ಶುಕ್ರವಾರ, ಜೂನ್ 18, 2021
23 °C

ಶೆಟ್ಟಿ ಹಳ್ಳಿ ಅಭಯಾರಣ್ಯ: ಇನ್ನೂ ಆರದ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿನ ಕಾಳ್ಗಿಚ್ಚು ತಹಬದಿಗೆ ಬಂದರೂ ದೊಡ್ಡ-ದೊಡ್ಡ ಮರಗಳಿಂದ ಇನ್ನೂ ಹೊಗೆ ಹೊರಬರುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಕಾಡಂಚಿನ ಜನರ ಆತಂಕ ಕಡಿಮೆಯಾಗಿಲ್ಲ.ಮೂರು ದಿನ ಹಗಲು-ರಾತ್ರಿ ಹೊತ್ತಿ ಉರಿದ ಅಭಯಾರಣ್ಯದಲ್ಲಿ ಈಗ ಸಶ್ಮಾನ ಮೌನ ಆವರಿಸಿದೆ. ಭಸ್ಮವಾದ ಬೆಲೆಬಾಳುವ ಮರ-ಮಟ್ಟುಗಳು, ಅರೆಬೆಂದ ಪ್ರಾಣಿ-ಪಕ್ಷಿಗಳ ಕಳೇಬರಗಳು ಕಾಡಿನಲ್ಲಿ ಈಗ ಯಥೇಚ್ಛ ಕಾಣಸಿಗುತ್ತವೆ.ಅಭಯಾರಣ್ಯದ ಒಳಗಿರುವ 70 ಹಳ್ಳಿಗಳ ಸ್ಥಿತಿ ಈಗ ಅಯೋಮಯವಾಗಿದೆ. ನಾಲ್ಕು ದಿನಗಳಿಂದ ಇಲ್ಲಿಯ ಬಹುತೇಕ ಹಳ್ಳಿಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಬೆಂಕಿಯ ಝಳಕ್ಕೆ ಸಿಕ್ಕ ವಿದ್ಯುತ್ ತಂತಿಗಳು ಕಡಿದು ಹೋಗಿವೆ. ದುರಸ್ತಿಗೆ ಕನಿಷ್ಠ ಒಂದು ವಾರ ಬೇಕು ಎಂಬುದು ಮೆಸ್ಕಾಂನ ಸಿದ್ಧ ಉತ್ತರ.   ವಿದ್ಯುತ್ ಆಶ್ರಯಿಸಿಯೇ ಕಾಡಂಚಿನ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಕಲ್ಲಂಗಡಿ ಸೇರಿದಂತೆ ವಿವಿಧ ತರಕಾರಿಗಳಿಗೆ ನೀರುಣಿಸಿಲು ಈಗ ವಿದ್ಯುತ್ ಇಲ್ಲ. ಇನ್ನೆರೆಡು ದಿವಸದಲ್ಲಿ ಈ ಬೆಳೆಗಳಿಗೆ ನೀರು ಕೊಡದಿದ್ದರೆ ಫಸಲು ಕಳೆದುಕೊಳ್ಳುವುದು ಖಂಡಿತ ಎನ್ನುತ್ತಾರೆ ಸಿರಿಗೆರೆಯ ರೈತ ಮೈಲಪ್ಪ.ಅಲಸೆ ಗ್ರಾಮದಲ್ಲಿ ಐದು ದನದ ಕೊಟ್ಟಿಗೆಗಳು ಬೆಂಕಿಗೆ ಅಹುತಿಯಾಗಿವೆ. ಎರಡು ಜಾನುವಾರುಗಳು ಸತ್ತಿವೆ. ಒಕ್ಕಲು ಮಾಡಿದ ಬತ್ತದ ಬಣವೆಗಳು ಭಸ್ಮವಾಗಿವೆ. ಐದಕ್ಕೂ ಹೆಚ್ಚು ಎಕರೆ ತೆಂಗಿನ ತೋಟ, 10ಕ್ಕೂ ಹೆಚ್ಚು ಅಡಿಕೆ ತೋಟಗಳು ಭಾಗಶಃ ಹಾನಿಯಾಗಿವೆ.ಅರೆಬೆಂದ ಕಾಡುಕುರಿ, ಜಿಂಕೆ, ಮಂಗಗಳ ಕಳೇಬರಗಳಿಂದ ಈಗ ವಿಚಿತ್ರ ವಾಸನೆ ಹೊರಡುತ್ತಿದ್ದು, ರೋಗ ಹರಡಲು ಕಾರಣವಾಗಬಹುದೇ ಎಂಬ ಆತಂಕ ಈ ಜನರದ್ದು. ಮರ ಮತ್ತು ಪ್ರಾಣಿಗಳ ಸುಟ್ಟ ವಾಸನೆಯಿಂದಾಗಿ ಕಾಡಂಚಿಗೆ ಸುಳಿದಾಡಿದರೆ ಹೊಟ್ಟೆ ತೊಳೆಸುವುದು ಜನರ ಅನುಭವಕ್ಕೆ ಬಂದಿದೆ.ಕರ್ಕುಚ್ಚಿ, ಮತ್ತಿಹಳ್ಳ, ಆರನಗಳ್ಳಿ, ಸಂಪಿಗೆಹಳ್ಳ, ಹಣಗೆರೆ, ಕೆರೆಹಳ್ಳ ಈ ಭಾಗದಲ್ಲಿ ಬೀಟೆ, ಹೊನ್ನೆ ಸೇರಿದಂತೆ ಬಹುದೊಡ್ಡ ಮರಗಳಿಂದ ಈಗಲೂ ಹೊಗೆ ಬರುತ್ತಿದ್ದು, ಕೈಯಲ್ಲಿ ಜೀವ ಹಿಡಿದು ಬದುಕುವಂತಾಗಿದೆ. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಜನರಲ್ಲಿ ಧೈರ್ಯ ತುಂಬುತ್ತಿದ್ದು, ಜನರ ಸಹಕಾರವನ್ನೂ ಬಯಸಿದೆ. ಸರಿ ಸುಮಾರು 400ರಿಂದ 500 ಎಕರೆ ದಟ್ಟ ಅರಣ್ಯ ಬೆಂಕಿಗೆ ಅಹುತಿಯಾಗಿದ್ದರಿಂದ ಬೆಂಕಿ ಇಟ್ಟವರ‌್ಯಾರೆಂಬ ಬಗ್ಗೆ ಅರಣ್ಯ ಇಲಾಖೆ ಪರಿಶೀಲನೆ ನಡೆಸಿದೆ. ಮಂಗನ ಕಾಯಿಲೆ ಹರಡುವ ಉಣ್ಣೆಗಳನ್ನು ಸಾಯಿಸುವ ಸಲುವಾಗಿ ಕಾಡಂಚಿನ ಗ್ರಾಮಸ್ಥರೇ ಕಾಡಿಗೆ ಬೆಂಕಿ ಹಚ್ಚಿರುವ ಸಾಧ್ಯತೆಗಳೇ ಹೆಚ್ಚು ಎನ್ನುವುದು ಇಲಾಖೆ ಅಧಿಕಾರಿಗಳ ಶಂಕೆ.ಬಿದಿರಿನ ಮೆಳೆಗಳಿಂದಲೇ ಕಾಳ್ಗಿಚ್ಚು ಕಾಣಿಸಿಕೊಂಡಿದೆ ಎಂಬುದು ಗ್ರಾಮಸ್ಥರ ಊಹೆ. ಐದಾರು ವರ್ಷಗಳಿಂದ ಬೆಳೆದ ನಿಂತಿದ್ದ ಬಿದಿರಿನ ಮೆಳೆಗಳನ್ನು ಅರಣ್ಯ ಇಲಾಖೆ ಕಟಾವು ಮಾಡದಿದ್ದರಿಂದ ಸಣ್ಣದಾಗಿ ಉರಿದು ಆರಿ ಹೋಗುತ್ತಿದ್ದ ಬೆಂಕಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.ಅರಣ್ಯದಲ್ಲಿನ ಬಿದಿರು ಮೆಳೆಗಳನ್ನು ತೆರವುಗೊಳಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕು. ಅನುಮತಿಗಾಗಿ ಎರಡು ವರ್ಷಗಳ ಹಿಂದೆಯೇ ಪತ್ರ ಬರೆಯಲಾಗಿದೆ. ಇದುವರೆಗೂ ಅಲ್ಲಿಂದ ಉತ್ತರ ಬಂದಿಲ್ಲ ಎನ್ನುತ್ತಾರೆ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‌ಕುಮಾರ್.ಬಿದಿರಿನ ಇದ್ದಿಲು ಸ್ಟಾರ್ ಹೋಟೆಲ್‌ಗಳಿಗೆ ಬೇಕಾಗಿದ್ದು, ಅದನ್ನು ಪೂರೈಸಲು ಅರಣ್ಯ ಇಲಾಖೆಯ ಕೆಲ ಸಿಬ್ಬಂದಿ ಇಂತಹ ಕೃತ್ಯಕ್ಕೂ ಮುಂದಾಗಿರುವ ಸಾಧ್ಯತೆಗಳಿವೆ ಎನ್ನುವ ಮಾತುಗಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.