ಶೇ 100ರಷ್ಟು ಫಲಿತಾಂಶ ಶಾಲೆಗಳಿಗೆ ಪ್ರೋತ್ಸಾಹ ಧನ

7
ತೀರ್ಥಹಳ್ಳಿ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಕಿಮ್ಮನೆ ರತ್ನಾಕರ ಹೇಳಿಕೆ

ಶೇ 100ರಷ್ಟು ಫಲಿತಾಂಶ ಶಾಲೆಗಳಿಗೆ ಪ್ರೋತ್ಸಾಹ ಧನ

Published:
Updated:
ಶೇ 100ರಷ್ಟು ಫಲಿತಾಂಶ ಶಾಲೆಗಳಿಗೆ ಪ್ರೋತ್ಸಾಹ ಧನ

ತೀರ್ಥಹಳ್ಳಿ: ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮುಂದಿನ ಏಪ್ರಿಲ್ ವೇಳೆಗೆ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.ಅವರು ಬುಧವಾರ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಶಿಕ್ಷಕರ ದಿನಾಚರಣಾ ಸಮಿತಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗುವ ಅವಕಾಶ ನಿರ್ಮಾಣ ಮಾಡಲು ನಿಯಮ ರೂಪಿಸಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹುಟ್ಟಿದ ಊರಿನಲ್ಲಿಯೇ ಈ ಕೆಲಸ ನಿರ್ವಹಿಸುವಂತಾಗಬಾರದು. ಇದಕ್ಕೆ ಹೊಸ ಆಯಾಮ ತರುವ ಪ್ರಯತ್ನ ಮಾಡಲಾಗುವುದು ಎಂದರು.ಪ್ರತಿಯೊಬ್ಬರಲ್ಲಿಯೂ ಮಗುವಿನ ಮನಸ್ಸಿರಬೇಕು.  ಶಾಲೆಯನ್ನು ಒಂದು ದೇವಸ್ಥಾನ, ಪ್ರಾರ್ಥನಾ ಮಂದಿರ ಎಂದು ಭಾವಿಸಿ ಒಳ್ಳೆಯದನ್ನು ಹೇಳಿಕೊಡಬೇಕು. ನಮ್ಮ ಮಕ್ಕಳು ಕಾಲಿಗೆ ಚಪ್ಪಲಿ ಇಲ್ಲದೇ ಶಾಲೆಗೆ ನಡೆದುಕೊಂಡು ಹೋಗುತ್ತಾರೆ. ರಾಜ್ಯದಲ್ಲಿ ಶೇ 80 ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಿಗೆ ಹೋಗುತ್ತಾರೆ. 1 ರಿಂದ 12ನೇ ತರಗತಿ ವರೆಗೆ 1 ಕೋಟಿ ಮಕ್ಕಳಿದ್ದಾರೆ. ಇವರಿಗೆ ಮೂಲ ಸೌಕರ್ಯ ಒದಗಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದರು.ಇನ್ನು 2 ವರ್ಷದ ಅವಧಿಯೊಳಗೆ ಖಾಸಗಿ ಶಾಲೆಗೆ ಹೋಗುವ ಮಕ್ಕಳೂ ಕೂಡ ಸರ್ಕಾರಿ ಶಾಲೆಗೆ ಬರುವಂಥಹ ವಾತಾವರಣ ನಿರ್ಮಾಣ ಮಾಡಲಾಗುವುದು. ಬಡ ಮಕ್ಕಳಿಗೆ ಶಿಕ್ಷಣ ಕೊಡದೇ ಇದ್ದರೆ ನಾವು ನಾಗರಿಕ ಸರ್ಕಾರ, ದೇಶ ಎಂದೆನಿಸಿಕೊಳ್ಳಲು ಸಾಧ್ಯವಿಲ್ಲ. ಜಾತಿ, ವರ್ಗ, ಮೇಲು. ಕೀಳು ನಮ್ಮ ಕಲ್ಪನೆಯೇ ಹೊರತು ಮಕ್ಕಳಿಗಿಲ್ಲ. ಈ ಎಲ್ಲಾ ಗೋಡೆಗಳನ್ನು ಕಿತ್ತು ಹಾಕುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡಬೇಕು. ಮಕ್ಕಳ ಹೃದಯವನ್ನು ಒಗ್ಗೂಡಿಸಬೇಕು ಆಗ ನಾವು ಆಚರಿಸುವ ಶಿಕ್ಷಕ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದರು.ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಣದ ಗುಣ ಮಟ್ಟ ಕಡಿಮೆ ಇರುವುದು ನಮ್ಮೆಲ್ಲರಿಗೂ ಆಗುವ ಅವಮಾನ. ಇದನ್ನು ಉತ್ತಮ ಪಡಿಸಬೇಕು. ಎಸ್ಎಸ್ಎಲ್ ಸಿ ಯಲ್ಲಿ ಶೇ.100 ಫಲಿತಾಂಶ ಪಡೆಯುವ ಶಾಲೆಗಳಿಗೆ ಕನಿಷ್ಠ 50 ರಿಂದ 1 ಲಕ್ಷದ ವರೆಗೆ ಹಣ ಹಾಗೂ ಪ್ರಶಸ್ತಿ ನೀಡುವಂತೆ ಪ್ರೋತ್ಸಾಹ ನೀಡಲು ಯೋಚಿಸಲಾಗಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಗಂಭೀರವಾದದ್ದು ಎಂದರು.ನಿವೃತ್ತ ಶಿಕ್ಷಕರನ್ನು ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ಜೀನಾವಿಕ್ಟರ್ ಡಿಸೋಜ ವಹಿಸಿದ್ದರು. ಡಾ.ಸರ್ಫ್ರಾಜ್ ಚಂದ್ರಗುತ್ತಿ ವಿಶೇಷ ಉಪನ್ಯಾಸ ನೀಡಿದರು.ಜಿ.ಪಂ. ಸದಸ್ಯರಾದ ಬಿ.ಎಸ್.ಯಲ್ಲಪ್ಪ, ಶ್ರುತಿ ವೆಂಕಟೇಶ್, ಹಾರೋಗೊಳಿಗೆ ಪದ್ಮನಾಭ್, ಟಿ.ಎಲ್.ಸುಂದರೇಶ್, ತಾ.ಪಂ. ಸದಸ್ಯರಾದ ಬಾಳೇಹಳ್ಳಿ ಪ್ರಭಾಕರ್, ಕೆಸ್ತೂರ್ ಮಂಜುನಾಥ್, ಭಾರತಿ ಸುರೇಶ್, ನಾಗರತ್ನಾ, ಚನ್ನವೀರಪ್ಪ, ರೇಣುಕಾ ನಾಗರಾಜ್, ತಹಶೀಲ್ದಾರ್ ಗಣೇಶಮೂರ್ತಿ, ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಆರ್. ಮಂಜಪ್ಪ, ಎಂ.ಪಿ ಧನಂಜಯ,  ನೌಕರರ ಸಂಘದ ಅಧ್ಯಕ್ಷ ಹೆಗ್ಗೋಡು ಕೃಷ್ಣಮೂರ್ತಿ, ಪ್ರಾಚಾರ್ಯ ಎಂ.ಕೆ. ಪ್ರಭಾಕರ್ ಹಾಜರಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಕೃಷ್ಣಮೂರ್ತಿ ಸ್ವಾಗತಿಸಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್.ಪುಟ್ಟಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry