ಶೇಂಗಾ ಬೀಜ ಕೊರತೆ: ಆಕ್ರೋಶ

7

ಶೇಂಗಾ ಬೀಜ ಕೊರತೆ: ಆಕ್ರೋಶ

Published:
Updated:

ಯಾದಗಿರಿ: ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯಾಗಿದ್ದು, ಶೇಂಗಾ ಬಿತ್ತನೆಗೆ ಮುಂದಾಗಿರುವ ರೈತರಿಗೆ ಬೀಜ ದೊರೆಯದೇ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾದಗಿರಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಒಳ್ಳೆಯ ಮಳೆಯಾಗಿದ್ದು, ರೈತರು ಶುಕ್ರವಾರ ಇಲ್ಲಿಯ ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ, ಶೇಂಗಾ ಬೀಜ ನೀಡುವಂತೆ ಒತ್ತಾಯಿಸಿದರು.ಆದರೆ ಬೇಡಿಕೆಗೆ ಅನುಗುಣವಾಗಿ ಶೇಂಗಾ ಬೀಜ ಬಾರದೇ ಇರುವುದರಿಂದ ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ ಬೀಜದ ದಾಸ್ತಾನು ಲಭ್ಯವಿರಲಿಲ್ಲ. ಇದರಿಂದ ತೀವ್ರ ಆಕ್ರೋಶಗೊಂಡ ರೈತರು, ಕೃಷಿ ಇಲಾಖೆಯ ಕಾರ್ಯವೈಖರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಸದ್ಯಕ್ಕೆ ಮಳೆಯಾಗಿದೆ. ಬಿತ್ತನೆಗೆ ಸೂಕ್ತ ವಾತಾವರಣವಿದೆ. ಈಗಲೇ ಶೇಂಗಾ ಬೀಜ ಬಿತ್ತಿದರೆ, ಒಳ್ಳೆಯ ಬೆಳೆ ಬರಬಹುದು. ಆದರೆ ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ ಬೀಜಗಳು ಇಲ್ಲ. ಯಾವಾಗ ಬರಲಿವೆ ಎಂಬ ಮಾಹಿತಿಯೂ ಇಲ್ಲ. ಹೀಗಾದರೆ ರೈತರ ಸ್ಥಿತಿ ಏನು ಎಂದು ಪ್ರಶ್ನಿಸಿದರು.ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ಶೇಂಗಾ ಬೀಜ ವಿತರಿಸಲು ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ದಾಸ್ತಾನು ಇಲ್ಲದಾಗಿದೆ.ಸುಮಾರು 6 ಸಾವಿರ ಕ್ವಿಂಟಲ್‌ನಷ್ಟು ಶೇಂಗಾ ಬೀಜದ ಬೇಡಿಕೆ ಇದ್ದು, ಸದ್ಯಕ್ಕೆ ಕೇವಲ 500 ಕ್ವಿಂಟಲ್ ಮಾತ್ರ ಬೀಜ ಲಭ್ಯವಾಗಿದೆ. ಹೀಗಾಗಿ ಎಲ್ಲ ರೈತರಿಗೆ ಬಿತ್ತನೆ ಬೀಜ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ.ಚಳ್ಳಕೆರೆ, ದಾವಣಗೆರೆ, ಗದಗ ಮುಂತಾದೆಡೆಗಳಿಂದ ಶೇಂಗಾ ಬೀಜ ಇಲ್ಲಿಗೆ ಬರುತ್ತದೆ. ಆದರೆ ಆ ಭಾಗದಲ್ಲಿ ಶೇಂಗಾ ಕಿತ್ತುವುದು ತಡವಾಗಿದ್ದು, ಇದರಿಂದಾಗಿ ಶೇಂಗಾ ಬೀಜ ಜಿಲ್ಲೆಗೆ ಬರುವುದು ವಿಳಂಬವಾಗಿದೆ ಎಂಬ ವಿವರಣೆಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ನೀಡಿದರು.ಆದರೆ ಇದಾವುದನ್ನೂ ಕೇಳುವ ಸ್ಥಿತಿಯಲ್ಲಿ ಇರದ ರೈತರು, ಮುಂಗಾರು ಹಂಗಾಮಿನಲ್ಲಿ ಹೆಸರು ಬಿತ್ತಿ, ಹಾಳಾಗಿದ್ದೇವೆ. ಈಗಲೂ ಶೇಂಗಾ ಬೀಜ ಸಿಗದೇ ಇದ್ದರೆ, ಹಂಗಾಮು ಮುಗಿದು ಹೋಗುತ್ತದೆ. ನಂತರ ಇಳುವರಿಯೂ ಸರಿಯಾಗಿ ಬರುವುದಿಲ್ಲ.ಹಂಗಾಮಿಗೆ ತಕ್ಕಂತೆ ಕೃಷಿ ಇಲಾಖೆ ಬೀಜಗಳ ದಾಸ್ತಾನು ಮಾಡಿಕೊಳ್ಳಬೇಕು. ರೈತರು ಬೇಡಿಕೆ ಗಮನಿಸಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.ಜಿ.ಪಂ. ಉಪಾಧ್ಯಕ್ಷರ ಚರ್ಚೆ:

ಶೇಂಗಾ ಬೀಜಕ್ಕಾಗಿ ರೈತರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕಚೇರಿಗೆ ಜಂಟಿ ಕೃಷಿ ನಿರ್ದೇಶಕರನ್ನು ಕರೆಯಿಸಿದ ಜಿಲ್ಲಾ ಪಂಚಾಯಿತಿ ನೂತನ ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ಪರಿಸ್ಥಿತಿಯ ಕುರಿತು ಚರ್ಚಿಸಿದರು.ಸದ್ಯಕ್ಕೆ ಉತ್ತಮ ಮಳೆಯಾಗಿದೆ. ಹೊಲದಲ್ಲಿ ಬಿತ್ತನೆಗೆ ಸೂಕ್ತ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಅಗತ್ಯ ಬಿತ್ತನೆ ಬೀಜ ಒದಗಿಸುವುದು ಕೃಷಿ ಇಲಾಖೆಯ ಕರ್ತವ್ಯ. ಆದರೆ ಸದ್ಯಕ್ಕೆ ಬೀಜ ಸಿಗದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಶೇಂಗಾ ಬೀಜ ದೊರೆಯುವಂತೆ ಮಾಡಲು ಸೂಚನೆ ನೀಡಿದರು.ಶೇಂಗಾ ಬೀಜದ ದಾಸ್ತಾನು ಬರುವುದು ವಿಳಂಬವಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚಿಸಿ, ಸೂಕ್ತ ಏರ್ಪಾಟು ಮಾಡುವುದಾಗಿ ತಿಳಿಸಿದರು.ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕು. ರೈತರ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಶರಣೀಕ್ ಕುಮಾರ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry