ಸೋಮವಾರ, ಮಾರ್ಚ್ 8, 2021
24 °C

ಶೆಡ್‌ನಲ್ಲಿ ಜಾನಪದ ವಿ.ವಿ ತರಗತಿ

ಜಿತೇಂದ್ರ.ಆರ್‌////ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೆಡ್‌ನಲ್ಲಿ ಜಾನಪದ ವಿ.ವಿ ತರಗತಿ

ಹುಬ್ಬಳ್ಳಿ: ಮೂರು ವರ್ಷಗಳ ಹಿಂದೆ ಸ್ಥಾಪನೆ­ಯಾದ ಕರ್ನಾಟಕ ಜಾನಪದ ವಿಶ್ವ­ವಿದ್ಯಾ­ಲಯದಲ್ಲಿ ಇಂದಿಗೂ ತರಗತಿ­ಗಳು ಶೆಡ್‌ನಲ್ಲಿಯೇ ನಡೆ­ಯುತ್ತಿವೆ. ಅದೂ ಒಂದೇ ಆವರಣದಲ್ಲಿ ಮೂರು ತರಗತಿ! ಇದು ಜಗತ್ತಿನ ಮೊದಲ ಜಾನಪದ ವಿಶ್ವವಿದ್ಯಾಲಯ ಎಂಬ ಕೀರ್ತಿ ಪಡೆದಿರುವ ವಿಶ್ವವಿದ್ಯಾಲಯದ ಸ್ಥಿತಿ.ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಗೊಟ­ಗೋಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಟ್ಟಡ­ದಲ್ಲಿಯೇ ಸದ್ಯ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಕಾರ್ಯ­ನಿರ್ವ­ಹಿ­ಸುತ್ತಿದೆ. ಇದೇ ಕಟ್ಟಡದ  ಮೂರು ಕೊಠಡಿಗಳನ್ನು ತರಗತಿಗಳಿಗೂ ಬಳಸ­ಲಾಗುತ್ತಿದೆ. ಕಟ್ಟಡದ ಪಕ್ಕದ­ಲ್ಲಿಯೇ ಶೆಡ್‌ ನಿರ್ಮಿಸಲಾಗಿದ್ದು, ಅಲ್ಲಿ ಮೂರು ತರಗತಿಗಳನ್ನು ನಡೆಸ­ಲಾ­ಗುತ್ತಿದೆ. ಇದನ್ನೇ ಸಭೆ–ಸಮಾರಂಭಗಳಿಗೆ ಸಭಾಂ­ಗಣವಾಗಿಯೂ ಬಳಸಿಕೊಳ್ಳಲಾಗುತ್ತಿದೆ!ವಿಶ್ವವಿದ್ಯಾಲಯಕ್ಕೆ ಸರ್ಕಾರ 160 ಎಕರೆ ಜಮೀನು ನೀಡಿದೆಯಾದರೂ ಅನು­ದಾನದ ಕೊರತೆಯಿಂದ ಮೂಲಸೌಕರ್ಯ ದೊರೆತಿಲ್ಲ. ಪ್ರಸ್ತುತ ವಿ.ವಿ ಆವರಣದಲ್ಲಿ ರೂ. 8 ಕೋಟಿ ವೆಚ್ಚದಲ್ಲಿ ಆಡಳಿತ ಹಾಗೂ ಶೈಕ್ಷಣಿಕ ಭವನ, ರೂ. 90 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿನಿಲಯದ ನಿರ್ಮಾಣ ಕಾಮ­ಗಾರಿ ನಡೆಯುತ್ತಿದೆ. ಈ ಕಾಮ­ಗಾರಿ­ಗಳಿಗೂ ಹಣದ ಕೊರತೆ­ಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.2011ರಲ್ಲಿ ಕಾರ್ಯಾರಂಭ ಮಾಡಿದ ವಿಶ್ವವಿದ್ಯಾಲಯಕ್ಕೆ ಈವರೆಗೆ ದೊರೆತಿರುವ ಅನುದಾನ ಸುಮಾರು ರೂ.17 ಕೋಟಿ. ವಿಶ್ವ­ವಿದ್ಯಾಲಯಕ್ಕೆ ಇನ್ನೂ ಯುಜಿಸಿ ಮಾನ್ಯತೆ ದೊರೆ­ಯದ ಕಾರಣ ಸಂಪೂರ್ಣ­ವಾಗಿ ರಾಜ್ಯ ಸರ್ಕಾರದ ಅನುದಾನವನ್ನೇ ಅವಲಂಬಿಸಬೇಕಾಗಿದೆ.ಗೊಟಗೋಡಿ ಕ್ಯಾಂಪಸ್‌ನಲ್ಲಿ ಸದ್ಯ 120 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇದಲ್ಲದೆ ಗೊಟಗೋಡಿ ಹಾಗೂ ಶಿಗ್ಗಾಂವಿಯಲ್ಲಿ 200 ವಿದ್ಯಾರ್ಥಿಗಳು ಸರ್ಟಿ­ಫಿಕೇಟ್‌ ಹಾಗೂ ಡಿಪ್ಲೊಮಾ ಕೋರ್ಸ್‌ ಕಲಿಯುತ್ತಿದ್ದಾರೆ.ಪ್ರಸ್ತುತ ವಿಶ್ವವಿದ್ಯಾಲಯಕ್ಕೆ ಕುಲಪತಿ­ಯೊಬ್ಬ­­ರನ್ನು ಬಿಟ್ಟರೆ ಕಾಯಂ ಸಿಬ್ಬಂದಿ ಇಲ್ಲ. ಬೇರೆ ವಿಭಾಗ­ಗಳಿಂದ ನಿಯೋಜನೆ ಮೇಲೆ ಇಬ್ಬರು ರಿಜಿಸ್ಟ್ರಾರ್‌, ಒಬ್ಬರು ಪ್ರಾಧ್ಯಾಪಕರು ಹಾಗೂ ಒಬ್ಬರು ಕಾರ್ಯನಿರ್ವಾಹಕ ಎಂಜಿ­ನಿಯರ್‌ ಕಾರ್ಯ­ನಿರ್ವಹಿಸುತ್ತಿದ್ದಾರೆ. ಉಳಿ­ದಂತೆ ಉಪನ್ಯಾಸಕರು, 12 ಕಲಾವಿದರ ಸಹಿತ 20 ಬೋಧಕ ವರ್ಗ­ದವ­ರಿದ್ದಾರೆ. ಬೀದರ್‌ ಹಾಗೂ ಮಲೆ­ಮಹದೇಶ್ವರ ಬೆಟ್ಟ­ದಲ್ಲಿ ವಿಶ್ವವಿದ್ಯಾಲಯವು ಅಧ್ಯಯನ ಕೇಂದ್ರ­ಗಳನ್ನು ಹೊಂದಿದೆ. ಅಲ್ಲಿಯೂ ಒಟ್ಟು ಆರು ಮಂದಿ ಯೋಜನಾ ಸಿಬ್ಬಂದಿ ಇದ್ದಾರೆ.‘2013–14ನೇ ಸಾಲಿನಲ್ಲಿ ಸರ್ಕಾರ ರೂ. 4.93 ಕೋಟಿ ಅನುದಾನ ನೀಡಿತ್ತು. ಹಣ­ಕಾಸಿನ ಕೊರ­ತೆಯ ಕಾರಣ ಎಲ್ಲ ಕೆಲಸ­ವನ್ನೂ ಹೊರಗುತ್ತಿಗೆ ನೀಡು­­ತ್ತಿ­ದ್ದೇವೆ. ಮುಂಬರುವ ಬಜೆಟ್‌ನಲ್ಲಿ ಕನಿಷ್ಠ ರೂ.10 ಕೋಟಿ ಅನುದಾನ ನೀಡು­ವಂತೆ ಹಣಕಾಸು ಇಲಾಖೆಗೆ ಮನವಿ ಮಾಡಿದ್ದೇವೆ. ಹೆಚ್ಚಿನ ನೆರವು ಸಿಗುವ ನಿರೀಕ್ಷೆ ಇದೆ’ ಎಂದು ವಿ.ವಿ ಕುಲಪತಿ ಪ್ರೊ. ಅಂಬ­ಳಿಕೆ ಹಿರಿಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.‘ಕನ್ನಡ ನಿಘಂಟು, ಗ್ರಾಮ ಚರಿತ್ರಾ ಕೋಶ, ದೇಸಿ ಕೃಷಿ ವಿಜ್ಞಾನ ಕೋಶ ಸೇರಿದಂತೆ ಅನೇಕ ಮಹತ್ವದ ಯೋಜನೆ­ಗಳನ್ನು ವಿಶ್ವವಿದ್ಯಾಲಯ ಕೈಗೆತ್ತಿ­ಕೊಂ­ಡಿದೆ. ಇದರಲ್ಲಿ ಗ್ರಾಮ ಚರಿತ್ರಾ ಕೋಶಕ್ಕೆ ಮಾತ್ರ ಗ್ರಾಮೀಣಾಭಿವೃದ್ಧಿ ಇಲಾಖೆ­ಯಿಂದ ಅನುದಾನ ಸಿಗುತ್ತಿದೆ. ಇತರ ಸಂಶೋಧನೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೆರವು ನೀಡುವಂತೆ ಕೋರಿದ್ದು, ಪ್ರತಿಕ್ರಿಯೆ ದೊರೆತಿಲ್ಲ. ಸದ್ಯ ವಿಶ್ವ­­ವಿದ್ಯಾಲಯದ ಸಿಬ್ಬಂದಿಗೆ ವಸತಿ­ಗೃಹ­ಗಳ ನಿರ್ಮಾಣ, ಬಯಲು ರಂಗ­ಮಂದಿರ, ಬಯಲು ವಸ್ತು­ಸಂಗ್ರಹಾ­ಲಯದಂತಹ ಮಹತಾ­ಕಾಂಕ್ಷೆಯ ಯೋಜ­ನೆ­­­ಗಳನ್ನು ಕೈಗೆತ್ತಿಕೊಳ್ಳಲು ನಿರ್ಧ­ರಿಸ­ಲಾಗಿದೆ. ಎಲ್ಲವೂ ನಮ್ಮ ಮುಂದಿನ ಹಣಕಾಸು ಪರಿಸ್ಥಿತಿಯನ್ನು ಅವಲಂಬಿಸಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.