ಶೇಂಗಾ ಬೆಳೆಗೆ ಪ್ಲಾಸ್ಟಿಕ್ ಹೊದಿಕೆ

7

ಶೇಂಗಾ ಬೆಳೆಗೆ ಪ್ಲಾಸ್ಟಿಕ್ ಹೊದಿಕೆ

Published:
Updated:
ಶೇಂಗಾ ಬೆಳೆಗೆ ಪ್ಲಾಸ್ಟಿಕ್ ಹೊದಿಕೆ

ಶೇಂಗಾ ಕರ್ನಾಟಕದ ಪ್ರಮುಖ ಎಣ್ಣೆಕಾಳು ಬೆಳೆ. ಮುಂಗಾರು, ಹಿಂಗಾರು ಹಾಗೂ ಬೇಸಿಗೆಯಲ್ಲಿ ಶೇಂಗಾ ಬೆಳೆಯಬಹುದು. ಅಧಿಕ ಉತ್ಪಾದನೆಗೆ ಸ್ಥಳೀಯ ಹವಾಗುಣ ಹಾಗೂ ನೀರಿನ ಲಭ್ಯತೆ ಮುಖ್ಯ ಕಾರಣವಾಗುತ್ತದೆ. ಕಡಿಮೆ ನೀರು ಬಳಸಿ ಹೆಚ್ಚು ಇಳುವರಿ ಪಡೆಯಲು ಹೊಸ ವಿಧಾನಗಳು ರೂಪುಗೊಂಡಿವೆ. ಭೂಮಿಯ ತೇವಾಂಶವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಭೂಮಿಗೆ ಪ್ಲಾಸ್ಟಿಕ್ ಹೊದಿಕೆ ಹಾಸಿ ಶೇಂಗಾ ಬೆಳೆಯುವ ಪದ್ಧತಿ ಈಗ ಬಳಕೆಯಲ್ಲಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿಯ ರೈತ ಸೋದರರಾದ ಶಿವಾನಂದ ಶಾಂಡಗೆ ಎಂಬುವರು ತಮ್ಮ ಹೊಲದಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಸಿ ಶೇಂಗಾ ಬೆಳೆದು ಯಶಸ್ಸು ಕಂಡಿದ್ದಾರೆ. ಈ ಸೋದರರು ಕಳೆದ ಏಳೆಂಟು ವರ್ಷಗಳಿಂದ ಶೇಂಗಾ ಬೆಳೆಯುತ್ತಿದ್ದಾರೆ. ಶೇಂಗಾ ಗಿಡಗಳ ಬುಡಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಸಿ ಬೆಳೆದ ಶೇಂಗಾ ಹೊಲ ಮತ್ತು ಬೆಳೆ ನೋಡಬೇಕೆಂದರೆ ನಿಪ್ಪಾಣಿಯಿಂದ  5-6  ಕಿ.ಮೀ. ದೂರದಲ್ಲಿರುವ ಅವರ ಹೊಲಕ್ಕೆ ಹೋಗಬೇಕು. ಹೊಲದ ತಯಾರಿ : ಪ್ಲಾಸ್ಟಿಕ್ ಹೊದಿಕೆ ಹಾಸಿ ಶೇಂಗಾ ಬೆಳೆಯುವ ಪದ್ಧತಿಯನ್ನು ಅನುಸರಿಸುವ ಮೊದಲು ಮಡಿಗಳನ್ನು ಮಾಡಿಕೊಳ್ಳಬೇಕು. ನಂತರ ಆ ಮಡಿಗಳಿಗೆ ನೀರನ್ನು ಹಾಯಿಸಿ ಭೂಮಿಯನ್ನು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕು. ನೀರು ಹಾಯಿಸಿದ ಸ್ವಲ್ಪ ಸಮಯದ ನಂತರ ಪ್ಲಾಸ್ಟಿಕ್ ಹೊದಿಕೆಯನ್ನು ಭೂಮಿಗೆ ಹಾಸಬೇಕು. ಹೀಗೆ ಹೊದಿಕೆ ಹಾಸಲು ಎಕರೆಗೆ ಸುಮಾರು 30 ಕೇಜಿಯಷ್ಟು ಪ್ಲಾಸ್ಟಿಕ್ ಹಾಳೆ ಬೇಕಾಗುತ್ತದೆ. ಹಾಳೆಯಲ್ಲಿ ರಂಧ್ರ ಮಾಡಿರುವ ಜಾಗದಲ್ಲಿ ಬಿತ್ತನೆ ಬೀಜ ನಾಟಿ ಮಾಡಬೇಕು. ಹೀಗೆ ಮಾಡುವುದರಿಂದ ಬೀಜಗಳು ಬೇಗ ಮೊಳಕೆ ಬರುತ್ತವೆ. ಕೆಲವು ಬೀಜಗಳು ಮೊಳಕೆ ಬಾರದಿದ್ದರೆ  ಮತ್ತೆ  ನಾಟಿ ಮಾಡಲು ಅವಕಾಶವಿದೆ. ಈ ಶೇಂಗಾ ಬೆಳೆಗೆ ಸೂಪರ್ ಪಾಸ್ಫೇಟ್, ಎಂ.ಓ.ಪಿ, ಡಿ.ಎ.ಪಿ. ಜಿಪ್ಸಮ್ ಮತ್ತು ಮೈಕ್ರೋ ನ್ಯೂಟ್ರೀಂಟ್ ಗೊಬ್ಬರಗಳನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಕೊಡಬೇಕು.ನೀರಿನ ಉಳಿತಾಯ: ಪ್ಲಾಸ್ಟಿಕ್ ಹೊದಿಕೆಯಲ್ಲಿ ಶೇಂಗಾ ಬೆಳೆಯುವುದರಿಂದ ನೀರು ಉಳಿತಾಯ  ಮಾಡಬಹುದು. ಬಿತ್ತನೆ ನಂತರ ಕೊಯ್ಲು ಮಾಡುವವರೆಗೆ ಬೆಳೆಗೆ 8 ಸಲ ನೀರು ಕೊಟ್ಟರೆ ಸಾಕು ಎನ್ನುತ್ತಾರೆ ರೈತ ಶಿವಾನಂದ ಶಾಂಡಗೆ.ತುಂತುರು ನೀರಾವರಿ: ಶಿವಾನಂದ ಶಾಂಡಗೆ ಅವರು ತುಂತುರು ನೀರಾವರಿ (ಸ್ಪಿಂಕ್ಲರ್) ಪದ್ಧತಿ ಅಳವಡಿಸಿಕೊಂಡು ಶೇಂಗಾ ಬೆಳೆದು ಯಶಸ್ವಿಯಾಗಿದ್ದಾರೆ. ಶೇಂಗಾ ಗಿಡಗಳ ಬೇರು ಹಸಿಯಾಗುವಷ್ಟು ನೀರು ಹಿಂಗಿಸಿ ಶೇಂಗಾ ಬೆಳೆಯಬಹುದು ಎನ್ನುತ್ತಾರೆ.ಹೊಲಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಸಿ ಮತ್ತು ಸಾಂಪ್ರದಾಯಿಕವಾಗಿ ಶೇಂಗಾ ಬೆಳೆಯುವ   ಪ್ರಯೋಗವನ್ನು ಶಿವಾನಂದ ಶಾಂಡಗೆ ತಮ್ಮ ಹೊಲದಲ್ಲಿ ಮಾಡಿದ್ದಾರೆ. ಆದರೆ ಪ್ಲಾಸ್ಟಿಕ್ ಹೊದಿಕೆ  ಪದ್ಧತಿ ಶೇಂಗಾ ಬೆಳೆಗೆ ಉತ್ತಮ ಎನಿಸಿದೆ. ಹೀಗಾಗಿ ಅವರು ಎಂಟು ವರ್ಷಗಳಿಂದ ಈ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಪದ್ಧತಿಯಲ್ಲಿ ಎಕರೆಗೆ ಕನಿಷ್ಠ 20 ಕ್ವಿಂಟಲ್, ಗರಿಷ್ಠ 24 ಕ್ವಿಂಟಲ್ ಇಳುವರಿ ಪಡೆಯಬಹುದು ಎನ್ನುತ್ತಾರೆ. ಸಾಮಾನ್ಯ ಪದ್ಧತಿಗಿಂತ ಈ ಪದ್ಧತಿಯಲ್ಲಿ ಎಕರೆಗೆ 7 ಕ್ವಿಂಟಲ್ ಹೆಚ್ಚು ಇಳುವರಿ ಪಡೆಯಬಹುದು ಎನ್ನುತ್ತಾರೆ.ಪ್ಲಾಸ್ಟಿಕ್ ಹಾಳೆ ಖರೀದಿಗೆ ಎಕರೆಗೆ 4,800 ರೂ ಖರ್ಚು ಬರುತ್ತದೆ. ಎಕರೆಗೆ 65 ಕಿಲೋ ಬಿತ್ತನೆ ಬೀಜ ಬೇಕಾಗುತ್ತದೆ. ಪ್ಲಾಸ್ಟಿಕ್ ಹಾಳೆ ಹೊಲಕ್ಕೆ ಹಾಸಲು ಮತ್ತು ಬಿತ್ತನೆ ಮಾಡಲು ಒಟ್ಟು 45ಮಂದಿ ಆಳುಗಳು ಬೇಕು. ಗೊಬ್ಬರಕ್ಕೆ 2,500 ರೂ ಬೇಕಾಗುತ್ತದೆ. ಈ ಪದ್ಧತಿಯಲ್ಲಿ ಶೇಂಗಾ ಬೆಳೆಯಲು ಎಕರೆಗೆ ಸುಮಾರು 20,000 ರೂಗಳವರೆಗೆ ಖರ್ಚು ಬರುತ್ತದೆ. ನಿವ್ವಳ ಲಾಭ ಒಂದು ಎಕರೆಗೆ 40,000ರೂ ಎನ್ನುತ್ತಾರೆ ಶಾಂಡಗೆ.ಒಂದು ಬೆಳೆಗೆ ಬಳಸಿದ ಪ್ಲಾಸ್ಟಿಕ್ ಹಾಳೆಯನ್ನು ಮತ್ತೆ ಬಳಸಲು ಸಾಧ್ಯವಿಲ್ಲ. ಅದನ್ನು ನಾಶ ಮಾಡಬೇಕು. ಈ ಪದ್ಧತಿಯಲ್ಲಿ ಶೇಂಗಾ ಬೆಳೆಯಲು ಬಯಸುವ ರೈತರು ಹೆಚ್ಚಿನ ಮಾಹಿತಿಗೆ ಶಿವಾನಂದ ಶಾಂಡಗೆ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ ನಂಬರ್- 9844616555 ಮತ್ತು 9480017984.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry