ಬುಧವಾರ, ಮಾರ್ಚ್ 3, 2021
31 °C

ಶೆಟ್ಟರ್ ಹಾದಿ ಸುಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೆಟ್ಟರ್ ಹಾದಿ ಸುಗಮ

ಒಂದೆರಡು ದಿನದಲ್ಲಿ ಸಂಸದೀಯ ಮಂಡಳಿ ಸಭೆಯಲ್ಲಿ ಸಮ್ಮತಿ

ನವದೆಹಲಿ: ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಬದಲಾವಣೆಗೆ ಕೊನೆಗೂ ಮಹೂರ್ತ ಕೂಡಿ ಬಂದಿದೆ. ಸದಾನಂದಗೌಡರ ಉತ್ತರಾಧಿಕಾರಿಯಾಗಿ ಸಚಿವ ಜಗದೀಶ್ ಶೆಟ್ಟರ್ ಅವರನ್ನು ನೇಮಕ ಮಾಡುವುದಕ್ಕೆ ಅಡ್ವಾಣಿ ಒಪ್ಪಿಗೆ ನೀಡಿದ್ದಾರೆ.ಒಂದೆರಡು ದಿನದಲ್ಲಿ ಸೇರಲಿರುವ ಸಂಸದೀಯ ಮಂಡಳಿ ಸಭೆಯಲ್ಲಿ ಈ ಬದಲಾವಣೆ ಪ್ರಸ್ತಾಪಕ್ಕೆ ಅಂತಿಮ ಮುದ್ರೆ ಬೀಳಲಿದೆ.ಮುಖ್ಯಮಂತ್ರಿ ಸ್ಥಾನದಿಂದ ಸದಾನಂದಗೌಡರನ್ನು ಕದಲಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರ ಜತೆ ನಿತಿನ್ ಗಡ್ಕರಿ ಗುರುವಾರ  ನಡೆಸಿದ ಸಂಧಾನ ಯಶಸ್ವಿಯಾಗಿದೆ.ಅಡ್ವಾಣಿ ಜತೆ ದನಿಗೂಡಿಸಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನೂ ಅಧ್ಯಕ್ಷರು ಮನವೊಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಸಂಸದೀಯ ಮಂಡಳಿ ಸಭೆ ಸೇರಲಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಸಂಸದೀಯ ಮಂಡಳಿ ಅನುಮೋದನೆ ಬಳಿಕ ಬಿಜೆಪಿ ಮುಖಂಡರಾದ ಅರುಣ್ ಜೇಟ್ಲಿ ಮತ್ತು ರಾಜನಾಥ್‌ಸಿಂಗ್ ಬೆಂಗಳೂರಿಗೆ ತೆರಳುವರು. ಶಾಸಕಾಂಗ ಪಕ್ಷದ ಸಭೆ ಕರೆದು ಶೆಟ್ಟರ್ ಅವರನ್ನು ಹೊಸ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಬಳಿಕ ಸದಾನಂದಗೌಡ ರಾಜೀನಾಮೆ ಸಲ್ಲಿಸುವರು. ಶೆಟ್ಟರ್ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಕೋರಿಕೆ ಸಲ್ಲಿಸುವರು.ಒಂದೇ ಕಂತಿನಲ್ಲಿ ಸಂಪುಟ ವಿಸ್ತರಣೆ?: ರಾಜ್ಯ ವಿಧಾನಸಭೆ ಅವಧಿ 2013ರ ಮೇ ತಿಂಗಳ ಕೊನೆಗೆ ಅಂತ್ಯಗೊಳ್ಳಲಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಒಂದೇ ಕಂತಿನಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚಿಸಲು ಉದ್ದೇಶಿಸಲಾಗಿದೆ, ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸಲಾಗುತ್ತಿದ್ದು, ಈ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ಅಥವಾ ಗೃಹ ಸಚಿವ ಆರ್.ಅಶೋಕ್ ಅವರನ್ನು ನೇಮಿಸುವ ಸಂಭವವಿದೆ.

 

ಆದರೆ, ಈಶ್ವರಪ್ಪ ಉಪಮುಖ್ಯಮಂತ್ರಿ ಹುದ್ದೆ ಬೇಡ ಎಂದಿದ್ದು, ಅಧ್ಯಕ್ಷರಾಗೇ ಮುಂದುವರಿಯುವ ಇರಾದೆ  ವ್ಯಕ್ತಪಡಿಸಿದ್ದಾರೆ. ಅವರನ್ನು ಮತ್ತೆ ಮನವೊಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯತ, ಒಕ್ಕಲಿಗ ಹಾಗೂ ಕುರುಬ ಸಮಾಜ ಸೇರಿದಂತೆ ಎಲ್ಲ ಜಾತಿಗಳಿಗೂ ಸರ್ಕಾರ- ಪಕ್ಷದಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಮೂಲಕ `ಸಾಮಾಜಿಕ ನ್ಯಾಯ~ ಪರಿಪಾಲನೆಗೆ ಬಿಜೆಪಿ ಉದ್ದೇಶಿಸಿದೆ.ಇದಲ್ಲದೆ, ಸದಾನಂದಗೌಡರ ಸರ್ಕಾರದ ಎಲ್ಲ ಸಚಿವರಿಗೂ ಶೆಟ್ಟರ್ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆ ಕಡಿಮೆ. ಕೆಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡಲಾಗುತ್ತದೆ ಎಂದು ಮೂಲಗಳು ಹೇಳಿವೆ.ನಿಗಮ- ಮಂಡಳಿಗೂ  ತಡಮಾಡದೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಆಗಲಿದೆ.ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಈ ಕ್ರಮ ಅನಿವಾರ್ಯವಾಗಿದೆ. ದಕ್ಷಿಣದ ಮೊಟ್ಟ ಮೊದಲ ಬಿಜೆಪಿ ಸರ್ಕಾರ 4 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಾಣುತ್ತಿದೆ. ಅಧಿಕಾರಕ್ಕಾಗಿ ನಡೆದಿರುವ ಕಿತ್ತಾಟ ಪಕ್ಷದ ವರ್ಚಸ್ಸಿಗೆ ಹಾನಿ ಮಾಡಿದೆ. ಇನ್ನು ಮುಂದೆ ಕಚ್ಚಾಟಕ್ಕೆ ಮುಕ್ತಾಯ ಹಾಡಲು ವರಿಷ್ಠರು ನಿರ್ಧರಿಸಿದ್ದಾರೆ. ಅಡ್ವಾಣಿ ಕೂಡಾ ಇದೇ ಮಾತು ಹೇಳಿದ್ದಾರೆನ್ನಲಾಗಿದೆ.`ಶೆಟ್ಟರ್ ಮುಖ್ಯಮಂತ್ರಿ ಆಗುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ಅವರ ಹಿಂದೆ ಯಡಿಯೂರಪ್ಪ ಅವರಿದ್ದಾರೆ ಎಂಬ ಕಾರಣಕ್ಕೆ ವಿರೋಧ ಮಾಡಿದೆ ಅಷ್ಟೆ. ಶೆಟ್ಟರ್ ಇಡೀ ಕುಟುಂಬದ ಪರಿಚಯ ನನಗಿದೆ. ಮಾಜಿ ಮುಖ್ಯಮಂತ್ರಿ ತಾಳಕ್ಕೆ ಕುಣಿಯದೆ ಅವರನ್ನು ದೂರವಿಟ್ಟು ಆಡಳಿತ ನಡೆಸಲು ಸೂಚಿಸಿ. ಕುಗ್ಗಿರುವ ಸರ್ಕಾರದ ವರ್ಚಸ್ಸು ಹೆಚ್ಚಿಸಲು ಗಮನ ಕೊಡುವಂತೆ ಕಿವಿ ಮಾತು ಹೇಳಿ~ ಎಂಬ ಸಂದೇಶವನ್ನು ಗಡ್ಕರಿ ಕೈಯಲ್ಲಿ ಅಡ್ವಾಣಿ ಕಳುಹಿಸಿದ್ದಾರೆ.ಪಕ್ಷದ ಹಿತ ಗಮನದಲ್ಲಿ ಇಟ್ಟುಕೊಂಡು ಅಡ್ವಾಣಿ ನಾಯಕತ್ವ ಬದಲಾವಣೆಗೆ ಒಪ್ಪಿದ್ದಾರೆ. ಶೆಟ್ಟರ್ ಪ್ರಮಾಣ ವಚನದ ಬಳಿಕ ಎಲ್ಲ ಬಣಗಳೂ ಚುನಾವಣೆ ಕಡೆಗೆ ಗಮನ ಹರಿಸಲಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.