ಸೋಮವಾರ, ನವೆಂಬರ್ 18, 2019
23 °C

ಶೇಕಡಾವಾರು ಸಾಂಸ್ಕೃತಿಕ ರಾಜಕಾರಣ ಮತ್ತು ವಚನಗಳು

Published:
Updated:

ಈ ಲೇಖನ ರಾಜಾರಾಮ ಹೆಗಡೆ ಅವರ  `ವಚನ ಚಳವಳಿಗಳ ಸೈದ್ಧಾಂತಿಕ ಹಿನ್ನೆಲೆಯ ಕುರಿತು...' ಲೇಖನಕ್ಕೆ ಪ್ರತಿಕ್ರಿಯೆ.ಮೊದಲು ಅವರು ವಚನಗಳ ಬಗ್ಗೆ ಏನು ಹೇಳಿದ್ದಾರೆ ಅನ್ನೋದನ್ನು ಪರಿಶೀಲಿಸೋಣ. ಅವರ ವಾದಗಳನ್ನು ಸ್ಥೂಲವಾಗಿ ಹೀಗೆ ಪಟ್ಟಿ ಮಾಡಬಹುದು:ಅ) ವಚನ ಸಾಹಿತ್ಯವು ಜಾತಿ ವಿರೋಧಿ ಎಂಬುದು ಸತ್ಯವಲ್ಲ.ಆ) ಜಾತಿ ವಿರೋಧಿ ಅಭಿಪ್ರಾಯವು ಪ್ರೊಟೆಸ್ಟಂಟ್ ಪೂರ್ವಗ್ರಹಗಳಿಂದ ಕೂಡಿರುವಂತದ್ದು,ಇ) ಈ ಪೂರ್ವಗ್ರಹಕ್ಕೆ ಪಾಶ್ಚಾತ್ಯರು ಉಂಟು ಮಾಡಿದ  ಜ್ಞಾನಧಾರೆಯೇ ಮುಖ್ಯ ಕಾರಣ,ಈ) ವಚನಗಳನ್ನು ಭಾರತೀಯ ಆಧ್ಯಾತ್ಮಿಕತೆಯ ಅಖಂಡತೆಯಲ್ಲಿ ನೋಡಿದರೆ ನಮ್ಮ ಪೂರ್ವಗ್ರಹಗಳು ಪರಿಹಾರವಾಗಿ ಬಿಡುತ್ತವೆ,ಉ) ವಚನಗಳು ಹೊರಸೂಸುವ ಆಧ್ಯಾತ್ಮಿಕತೆಯನ್ನ ನಾವು ಸಾಮಾಜಿಕ ಚಳವಳಿಗಳೆಂದು ತಿಳಿದುಕೊಳ್ಳುವುದು ತಪ್ಪು. ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದಿದ್ದರೆ ನಾವು ಪ್ರೊಟೆಸ್ಟಂಟ್ ಪೂರ್ವಗ್ರಹಗಳಿಂದ ಹೊರ ಬರಲು ಸಾಧ್ಯವಿಲ್ಲ ಎಂದು ಅವರು ಘೋಷಿಸಿದ್ದಾರೆ. ಬಾಲಗಂಗಾಧರ ಮತ್ತು ಡಂಕಿನ್ನರು `ಚಿಂತನ ಬಯಲು' ಎಂಬ ಪತ್ರಿಕೆಯಲ್ಲಿ ಇತ್ತೀಚೆಗೆ ವಚನಗಳ ಬಗ್ಗೆ ಲೇಖನವನ್ನು ಪ್ರಕಟಿಸಿ ಬಹುತೇಕ ಹೆಗಡೆಯ ತರಹದ ವಾದಗಳನ್ನು ಮಂಡಿಸಿದ್ದಾರೆ.ಈ ಮೂವರಲ್ಲಿ ಸಮಾನವಾಗಿ ಕಾಣುವ ಮತ್ತೊಂದು ಅಂಶ ಶೇಕಡಾವಾರು  ವಾದ (ಅಂದರೆ ಶೇಕಡಾ ಇಷ್ಟು ವಚನಗಳು ಇದನ್ನು ಹೇಳುತ್ತವೆ; ಶೇಕಡಾ ಅಷ್ಟು ವಚನಗಳು ಅದನ್ನು ಹೇಳುತ್ತವೆ ಎಂಬ ಅಂಕಿ ಅಂಶಗಳ ವಾದ). ಈ ಮೂವರಲ್ಲಿಯೂ (ಇವರ ಜೊತೆ ಎಚ್.ಎಸ್. ಶಿವಪ್ರಕಾಶರನ್ನು ಸೇರಿಸಬಹುದೇನೋ) ಏಕ ವಾದಗಳು ಕಾಣಿಸುತ್ತಿರುವುದರಿಂದ ಇವರೆಲ್ಲರನ್ನು ಕುರಿತು ನನ್ನ ಕೆಲವು ವಾದಗಳನ್ನು ಇಲ್ಲಿ ಮಂಡಿಸಲು ಇಷ್ಟ ಪಡುತ್ತೇನೆ.ವಚನ ಸಾಹಿತ್ಯವು ಜಾತಿ ವಿರೋಧಿ ಅಲ್ಲ ಅನ್ನುವ ವಾದಕ್ಕೆ ನಾನು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಅನಿಸುತ್ತೆ. ಏಕೆಂದರೆ ಈಗಾಗಲೇ ಇಂತಹ ವಾದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಹಾಗಾಗಿ ಮಿಕ್ಕ ವಿಷಯಗಳನ್ನ ನಾವು ನೋಡಬಹುದು.ಈ ಮೂವರ ಬಗ್ಗೆ ನನಗೆ ಇರುವ ಮೊದಲ ಅನುಮಾನವೇನೆಂದರೆ ಇವರು ವಸಾಹತುಶಾಹಿ, ಅದು ಹುಟ್ಟಿ ಹಾಕಿದ ಪ್ರೊಟೆಸ್ಟಂಟ್ ಪರಿಕಲ್ಪನೆ ಮತ್ತು ಅದು ಆಧುನಿಕ ವಚನ ಅಧ್ಯಯನಗಳ (20ನೇ ಶತಮಾನದ ಮೊದಲ ಅರ್ಧ ಭಾಗದಲ್ಲಿ ಉಂಟಾದ ಅಧ್ಯಯನಗಳು) ಜೊತೆಗೆ ಯಾವ ಬಗೆಯ ಸಂಬಂಧವನ್ನು ಹೊಂದಿತ್ತು ಎಂಬ ವಿಷಯದ ಬಗ್ಗೆ ಯಾವುದೇ ಆರ್ಕೈವಲ್ ಅಧ್ಯಯನಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆಯೆ ಎಂಬುದರ ಬಗ್ಗೆ ಇದೆ. ಇವರ ವಾದಗಳನ್ನು ಗಮನಿಸಿದರೆ ಈ ಮೂವರು ಕೆಲವೊಂದು ಸರಳೀಕೃತ ಮತ್ತು ಸ್ವೀಪಿಂಗ್ ಹೇಳಿಕೆಗಳನ್ನು ಮಾತ್ರ ನೀಡುತ್ತಿದ್ದಾರೆ. ಲಿಂಗಾಯತ ಅಥವಾ ವಚನಗಳ ಆಧುನಿಕ ಇತಿಹಾಸದ ಸಂಕೀರ್ಣತೆಯ ಬಗ್ಗೆ ಇವರಿಗೆ ಎಳ್ಳಷ್ಟು ಜ್ಞಾನವಿದ್ದಿದ್ದರೆ ತಮ್ಮ ವಾದಗಳನ್ನು ಮಾಡುವ ಮೊದಲು ನೂರಾರು ಬಾರಿ ಯೋಚಿಸುತ್ತಿದ್ದರೇನೊ! ವಸಾಹತುಶಾಹಿ ಕಾಲದ ಆಧುನಿಕ ವಚನ ಅಧ್ಯಯನದ ಕೆಲವು ಝಲಕುಗಳನ್ನು ನಾವು ಈ ರೀತಿ ಗಮನಿಸಬಹುದು:ಅ) ಪ್ರೊಟೆಸ್ಟಂಟ್ ಪರಿಕಲ್ಪನೆಯನ್ನು ವಚನಗಳಿಗೆ ಬಂಧಿಸುವ ಮೊದಲು ಈ ಪರಿಕಲ್ಪನೆಯ ಬಗ್ಗೆ ಲಿಂಗಾಯತ ವಿದ್ವಾಂಸರಲ್ಲೇ ಒಮ್ಮತಗಳಿರಲಿಲ್ಲ. ಪಾಶ್ಚಾತ್ಯರು ವಚನಗಳನ್ನು ಅಧ್ಯಯನ ಮಾಡುವ ಮೊಲೇ ಲಿಂಗಾಯತ ವಿದ್ವಾಂಸರು ವಚನಗಳ ಬಗ್ಗೆ ಸ್ಥಳೀಯ ತಾತ್ವಿಕ ಜ್ಞಾನ ಧಾರೆಗಳಿಗೆ ಸಂವಾದಿಯಾಗಿಯೋ, ವಿರುದ್ಧವಾಗಿಯೋ ಅಥವಾ ಪರ್ಯಾಯವಾಗಿಯೋ ಅಧ್ಯಯನಗಳನ್ನು ಕೈಗೊಂಡರು. ವಚನಗಳನ್ನು ಮೊದಲ ಬಾರಿಗೆ ಆಧುನಿಕ ಪರಿಭಾಷೆಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟ ಹಳಕಟ್ಟಿಯವರ ಮೊದಲ ವಚನ ಸಂಕಲನವಾದ  `ವಚನ ಶಾಸ್ತ್ರ ಸಾರ'  (1923)ದಲ್ಲಿ ಇರುವ ಮುನ್ನುಡಿಗಳೇ ಇದಕ್ಕೆ ಸಾಕ್ಷಿ.ಆ) ಮೊದಲಿಗೆ ಪ್ರೊಟೆಸ್ಟಂಟ್ ಪರಿಕಲ್ಪನೆಯನ್ನು ಲಿಂಗಾಯತರ ಸಂಸ್ಕೃತಿಗೆ/ಸಾಹಿತ್ಯಕ್ಕೆ ಬಳಸಿದ್ದು  ಪಾಶ್ಚಾತ್ಯರಾದರೂ ಅದು ವಚನಗಳನ್ನು ಗಮನಿಸಿ ಮಾಡಿದ ಹೋಲಿಕೆಯಲ್ಲ ಅಥವಾ ವರ್ಣನೆಯಲ್ಲ. ಲಿಂಗಾಯತ ಪುರಾಣಗಳನ್ನು ಅಧ್ಯಯನ ಮಾಡಿ ಕಂಡುಕೊಂಡ ವಿಚಾರ. ಪಾಶ್ಚಾತ್ಯ ವಿದ್ವಾಂಸ ಸಿ.ಪಿ.ಬ್ರೌನ್ (1860ರ ಸುಮಾರು) ಇದಕ್ಕೆ ಸಾಕ್ಷಿ. ಇವನು ಕಂಡುಕೊಂಡ `ಸತ್ಯ'ವನ್ನು ಪಾಶ್ಚಾತ್ಯರಾಗಲಿ, ಸ್ಥಳೀಯ ವಿದ್ವಾಂಸರಾಗಲಿ ಒಪ್ಪಿಕೊಂಡರೆ? ಖಂಡಿತ ಇಲ್ಲ. ಡಬ್ಲ್ಯು. ಎ. ವುರ್ತ್ ಎಂಬ ಪಾಶ್ಚಾತ್ಯ ಮಿಷಿನರಿ (ಬ್ರೌನನ ಸಮಕಾಲೀನ) ಬ್ರೌನ್‌ನ ವಾದವನ್ನು ಒಪ್ಪಲೇ ಇಲ್ಲ. ನಂತರ ಬಂದ ಸಂಸ್ಕೃತ ಮತ್ತು ವರ್ಣಾಶ್ರಮ-ಪರವಾಗಿರುವ ಲಿಂಗಾಯತ/ಬ್ರಾಹ್ಮಣರು ಕೂಡ ಇದನ್ನು ಒಪ್ಪಲಿಲ್ಲ. ಅನೇಕ ವಾದವಿವಾದಗಳಾದವು. ಈ ವಾದ, ವಿವಾದಗಳ ಐತಿಹಾಸಿಕ ಸೂಕ್ಷ್ಮತೆ ಮತ್ತು ಸಂಕೀರ್ಣತೆಯನ್ನು ಈ ಮೂವರೂ ಗಮನಿಸದೆ ವಚನಗಳ ಬಗ್ಗೆ ಮಾತನಾಡುವುದು ಪ್ರಿ-ಮೆಚುರ್ ಅಂತ ನನ್ನ ಭಾವನೆ.ಇ) ಭಾರತೀಯ ಆಧ್ಯಾತ್ಮಿಕ ಪರಂಪರೆಯ ಹಿನ್ನೆಲೆಯಲ್ಲಿ ವಚನಗಳನ್ನು ನೋಡಬೇಕಾದರೆ ಯಾವುದೀ ಆಧ್ಯಾತ್ಮಿಕ ಪರಂಪರೆ ಎಂಬ ಶಂಕೆ ಮೂಡುತ್ತದೆ. ಅವುಗಳು ಅನಾದಿ ಕಾಲದಿಂದಲೂ ಇದ್ದ ಹಾಗೆ ಮುಂದುವರೆದವೇ? ಬದಲಾವಣೆಗಳಾಗಲೇ ಇಲ್ಲವೆ? ಜೈನ, ಬೌದ್ಧ, ವೇದ, ಉಪನಿಷತ್, ಆಗಮ ಇತ್ಯಾದಿಗಳ ಪರಂಪರೆಗಳು ಸದಾ ಕಾಲ ಒಂದೇ ತೆರನಾಗಿರಲಿಲ್ಲ. ಕಾಲ, ಕಾಲಕ್ಕೆ ಬದಲಾಗುತ್ತಾ ಬಂದವು. ಹೀಗಾಗಿ ಈ ಮೂವರು ವಾದಿಸುವ ಆಧ್ಯಾತ್ಮಿಕ ಅಖಂಡತೆಯ ಪರಂಪರೆಯ ಬಗ್ಗೆ ನಮಗೆ ಅನೇಕ ಬಗೆಹರಿಸಲಾಗದ ಸಮಸ್ಯೆಗಳು ಉಂಟಾಗುತ್ತವೆ.ಈ) ಈ ಮೂವರು ಹೇಳುವ ಆಧ್ಯಾತ್ಮಿಕ ಪರಂಪರೆಯ ಅಖಂಡತೆಯಲ್ಲಿ ವಚನಗಳನ್ನು ನೋಡಬೇಕು ಎನ್ನುವ ವಾದ ಹೊಸದೇನಲ್ಲ. ಈ ಮೂವರು ತಾವೇನೋ ಹೊಸತನ್ನು ಹೇಳುತ್ತಿದ್ದೇವೆ ಅನ್ನುವ ಭ್ರಮೆಯಲ್ಲಿದ್ದಾರೆ. ವಚನಗಳ ಬಗ್ಗೆ ಇದುವರೆಗೂ ಬಂದಿರುವ ವಿಮರ್ಶೆ, ಪುಸ್ತಕಗಳು, ಸಂಕಲನಗಳು ಮತ್ತು ಟೀಕೆಗಳ ಇತಿಹಾಸವನ್ನು ಅವರು ಸ್ವಲ್ಪ ಬಗೆಯಲಿ. ತಮ್ಮ ವಾದದ ಮಿತಿಗಳು ಅವರಿಗೆ ಅರಿವಾಗುವುವು. ಹಳಕಟ್ಟಿಯವರೇ ಅನೇಕ ತಾತ್ವಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳನ್ನು ಅಭ್ಯಸಿಸಿ ವಚನಗಳನ್ನು ಹೋಲಿಸಿ, ಸಮಾಂತರ ಅಂಶಗಳು ಮತ್ತು ವಿರೋಧಾತ್ಮಕ ಅಂಶಗಳನ್ನು ಹೆಕ್ಕಿ ತೆಗೆದಿದ್ದಾರೆ. ಅವರು ತಮ್ಮ ಮೊದಲ ವಚನ ಸಂಕಲನದಲ್ಲಿ ವಚನ ಚಳವಳಿಯನ್ನು `ಭಕ್ತಿ' ಚಳವಳಿ ಅಂತಾಗಲಿ ಅಥವಾ  `ಪ್ರೊಟೆಸ್ಟಂಟ್' ಚಳವಳಿ ಎಂತಾಗಲಿ ಭಾವಿಸಲೇ ಇಲ್ಲ. ವೇದ, ಉಪನಿಷತ್ತು, ಆಗಮ ವಿಚಾರಗಳನ್ನು ಸರಳ ಕನ್ನಡದ ವಚನಗಳಲ್ಲಿ ಕಾಣುವುದನ್ನು ಅವರು ಶ್ಲಾಘಿಸುತ್ತಾರೆ. ಜೊತೆಗೆ ಶಂಕರಾಚಾರ್ಯ ಮತ್ತು ಅವರ `ಯುಕ್ತಿ-ಕುಯುಕ್ತಿ'ಗಳಿಂದ ಹಿಂದು ಧರ್ಮಕ್ಕೆ ಆದ ಹಾನಿಯನ್ನು ಸಹ ಬಯಲಿಗೆಳೆದಿದ್ದಾರೆ. ಉ) ವಚನ ಚಳವಳಿಯನ್ನು ಸಾಮಾಜಿಕ ಚಳವಳಿ ಅಂತ ಕರೆಯಬಹುದೋ, ಇಲ್ಲವೋ ಎಂಬ ವಾದ ಇಲ್ಲಿ ಮುಖ್ಯ ಅಲ್ಲ. ವಚನಗಳನ್ನು ಉಪಯೋಗಿಸಿಕೊಂಡು ಅನೇಕ ಕೆಳ ಜಾತಿಯ ಮತ್ತು ಕೆಳ ವರ್ಗದ ಜನ ಮೇಲ್ವರ್ಗದ/ಮೇಲ್ಜಾತಿಯಲ್ಲಿ (ವಿಶೇಷವಾಗಿ ಬ್ರಾಹ್ಮಣರು ಮತ್ತು ಕೆಲವು ಲಿಂಗಾಯತ ಪಂಗಡಗಳು) ಕಾಣುವ ಪೌರೋಹಿತ್ಯಶಾಹಿ ಧೋರಣೆಯನ್ನು ಖಂಡಿಸಲು ಬಳಸಿದ್ದಾರೆ. ಇದಕ್ಕೆ ಕರ್ನಾಟಕದಲ್ಲಿ ಅನೇಕ ಉದಾಹರಣೆಗಳಾಗಿವೆ. ಈ ಮೂವರು ಹೇಳುವ ಆಧ್ಯಾತ್ಮಿಕ ಅಖಂಡತೆಯಲ್ಲಿ ಮಾತ್ರ ವಚನಗಳನ್ನು ಅಧ್ಯಯನ ಮಾಡುವುದಾದರೆ ಆಧುನಿಕ ಕಾಲದ ಸಾಮಾಜಿಕ ಚಳವಳಿ ಮತ್ತು ಅವು ಪ್ರತಿಪಾದಿಸುವ ಆದರ್ಶ ಸಮಾಜದ ಅಡಿಪಾಯವನ್ನೆ ಬುಡ ಮೇಲಾಗಿಸುವ ಅಪಾಯವಿರುತ್ತದೆ.ಊ)  `ಈ ಮೂವರು ಯಾವುದೋ ಹೊಸ ವಿಚಾರವನ್ನು ಹೇಳುತ್ತಿದ್ದಾರೆ; ನಾವು ಅವರನ್ನು ಕಿವಿಗೊಟ್ಟು ಕೇಳಬೇಕು; ಭಾವೋದ್ವೇಗದಿಂದ ವರ್ತಿಸಬಾರದು' ಎಂದು ಅಭಿಪ್ರಾಯ ಪಟ್ಟಿರುವ ಎಚ್.ಎಸ್. ಶಿವಪ್ರಕಾಶರಿಗೂ ಸಹ ವಸಾಹತುಶಾಹಿ ಕಾಲದಲ್ಲಿ ಲಿಂಗಾಯತ ಸಾಹಿತ್ಯ, ಸಂಸ್ಕೃತಿ ಮತ್ತು ವಚನಗಳ ಬಗ್ಗೆ ಆದ ಸಮುದ್ರ ಮಂಥನದ ಇತಿಹಾಸದ ಅರಿವು ಇದ್ದ ಹಾಗೆ ಇಲ್ಲ. ಹಾಗಾಗಿ ಈ ಮೂವರನ್ನು ಬೌದ್ಧಿಕವಾಗಿ ಅಪ್ಪಿಕೊಳ್ಳುವ ಉತ್ಸಾಹದಲ್ಲಿ ಶಿವಪ್ರಕಾಶರು ಎಡವುತ್ತಿದ್ದಾರೆಂದು ನನ್ನ ಅಭಿಪ್ರಾಯ.ಒಟ್ಟಾರೆಯಾಗಿ ಹೇಳುವುದಾದರೆ ಈ ಮೂವರು ಮತ್ತು ಅವರ ಜೊತೆ ನಾವು ಬೌದ್ಧಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳುವ ಶಿವಪ್ರಕಾಶರು ಇತಿಹಾಸಕ್ಕೆ ಬೆನ್ನು ಮಾಡಿ ನಿಂತಿದ್ದಾರೆ. ಇತಿಹಾಸದಲ್ಲಿ ಆದ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ಅದರ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಫಲಪ್ರದದಾಯಕವಾದ ಕೊಡುಗೆಯನ್ನು ನೀಡುವ ಧ್ಯೇಯ, ಉದ್ದೇಶಗಳು ಇವರಲ್ಲಿ ಇಲ್ಲ ಅಂತ ಹೇಳಬಹುದು.ಕರ್ನಾಟಕ ಇತಿಹಾಸ, ಸಂಸ್ಕೃತಿ ಮತ್ತು ವಚನ ಸಾಹಿತ್ಯದ ಬಗ್ಗೆ ಸಾರಾಸಗಟು ಮತ್ತು ಉಡಾಫೆಗಳಿಂದ ಕೂಡಿದ ಈ ಮೂವರ ಅಭಿಪ್ರಾಯಗಳು ಇತಿಹಾಸವನ್ನು ಸಂಪೂರ್ಣವಾಗಿ (ಉದ್ದೇಶಪೂರ್ವಕವಾಗಿಯೋ, ಏನೋ) ಮರೆಯುವ ಅಥವಾ ತಿರುಚುವ ಪ್ರಯತ್ನಗಳಾಗಿವೆ ಎಂದು ಹೇಳಬಹುದು.ಭಾರತದ ಧರ್ಮ ಮತ್ತು ಜಾತಿಗಳು ಪಾಶ್ಚಾತ್ಯರ/ವಸಾಹತುಶಾಹಿಯ ಬಳುವಳಿಗಳೆಂದು, ಅವುಗಳ ಪರಿಧಿಯೊಳಗೆ ನೋಡುವ ಅಥವಾ ಪರಿಭಾವಿಸುವ ವಚನಗಳು ತಪ್ಪು ಅರ್ಥಕ್ಕೆ ಒಳಗಾಗಿವೆಯೆಂದು ಘೋಷಿಸುವ ಈ ಮೂವರ  ಅಂತಿಮ ಉದ್ದೇಶದ ಬಗ್ಗೆ ದಟ್ಟವಾದ ಅನುಮಾನ ಓದುಗರ ಮನಸ್ಸಿನಲ್ಲಿ ಸುಳಿದರೆ ಅಚ್ಚರಿಯೇನಲ್ಲ. ವಚನಕಾರರು ಈಗ ಬದುಕಿದ್ದರೆ ಈ ಮೂವರ  `ಶೇಕಡಾವಾರು ಸಾಂಸ್ಕೃತಿಕ ರಾಜಕಾರಣ'ಕ್ಕೆ ತಲೆಬಾಗುತ್ತಿದ್ದರೊ ಅಥವಾ ತಲೆ ಚಚ್ಚಿಕೊಳ್ಳುತ್ತಿದ್ದರೋ ಗೊತ್ತಿಲ್ಲ!

 

ಪ್ರತಿಕ್ರಿಯಿಸಿ (+)