ಶೇಂಗಾ ಬೆಳೆಗೆ `ಸುರಳಿ ಪುಚಿ' ಕಾಟ

7

ಶೇಂಗಾ ಬೆಳೆಗೆ `ಸುರಳಿ ಪುಚಿ' ಕಾಟ

Published:
Updated:
ಶೇಂಗಾ ಬೆಳೆಗೆ `ಸುರಳಿ ಪುಚಿ' ಕಾಟ

ಗಜೇಂದ್ರಗಡ:  ರಾತ್ರಿ ಹೊತ್ತು ಶೇಂಗಾ ಬೆಳೆಗೆ ದಾಳಿ ಇಡುವ ಸುರಳಿ ಪುಚಿ ಹುಳುಗಳು ಬೆಳಗಾಗು ವಷ್ಟರಲ್ಲಿ ಎಲೆಗಳನ್ನು ಭಕ್ಷಿಸುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.ಕೈಕೊಡುವ ವಿದ್ಯುತ್, ಕುಸಿದಿರುವ ಅಂತರ್ಜಲ ಮಟ್ಟದ ನಡುವೆಯೂ ಕಷ್ಟಪಟ್ಟು ಬೆಳೆದ ಶೇಂಗಾ ಬೆಳೆ ಬೆಳಗಾಗುವಷ್ಟರಲ್ಲಿ ಈ ಹುಳಗಳು ತಿಂದು ಹಾಕುತ್ತಿರುವುದರಿಂದ ಗಿಡದಲ್ಲಿ ಕಾಯಿ ಕಟ್ಟದೇ ರೈತರು ಕೈಹಿಸುಕಿಕೊಳ್ಳುವಂತಾಗಿದೆ.ಈ ಹುಳಗಳನ್ನು ನಿಯಂತ್ರಿಸಲು ರೈತರು ನಾನಾ ಕ್ರಮಗಳನ್ನು ಕೈಗೊಂಡಿದ್ದರೂ ಯಶಸ್ವಿಯಾಗಿಲ್ಲ. ಇದಕ್ಕೆ ಕಾರಣವೆಂದರೆ ಹಗಲು ಹೊತ್ತಿನಲ್ಲಿ ಈ ಹುಳಗಳು ಮಣ್ಣಿನೊಳಗೆ ಅಡಗಿಕೊಳ್ಳುವುದು. ಸೂರ್ಯ ಮುಳುಗಿದ ನಂತರ ಬೆಳೆ ಮೇಲೆ ದಾಳಿ ಮಾಡುವ ಹುಳುಗಳು ಹಗಲು ಹೊತ್ತಿನಲ್ಲಿ ಮಣ್ಣಿನಿಂದ ಹೊರಗೇ ಬರುವುದಿಲ್ಲ. ಹಾಗಾಗಿ ಎಷ್ಟೇ ದುಬಾರಿ ಖರ್ಚಿನ ಕೀಟ ನಾಶಕ ಸಿಂಪಡಿಸಿ ದರೂ ನಿಯಂತ್ರಣ ಸಾಧ್ಯವಾಗಿಲ್ಲ.ಮಳೆಯ ಕೊರತೆಯ ನಡುವೆಯೂ ರೈತರು ಈ ವಾಣಿಜ್ಯ ಬೆಳೆ ಬೆಳೆಯಲು ಕಾತರದಿಂದ ಇರು ತ್ತಾರೆ. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಪ್ರದೇಶ ಗಣನೀಯವಾಗಿ ಕಡಿಮೆಯಾಗಿದೆ. ಪಂಪ್‌ಸೆಟ್ ಹೊಂದಿರುವ ರೈತರು  ಪ್ರಸಕ್ತ ವರ್ಷ ಈ ಭಾಗದಲ್ಲಿ 12,356 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆದಿದ್ದಾರೆ.

ಆದರೆ, ಸುರಳಿ ಪುಚಿ ಬಾಧೆಯಿಂದಾಗಿ ಬೆಳೆ ಪೂರ್ಣವಾಗಿ ಬೆಳೆಯಲು ಆಗಿಲ್ಲ. ಹುಳುಗಳು ಗಿಡದ ಎಲೆಗಳನ್ನು ತಿನ್ನುವುದರಿಂದ ಗಿಡದಲ್ಲಿ ಕಾಯಿ ಕಟ್ಟುವುದು ಕಡಿಮೆ ಎನ್ನುತ್ತಾರೆ ಚಂದ್ರಶೇಖರ ಹೂಗಾರ ಮತ್ತು ಅಪ್ಪಣ್ಣ ಕಲಾಲ.ಲಾಭದ ಬೆಳೆ `ಶೇಂಗಾ': ಶೇಂಗಾ ಬೆಳೆಯಲು ಎಕರೆಗೆ 10 ರಿಂದ 12 ಸಾವಿರ ರೂಪಾಯಿ ಖರ್ಚು ಬರುತ್ತದೆ.  ಇದು ನಾಲ್ಕು ತಿಂಗಳ ಬೆಳೆ. ಬಿತ್ತನೆ ನಂತರ ಬೆಳೆಗೆ ಸಕಾಲಕ್ಕೆ ನೀರುಣ್ಣಿಸುವುದು, ಗೊಬ್ಬರ ಹಾಕಿ, ಕಳೆ ನಿರ್ವಹಣೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ, ಎಕರೆಗೆ ಕನಿಷ್ಠ 15 ರಿಂದ 17 ಕ್ವಿಂಟಲ್ ಇಳುವರಿ ಪಡೆಯ ಬಹುದಾಗಿದೆ.

ಸೂಕ್ತ ಬೆಲೆ ಸಿಕ್ಕರೆ ಎಕರೆಗೆ ಕನಿಷ್ಠ 60 ರಿಂದ 70 ಸಾವಿರ ಲಾಭ ಗಳಿಸ ಬಹುದು. ಆದರೆ, ಹುಳಗಳ ಬಾಧೆ ನಿಯಂತ್ರಣಕ್ಕೆ ಬಾರ ದಿರುವುದರಿಂದ ಖರ್ಚು ಸಹ ಸಿಗುವ ನಂಬಿಕೆ ಇಲ್ಲ ಎಂದು ಮಲ್ಲಪ್ಪ ಸಂಗನಾಳ ಕಣ್ಣೀರಿಟ್ಟರು.ಹುಳ ನಿಯಂತ್ರಿಸಲು ಔಷಧವನ್ನು ಹೊಟ್ಟು ಮತ್ತು ಬೆಲ್ಲದೊಂದಿಗೆ ಬೆರೆಸಿ, ನಾಲ್ಕು ದಿನಗಳ ಕಾಲ ಹಾಗೆಯೇ ಇಡಬೇಕು. ಈ ಮಿಶ್ರಣ ದಿಂದ ದುರ್ವಾಸನೆ ಹೊರಡುತ್ತದೆ. ಅದನ್ನು ಸೂರ್ಯ ಮುಳುಗಿದ ನಂತರ  ಹೊಲದ ತುಂಬೆಲ್ಲಾ ಹಾಕಬೇಕು.

ಈ ವಿಷದ ತಿಂಡಿಯನ್ನು ರಾತ್ರಿ ಇಡೀ ತಿಂದು ಹುಳುಗಳು ಸಾಯುತ್ತವೆ.  ರೈತರು ಇದನ್ನು ರಾತ್ರಿ ಹೊತ್ತು ಪ್ರಯೋಗ ಮಾಡದ ಕಾರಣ ನಿಯಂತ್ರಣಕ್ಕೆ ಬಂದಿಲ್ಲ ಎಂದು ತಾಲ್ಲೂಕು ಕೃಷಿ ನಿರ್ದೇಶಕ ಎಸ್.ಎ.ಸೂಡಿಶೆಟ್ಟರ್  ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry