ಶೇಕ್ಸ್‌ಪಿಯರ್ ಗೌರವಾರ್ಥ ನಾಟಕೋತ್ಸವ

7

ಶೇಕ್ಸ್‌ಪಿಯರ್ ಗೌರವಾರ್ಥ ನಾಟಕೋತ್ಸವ

Published:
Updated:

ಬೆಂಗಳೂರು: `ಜಗತ್ತಿನ ಅತ್ಯುತ್ತಮ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಗೌರವಾರ್ಥ ನಾಟಕೋತ್ಸವವನ್ನು ಅ. 27 ರಿಂದ ನ. 11 ರ ವರೆಗೆ ರಂಗಶಂಕರದಲ್ಲಿ ಏರ್ಪಡಿಸಲಾಗಿದೆ~ ಎಂದು ರಂಗಶಂಕರದ ಸಂಸ್ಥಾಪಕ ಅಧ್ಯಕ್ಷೆ ಅರುಂಧತಿನಾಗ್ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನಾಟಕೋತ್ಸವದಲ್ಲಿ ದಕ್ಷಿಣ ಸೂಡಾನ್, ಕೀನ್ಯ, ಜಾರ್ಜಿಯಾ, ಬಾಂಗ್ಲಾದೇಶ ಮತ್ತು ಭಾರತೀಯ ನಾಟಕ ತಂಡಗಳು ಭಾಗವಹಿಸಲಿವೆ. ಎಂಟು ಭಾಷೆಗಳಲ್ಲಿ ಇಂಗ್ಲಿಷ್ ಉಪ ಶೀರ್ಷಿಕೆಗಳ (ಸಬ್ ಟೈಟಲ್ಸ್) ಸಹಿತ ಆರು ನಾಟಕಗಳು ಪ್ರದರ್ಶನಗೊಳ್ಳಲಿವೆ~ ಎಂದರು.`ಜಗತ್ತಿನ ಅತ್ಯುತ್ತಮವಾದ ಆರು ನಾಟಕ ತಂಡಗಳು ಶೇಕ್ಸ್‌ಪಿಯರ್‌ನ ನಾಟಕಗಳನ್ನು ಮೊಟ್ಟಮೊದಲಬಾರಿಗೆ ಭಾರತದಲ್ಲಿ ಹಾಗೂ ಬೆಂಗಳೂರಿನಲ್ಲಿ ಪ್ರದರ್ಶಿಸಲಿವೆ. ಆರೂ ನಾಟಕಗಳು ಲಂಡನ್ನಿನ ಶೇಕ್ಸ್‌ಪಿಯರ್ ಗ್ಲೋಬ್‌ನಲ್ಲಿ ಇತ್ತೀಚೆಗೆ ನಡೆದ ಗ್ಲೋಬ್ ಟು ಗ್ಲೋಬ್ ನಾಟಕೋತ್ಸವದ ಭಾಗವಾಗಿದ್ದವು. ಲಂಡನ್ನಿನ ಖ್ಯಾತ ವಿಮರ್ಶಕರು ಅವುಗಳನ್ನು ಮೆಚ್ಚಿ ಐದು ನಕ್ಷತ್ರದ ಮನ್ನಣೆ ನೀಡಿದ್ದಾರೆ~ ಎಂದು ಹೇಳಿದರು.`ಕಲೆ, ನಾಟಕ, ರಸಗ್ರಹಣ ಶಿಬಿರಗಳು ನಡೆಯಲಿವೆ. ಈ ಶಿಬಿರಗಳಲ್ಲಿ ನಾಟಕದ ಸೂಕ್ಷ್ಮತೆಗಳನ್ನು ಶಿಬಿರಾರ್ಥಿಗಳಿಗೆ ನೀಡಲಾಗುವುದು. ಸಂಸ್ಕೃತಿ ವಿಮರ್ಶಕ ಸದಾನಂದ ಮೆನನ್ ಅವರು ರಂಗ ಮತ್ತು ಕಲಾರಸಗ್ರಹಣ ಶಿಬಿರವನ್ನು ನಡೆಸಿಕೊಡಲಿದ್ದಾರೆ.

 

ಗಿರೀಶ್ ಕಾರ್ನಾಡ್, ಅಶೋಕ್ ವಾಜಪೇಯಿ, ಗಿರೀಶ್ ಕಾಸರವಳ್ಳಿ, ಎಸ್.ಜಿ. ವಾಸುದೇವ್, ಉದಯ್ ಭವಾಲ್ಕರ್, ಲಿನ್ ಫರ್ನಾಂಡಿಸ್, ಸುರೂಪ್ ಸೇನ್, ಬಿಜಯಿನಿ ಸತ್ಪತಿ, ಅನ್ಮೋಲ್ ವೆಲ್ಲಾನಿ ಅವರುಗಳು ತಮ್ಮ ಉಪನ್ಯಾಸ, ವಿಡಿಯೋ ಮತ್ತು ಸೃಜನಾತ್ಮಕ ಪ್ರಕ್ರಿಯೆಗಳ ಮೂಲಕ ಚರ್ಚೆ ಸಹಿತ ಆಕರ್ಷಕ ತರಗತಿಗಳನ್ನು ನಡೆಸಲಿದ್ದಾರೆ. ಶಿಬಿರಾರ್ಥಿಗಳು ನಾಟಕಗಳನ್ನು ನೋಡಿ ತಂಡಗಳೊಂದಿಗೆ ಸಂವಾದವನ್ನು ನಡೆಸಲಿದ್ದಾರೆ. ಶಿಬಿರಾರ್ಥಿಗಳಾಗಲು ಇನ್ನು ಕೆಲವು ಸೀಟುಗಳು ಲಭ್ಯವಿವೆ~ ಎಂದು ಹೇಳಿದರು.`ಕನ್ನಡದ ನಟರಾದ ಶ್ರೀನಿವಾಸ ಪ್ರಭು ಮತ್ತು ಲಕ್ಷ್ಮಿ ಚಂದ್ರಶೇಖರ್ ಅವರು ಹ್ಯಾಮ್ಲೆಟ್ ಮತ್ತು ಲೇಡಿ ಮ್ಯಾಕ್‌ಬೆತ್‌ನ ಏಕ ಪಾತ್ರಾಭಿನಯವನ್ನು ಅ.31 ರಂದು ಸಂಜೆ 7.30 ಕ್ಕೆ ಪ್ರದರ್ಶಿಸಲಿದ್ದಾರೆ~ ಎಂದು ನುಡಿದರು.`ಶೇಕ್ಸ್‌ಪಿಯರ್‌ನ ಸಾನೆಟ್ ಕನ್ನಡ ಕಾವ್ಯ ಜಗತ್ತಿಗೆ ನೀಡಿದ ಕಾಣಿಕೆಯನ್ನು ಕುರಿತಂತೆ `ಸುನೀತ ಸಂಭ್ರಮ~ ಕಾರ್ಯಕ್ರಮವು ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಚಿತ್ರ ಪ್ರದರ್ಶನ, ಉಪನ್ಯಾಸ, ಚರ್ಚೆ, ಸಂಗೀತ, ನಾಟಕ, ನೃತ್ಯ ರೂಪಾಂತರಗಳಲ್ಲಿ  ಸುನೀತ ಮತ್ತು ಸಾನೆಟ್ ಕುರಿತಾದ ಕಾರ್ಯಕ್ರಮವು ನಡೆಯಲಿದೆ~ ಎಂದು ಹೇಳಿದರು.`ವಿಶಾಲ್ ಭಾರದ್ವಾಜ್ ನಿರ್ದೇಶಿಸಿರುವ ಮ್ಯಾಕ್‌ಬೆತ್ ಆಧಾರಿತ ಮಕ್ಬೂಲ್ ಚಲನಚಿತ್ರದ ಪ್ರದರ್ಶನವೂ ನಡೆಯಲಿದೆ. ರಂಗ ಪ್ರತಿಭೆಗಳು ಶೇಕ್ಸ್‌ಪಿಯರ್‌ನ ಸಾನೆಟ್‌ಗಳ ವಾಚನ ಮಾಡಲಿದ್ದಾರೆ. ಬೆಂಗಳೂರಿನ ತಂಡಗಳು ಶೇಕ್ಸ್‌ಪಿಯರ್‌ನ ಅತ್ಯಂತ ಪ್ರಸಿದ್ಧ ದೃಶ್ಯಗಳನ್ನು `ಮಚ್ ಅಡೋ~ ಎಂದು ಹೆಸರಿಡಲಾದ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಿದ್ದಾರೆ~ ಎಂದರು.`ಈ ನಾಟಕೋತ್ಸವಕ್ಕೆ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್, ಸಂಸ್ಕೃತಿ ಸಚಿವಾಲಯ, ಸಂಗೀತ ನಾಟಕ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ನಿರ್ದೇಶನಾಲಯ, ಸರ್ಕಾರದಿಂದ ಉತ್ಸವಕ್ಕೆ ಒಳ್ಳೆಯ ಬೆಂಬಲವು ವ್ಯಕ್ತವಾಗಿದೆ~ ಎಂದು ಹೇಳಿದರು.ಗೋಷ್ಠಿಯಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್ ಭಾಗವಹಿಸಿದ್ದರು. ಟಿಕೆಟ್‌ಗಳು ರಂಗಶಂಕರದಲ್ಲಿ 200 ರೂಪಾಯಿಗಳಿಗೆ ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಗೆ: indianstage.in ಅಥವಾ bookmyshow.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry