯಾವ ಪಕ್ಷ ಸೇರಬೇಕು ಎಂಬುದನ್ನು ನಂತರ ತೀರ್ಮಾನಿಸುತ್ತೇನೆ'

- ಸಿ.ಪಿ. ಯೋಗೇಶ್ವರ್`ಬಿಜೆಪಿಯಲ್ಲಿ ಪರಿಶಿಷ್ಟರಿಗೆ ಬೆಲೆಯಿಲ್ಲ'

`ಕೆಲವು ವಿಚಾರಗಳಿಂದ ನನಗೆ ನೋವಾದ ಕಾರಣ ಪಕ್ಷ ತ್ಯಜಿಸಲು ತೀರ್ಮಾನಿಸಿದ್ದೇನೆ. ವೈಯಕ್ತಿಕವಾಗಿ ನನಗೆ ಯಾರ ಮೇಲೂ ಬೇಸರ ಇಲ್ಲ' ಎಂದು ಸುರಪುರ ಕ್ಷೇತ್ರದ ರಾಜು ಗೌಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

`ಬಿಜೆಪಿಯಲ್ಲಿ ನನಗೆ ಅವಕಾಶ ಸಿಕ್ಕಿದ್ದು ನಿಜ. ಆದರೆ, ಒಬ್ಬ ಸಚಿವನಾಗಿ ನಿರೀಕ್ಷೆ ಪ್ರಕಾರ ಕೆಲಸ ಮಾಡಲು ಆಗಲಿಲ್ಲ. ಬಿಜೆಪಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮನ್ನಣೆ ಇಲ್ಲ. ಗೋವಿಂದ ಕಾರಜೋಳ ಅವರಿಗೆ ಒಳ್ಳೆ ಖಾತೆ ನೀಡಲಿಲ್ಲ. ಮೂವರು ಮುಖ್ಯಮಂತ್ರಿಗಳೂ ನನಗೆ ಪೂರ್ಣ ಸಹಕಾರ ನೀಡಿದರು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry