ಶೆಟ್ಟರ್ ಸೇರಿ ಏಳು ಮಂದಿ ವಿರುದ್ಧ ನ್ಯಾಯಾಂಗ ನಿಂದನೆ

7

ಶೆಟ್ಟರ್ ಸೇರಿ ಏಳು ಮಂದಿ ವಿರುದ್ಧ ನ್ಯಾಯಾಂಗ ನಿಂದನೆ

Published:
Updated:

ನವದೆಹಲಿ: ಕಾವೇರಿ ನೀರು ಬಿಡುಗಡೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಮತ್ತು ನಾಲ್ವರು ಅಧಿಕಾರಿಗಳ ಮೇಲೆ `ನ್ಯಾಯಾಂಗ ನಿಂದನೆ ಪ್ರಕ್ರಿಯೆ~ ಆರಂಭಿಸಲು ತಮಿಳುನಾಡು ಬುಧವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.`ಕಾವೇರಿ ನದಿಯಿಂದ ನಿತ್ಯ 9000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂಬ ಆದೇಶವನ್ನು ಕರ್ನಾಟಕ ಧಿಕ್ಕರಿಸಿದೆ~ ಎಂದು ಅದು ಆರೋಪ ಮಾಡಿದ್ದು, ಸಿಎಂ ಮತ್ತಿತರರು ಕಾನೂನು ಹಾಗೂ ಸಂವಿಧಾನ ಮೀರಿ ನಡೆದುಕೊಂಡಿದ್ದಾರೆ ಎಂದು ದೂರಿದೆ.ಸೆ. 20ರಿಂದ ಅ.15ರ ವರೆಗೆ ನಿತ್ಯ 9000 ಕ್ಯೂಸೆಕ್ ನೀರು ಬಿಡಲು ಪ್ರಧಾನಿ ನೇತೃತ್ವದ `ಕಾವೇರಿ ನದಿ ಪ್ರಾಧಿಕಾರ~ (ಸಿಆರ್‌ಎ) ಸೆ. 19ರಂದು ನೀಡಿದ್ದ ನಿರ್ದೇಶನ ಪಾಲಿಸುವಂತೆ ಸುಪ್ರೀಂ ಕೋರ್ಟ್ ಸೆ. 28ರಂದು ಆದೇಶಿಸಿತ್ತು. ಆದರೆ ಇದನ್ನು ಕರ್ನಾಟಕ ಉದ್ದೇಶಪೂರ್ವಕವಾಗಿ ಕಡೆಗಣಿಸಿದೆ. ಅತ್ಯುನ್ನತ ನ್ಯಾಯಾಲದ ಆದೇಶಕ್ಕೆ ಬೆಲೆ ಕೊಡದೆ  ಅ.8ರಂದೇ ಜಲಾಶಯಗಳ ಗೇಟ್ ಬಂದ್ ಮಾಡಲಾಗಿದೆ ಎಂದು ನ್ಯಾಯಾಲಯ ನಿಂದನೆ ಅರ್ಜಿಯಲ್ಲಿ ಆರೋಪಿಸಲಾಗಿದೆ.ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಜಲ ಸಂಪನ್ಮೂಲ ಕಾರ್ಯದರ್ಶಿ ಡಿ.ಸತ್ಯಮೂರ್ತಿ, ಜಲ ಸಂಪನ್ಮೂಲ ಅಭಿವೃದ್ಧಿ ಸಂಘಟನೆ ಮುಖ್ಯ ಎಂಜಿನಿಯರ್ ಬಂಗಾರುಸ್ವಾಮಿ, ಕೆಆರ್‌ಎಸ್ ಅಣೆಕಟ್ಟೆ ಸುಪರಿಂಟೆಂಡಿಂಗ್ ಎಂಜಿನಿಯರ್ ಶಂಕರಗೌಡ, ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ವಿಜಯ ಕುಮಾರ್ ಅವರ ಮೇಲೆ ನ್ಯಾಯಾಲಯ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದು ತಮಿಳುನಾಡು ಮನವಿ ಮಾಡಿದೆ.`ಕರ್ನಾಟಕ ಕಾವೇರಿ ಕೊಳ್ಳದ ಜಲಾಶಯಗಳನ್ನು ಮುಚ್ಚುವ ಮೂಲಕ ದೇಶದ ಅತ್ಯುನ್ನತ ನ್ಯಾಯಾಲಯದ ಘನತೆ- ಗೌರವ ಕುಂದು ತಂದಿದೆ. ಸಂವಿಧಾನ ಹಾಗೂ ಕಾನೂನು ವ್ಯಾಪ್ತಿ ಮೀರಿ ನಡೆದುಕೊಂಡಿದೆ. ಇಂಥ ನಡವಳಿಕೆ ಅರಾಜಕತೆಗೆ ಕಾರಣವಾಗಲಿದೆ. ಒಕ್ಕೂಟ ವ್ಯವಸ್ಥೆ ಹಾಳುಮಾಡಲಿದೆ~ ಎಂದು ಹದಿನೇಳು ಪುಟಗಳ ಅರ್ಜಿಯಲ್ಲಿ ಆರೋಪ ಮಾಡಲಾಗಿದೆ.`ಆದರೆ ತಮಿಳುನಾಡು ಮಾತ್ರ ತನ್ನ ರೈತರಿಗೆ ಎಷ್ಟೇ ಕಷ್ಟವಾಗಿದ್ದರೂ ಸಂವಿಧಾನ ಮತ್ತು ಕಾನೂನು ಇತಿಮಿತಿ ಮೀರಿಲ್ಲ. ಜನರ ಭಾವನೆಗಳನ್ನು ಪ್ರಚೋದಿಸುವ ಕೆಲಸಕ್ಕೆ ಕೈಹಾಕಿಲ್ಲ~ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ಅ. 4ರಂದು ಸಲ್ಲಿಸಿದ ಅರ್ಜಿಯಲ್ಲಿ ಸೆ. 28ರ ಆದೇಶಕ್ಕೆ ತಡೆ ನೀಡಬೇಕು ಇಲ್ಲವೆ ಮಾರ್ಪಾಡು ಮಾಡಬೇಕೆಂದು ಮನವಿ ಮಾಡಿತ್ತು. ಅರ್ಜಿ ಅ.8 ರಂದು ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಾಗ ಪ್ರಕರಣವನ್ನು ಅ. 12ರವರೆಗೆ ಮುಂದೂಡಬೇಕೆಂದು ಮನವಿ ಮಾಡಿತು. ಉದ್ದೇಶಪೂರ್ವಕವಾಗಿಯೇ ಹಿಂದಿನ ಆದೇಶದ ತಡೆ ಅಥವಾ ಮಾರ್ಪಾಡಿಗೆ ಆಗ್ರಹಪಡಿಸಲಿಲ್ಲ ಎಂದು ತಮಿಳುನಾಡು ಪ್ರತಿಪಾದಿಸಿದೆ.ಸಿಎಂಸಿ ಸಭೆ ಇಂದು

ನವದೆಹಲಿ: `ಸಿಆರ್‌ಎ~ ನಿರ್ದೇಶನ ಪುನರ್‌ಪರಿಶೀಲಿಸಬೇಕೆಂದು ಕೋರಿ ಕರ್ನಾಟಕ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಕುರಿತು ಪರಿಶೀಲಿಸಲು ಜಲ ಸಂಪನ್ಮೂಲ ಕಾರ್ಯದರ್ಶಿ ಡಿ.ವಿ. ಸಿಂಗ್ ನೇತೃತ್ವದ `ಕಾವೇರಿ ಉಸ್ತುವಾರಿ ಸಮಿತಿ~ (ಸಿಎಂಸಿ) ಗುರುವಾರ ಮಧ್ಯಾಹ್ನ 3ಗಂಟೆಗೆ ಸಭೆ ಸೇರುತ್ತಿದೆ.ಕರ್ನಾಟಕ ಹಾಗೂ ತಮಿಳುನಾಡಿಗೆ ಈಚೆಗೆ ಕೇಂದ್ರ ಪರಿಣತರ ತಂಡ ಭೇಟಿ ನೀಡಿ ಸಿದ್ಧಪಡಿಸಿರುವ ವಸ್ತುಸ್ಥಿತಿ ವರದಿ ಮೇಲೆ ಸಭೆಯಲ್ಲಿ ಚರ್ಚೆ ನಡೆಯಲಿದೆ.ಮೊಯಿಲಿ ಆಗ್ರಹ: ಕರ್ನಾಟಕದಿಂದ 9000 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ನಿರ್ದೇಶನವನ್ನು ಪುನರ್ ಪರಿಶೀಲಿಸಬೇಕೆಂದು ಇಂಧನ ಸಚಿವ ಎಂ. ವೀರಪ್ಪ ಮೊಯಿಲಿ ಅವರು ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಬುಧವಾರ ಭೇಟಿ ಮಾಡಿ ಒತ್ತಾಯಿಸಿದ್ದಾರೆ.ರೈತರ ಪ್ರತಿಭಟನೆ: ಸಿಆರ್‌ಎ ನಿರ್ದೇಶನ ಮರು ಪರಿಶೀಲಿಸಬೇಕೆಂದು ಆಗ್ರಹಿಸಿ `ಕಬಿನಿ ರೈತ ಹಿತರಕ್ಷಣಾ ಸಮಿತಿ~ ಸದಸ್ಯರು ಬುಧವಾರ ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ತಮಿಳುನಾಡು ಭವನದ ಮುಂದೆ ಧರಣಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry