ಶೆಟ್ಟರ್ ಸಂಪುಟ ಪೂರ್ಣ

ಬುಧವಾರ, ಜೂಲೈ 17, 2019
25 °C

ಶೆಟ್ಟರ್ ಸಂಪುಟ ಪೂರ್ಣ

Published:
Updated:
ಬೆಂಗಳೂರು: ಬಿಜೆಪಿ ಸರ್ಕಾರದ ಮೂರನೇ ಮುಖ್ಯಮಂತ್ರಿಯಾಗಿ ಜಗದೀಶ ಶೆಟ್ಟರ್ ಅವರು ಪೂರ್ಣ ಪ್ರಮಾಣದ ಸಂಪುಟದೊಂದಿಗೆ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯದ ಒಂಬತ್ತು ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ. ಅಲ್ಪಸಂಖ್ಯಾತರಿಗೆ ಅವಕಾಶವೇ ಇಲ್ಲ. ಸಂಪುಟ ರಚನೆಗೆ ಸಂಬಂಧಿಸಿದಂತೆ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಖಾತೆ ಹಂಚಿಕೆಯೂ ಕಗ್ಗಂಟಾಗಿದೆ.ರಾಜಭವನದ ಗಾಜಿನಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳಾಗಿ ಕೆ.ಎಸ್.ಈಶ್ವರಪ್ಪ ಮತು ಆರ್.ಅಶೋಕ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸೇರಿದಂತೆ 34 ಮಂದಿಗೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಪ್ರಮಾಣವಚನ ಬೋಧಿಸಿದರು. ಸಂಪುಟದಲ್ಲಿ ಹಿಂದಿನಂತೆ ಒಬ್ಬರೇ ಮಹಿಳೆಗೆ ಅವಕಾಶ ದೊರೆತಿದೆ. ಮೊದಲ ಬಾರಿಗೆ ಎರಡು ಉಪ ಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾಗಿವೆ.ವಿಧಾನಸಭೆಯಲ್ಲಿ `ಬ್ಲೂ ಫಿಲಂ~ ವೀಕ್ಷಣೆ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿದ್ದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಮತ್ತು ಜೆ.ಕೃಷ್ಣ ಪಾಲೆಮಾರ್ ಸಂಪುಟ ಸೇರಲು ಕಸರತ್ತು ನಡೆಸಿದ್ದರು. ಆದರೆ, ಅವರ ಕನಸು ಈಡೇರಿಲ್ಲ. ಮೂವರಿಗೂ ಅವಕಾಶ ನಿರಾಕರಿಸಲಾಗಿದೆ. ಇದರಿಂದ ಅವರು ಅಸಮಾಧಾನಗೊಂಡಿದ್ದಾರೆ. ಸಚಿವ ಸ್ಥಾನ ದೊರೆತಿಲ್ಲ ಎಂದು ಮೂಡಿಗೆರೆಯ ಎಂ.ಪಿ.ಕುಮಾರಸ್ವಾಮಿ, ಕೊಳ್ಳೇಗಾಲದ ಜಿ.ಎನ್.ನಂಜುಂಡಸ್ವಾಮಿ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತಿತರರು ಬಹಿರಂಗವಾಗಿಯೇ ಅತೃಪ್ತಿ ತೋಡಿಕೊಂಡಿದ್ದಾರೆ. ಕುಮಾರಸ್ವಾಮಿ ವಿಧಾನಸೌಧ ಆವರಣದಲ್ಲಿನ ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಸಾಂಕೇತಿಕವಾಗಿ ಧರಣಿ ನಡೆಸಿದರು.

`ಜಗದೀಶ ಶೆಟ್ಟರ್ ಎಂಬ ಹೆಸರಿನವನಾದ ನಾನು...~: ರಾಜಭವನದ ಗಾಜಿನ ಮನೆಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ರಾಜ್ಯದ 21ನೆಯ ಮುಖ್ಯಮಂತ್ರಿಯಾಗಿ ಜಗದೀಶ ಶೆಟ್ಟರ್ ಅವರು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು  -ಪ್ರಜಾವಾಣಿ ಚಿತ್ರ
ದೇವರ ಹೆಸರಲ್ಲಿ ಪ್ರಮಾಣ

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮೊದಲಿಗರಾಗಿ `ದೇವರ~ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಈಶ್ವರಪ್ಪ ಮತ್ತು ಅಶೋಕ ಕೂಡ `ದೇವರ~ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಂತರ ತಲಾ ಆರು ಸದಸ್ಯರ ನಾಲ್ಕು ತಂಡ ಮತ್ತು ಏಳು ಸದಸ್ಯರ ಒಂದು ತಂಡಕ್ಕೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.ಮಧ್ಯಾಹ್ನ 12ಕ್ಕೆ ಆರಂಭವಾದ ಸಮಾರಂಭಕ್ಕೆ 12.30ರ ವೇಳೆಗೆ ತೆರೆಬಿತ್ತು. ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮತ್ತಿತರ ಗಣ್ಯರು ನೂತನ ಸಚಿವ ಸಂಪುಟದ ಸದಸ್ಯರ ಪ್ರಮಾಣ ವಚನಕ್ಕೆ ಸಾಕ್ಷಿಯಾದರು.ಪ್ರಾತಿನಿಧ್ಯ ದೊರೆಯದ ಜಿಲ್ಲೆಗಳು

ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೀದರ್, ಕೊಪ್ಪಳ, ರಾಯಚೂರು, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ ಮತ್ತು ಮಂಡ್ಯ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನಿರ್ಗಮಿತ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಬಣಗಳ ನಡುವೆ ಸಚಿವ ಸ್ಥಾನ ಹಂಚಿಕೆ ವಿವಾದ ಇತ್ಯರ್ಥಕ್ಕೆ ದೆಹಲಿಯಲ್ಲಿ ಬುಧವಾರ ರಾತ್ರಿ ಆರಂಭವಾದ ಕಸರತ್ತಿಗೆ ಗುರುವಾರ ನಸುಕಿನಲ್ಲಿ ತೆರೆಬಿತ್ತು. ಬಳಿಕ ಸಚಿವರ ಪಟ್ಟಿಯೊಂದಿಗೆ ಬೆಳಿಗ್ಗೆ ಶೆಟ್ಟರ್ ಹಿಂದಿರುಗಿದರು. ಸಚಿವರ ಪಟ್ಟಿ ಹೊರಬೀಳುತ್ತಿದ್ದಂತೆ ಮತ್ತೊಂದು ಸುತ್ತಿನ ಅಸಮಾಧಾನದ ಕಿಡಿ ಹೊತ್ತಿಕೊಂಡಿತು.ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಕರಾವಳಿ ಜಿಲ್ಲೆಗಳ ಶಾಸಕರು ಸಿಟ್ಟಿಗೆದ್ದಿದ್ದಾರೆ. ಸ್ಥಾನ ನೀಡದಿರುವುದನ್ನು ಪ್ರತಿಭಟಿಸಿ ರಾಜೀನಾಮೆ ಸಲ್ಲಿಸಲು ಶ್ರೀನಿವಾಸ ಶೆಟ್ಟಿ ಮುಂದಾಗಿದ್ದಾರೆ. ಇನ್ನೊಂದೆಡೆ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿ ಪಕ್ಷದಿಂದಲೇ ಅಮಾನತುಗೊಂಡಿದ್ದ ಬಿ.ಜೆ.ಪುಟ್ಟಸ್ವಾಮಿ ಅವರಿಗೆ ವಿಧಾನ ಪರಿಷತ್‌ನಲ್ಲಿ ಸ್ಥಾನ ಕಲ್ಪಿಸುವುದರೊಂದಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಯಡಿಯೂರಪ್ಪ ಅವರ ಬೆಂಬಲಿಗ ಶಾಸಕರೇ ಅಸಮಾಧಾನ ಹೊರಹಾಕಿದ್ದಾರೆ.ಖಾತೆ ಹಂಚಿಕೆ ವಿಳಂಬ: ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬಂದಿದ್ದರೂ ಖಾತೆ ಹಂಚಿಕೆ ಕುರಿತು ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಶುಕ್ರವಾರ ಅಥವಾ ಶನಿವಾರ ಎಲ್ಲ ಸಚಿವರಿಗೂ ಖಾತೆಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಸದಾನಂದ ಗೌಡರ ಸಂಪುಟದಲ್ಲಿದ್ದು, ಈಗಲೂ ಸಚಿವರಾಗಿರುವವರ ಖಾತೆಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಮುಖ್ಯಮಂತ್ರಿಯವರ ಬಳಿ 21 ಖಾತೆಗಳಿವೆ. ಅವುಗಳನ್ನು ಹೊಸ ಸಚಿವರಿಗೆ ಹಂಚಿಕೆ ಮಾಡಲು ಯೋಚಿಸಲಾಗಿದೆ. ಕೆಲವು ಸಚಿವರ ಬಳಿ ಹೆಚ್ಚುವರಿ ಖಾತೆಗಳಿವೆ. ಅವುಗಳನ್ನೂ ಹಿಂದಕ್ಕೆ ಪಡೆದು ಹಂಚಿಕೆ ಮಾಡಲಾಗುತ್ತದೆ. ಈಶ್ವರಪ್ಪ ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಹಣಕಾಸು ಖಾತೆಯನ್ನು ಮುಖ್ಯಮಂತ್ರಿಯವರು ತಮ್ಮ ಬಳಿಯೇ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.ಪೂರ್ಣ ಪ್ರಮಾಣದ ಸಂಪುಟ: 2008ರ ಚುನಾವಣೆಯಲ್ಲಿ ಅಧಿಕಾರ ಹಿಡಿದ ಬಿಜೆಪಿ ಮೂರನೇ ಮುಖ್ಯಮಂತ್ರಿಗೆ ಅಧಿಕಾರದ ಚುಕ್ಕಾಣಿ ನೀಡಿದೆ. ಈ ಅವಧಿಯಲ್ಲಿ ಎರಡನೇ ಬಾರಿಗೆ ಸಚಿವ ಸಂಪುಟದ ಎಲ್ಲ ಸ್ಥಾನಗಳನ್ನೂ ಭರ್ತಿ ಮಾಡಲಾಗಿದೆ. ಮೊದಲ ಬಾರಿಗೆ ಸರ್ಕಾರ ರಚಿಸಿದಾಗ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬಂದಿತ್ತು.ನಂತರ ಕೆಲ ಸ್ಥಾನಗಳನ್ನು ಖಾಲಿ ಉಳಿಸಿಕೊಂಡು ಬರಲಾಗಿತ್ತು. ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಸ್ಥಾನಗಳು ನಿರಂತರವಾಗಿ ಖಾಲಿ ಇದ್ದವು. ಈ ಬಾರಿ ಕೂಡ 32 ಸ್ಥಾನಗಳನ್ನಷ್ಟೇ ತುಂಬಲು ಬಿಜೆಪಿ ಮುಖಂಡರು ನಿರ್ಧರಿಸಿದ್ದರು. ಆದರೆ, ಬೆಳಿಗ್ಗೆ ನಡೆದ ಕೆಲವು ರಾಜಕೀಯ ಬೆಳವಣಿಗೆಗಳ ಕಾರಣದಿಂದ ಉಳಿದ ಎರಡು ಸ್ಥಾನಗಳನ್ನೂ ತುಂಬಲು ತುರ್ತು ನಿರ್ಧಾರ ಕೈಗೊಳ್ಳಲಾಯಿತು.ಇದರಿಂದ ಏಕಕಾಲಕ್ಕೆ 34 ಸದಸ್ಯರ ಪ್ರಮಾಣವಚನ ನಡೆಯಿತು. ಸದಾನಂದ ಗೌಡರ ಸಂಪುಟದಲ್ಲಿದ್ದ ಎಲ್ಲ 21 ಸಚಿವರು ಪುನಃ ಸ್ಥಾನ ಪಡೆದಿದ್ದಾರೆ.ಎಂಟು ಮಂದಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಬಳ್ಳಾರಿಯ ಜಿ.ಕರುಣಾಕರ ರೆಡ್ಡಿ ಅವರಿಗೆ ಸಚಿವ ಸ್ಥಾನ ದೊರೆಯಬಹುದು ಎಂಬ ಅವರ ಬೆಂಬಲಿಗರ ನಿರೀಕ್ಷೆ ಹುಸಿಯಾಗಿದೆ. ರೆಡ್ಡಿ ಸಹೋದರರ ಪ್ರತಿಸ್ಪರ್ಧಿ ಎಂದು ಬಿಂಬಿತರಾಗಿರುವ ಆನಂದ್ ಸಿಂಗ್ ಸಂಪುಟ ಸೇರಿದ್ದಾರೆ.ಲಿಂಗಾಯತರ ಮೇಲುಗೈ: ಶೆಟ್ಟರ್ ಸಂಪುಟದಲ್ಲಿ ಅವರೂ ಸೇರಿದಂತೆ 11 ಮಂದಿ ಲಿಂಗಾಯತ ಸಮುದಾಯದವರಿದ್ದಾರೆ. ಉಪ ಮುಖ್ಯಮಂತ್ರಿ ಆರ್.ಅಶೋಕ ಸೇರಿದಂತೆ ಆರು ಮಂದಿ ಒಕ್ಕಲಿಗರು ಸಂಪುಟದಲ್ಲಿದ್ದಾರೆ. ಪರಿಶಿಷ್ಟ ಜಾತಿಯ ಐವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಯಡಿಯೂರಪ್ಪ ಸಂಪುಟದಲ್ಲಿದ್ದು, ಮಧ್ಯದಲ್ಲಿ ಕೈಬಿಟ್ಟಿದ್ದ ಅರವಿಂದ ಲಿಂಬಾವಳಿ, ಎಸ್.ಕೆ. ಬೆಳ್ಳುಬ್ಬಿ ಮತ್ತೆ ಸಂಪುಟ ಸೇರಿದ್ದಾರೆ. ಹಿಂದುಳಿದ ವರ್ಗವನ್ನು ಪ್ರತಿನಿಧಿಸುವ ಸಚಿವರ ಸಂಖ್ಯೆ ಎರಡರಿಂದ ಏಳಕ್ಕೇರಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನಿಭಾಯಿಸಲು ಸಂಪುಟದಿಂದ ನಿರ್ಗಮಿಸಿದ್ದ ಈಶ್ವರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ದೊರೆತಿದೆ.21 ಜಿಲ್ಲೆಗಳಿಗೆ ಪ್ರಾತಿನಿಧ್ಯ: ಶೆಟ್ಟರ್ ಸಂಪುಟದಲ್ಲಿ 21 ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿದೆ. ಬೆಂಗಳೂರನ್ನು ಪ್ರತಿನಿಧಿಸುವ ಐವರು ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರಿಗೆ ಅವಕಾಶ ದೊರೆತಿದೆ. ಉತ್ತರ ಕನ್ನಡ, ಚಿಕ್ಕಮಗಳೂರು, ಹಾವೇರಿ, ಬಾಗಲಕೋಟೆ, ದಾವಣಗೆರೆ, ಬೆಳಗಾವಿ ಮತ್ತು ಗುಲ್ಬರ್ಗ ಜಿಲ್ಲೆಗಳ ಇಬ್ಬರು ಸಚಿವರಾಗಿದ್ದಾರೆ.ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಶಿವಮೊಗ್ಗ, ಮೈಸೂರು, ಗದಗ, ಬಳ್ಳಾರಿ, ಉಡುಪಿ, ಕೊಡಗು, ಕೋಲಾರ, ವಿಜಾಪುರ ಮತ್ತು ಯಾದಗಿರಿ ಜಿಲ್ಲೆಗಳ ತಲಾ ಒಬ್ಬರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry